ಜೆಡಿಎಸ್ ಶಾಸಕ ಶರಣಗೌಡ ಕಂದಕೂರ್, ಸಿಎಂ ಸಿದ್ದರಾಮಯ್ಯImage Credit source: google
ಬೆಂಗಳೂರು, ಏಪ್ರಿಲ್ 20: ರಾಜ್ಯದಲ್ಲಿ ಸಂಭವಿಸಿದ ದುರಂತಗಳ ಸಂತ್ರಸ್ತರಿಗೆ ಪರಿಹಾರ ನೀಡುವ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಗುರುಮಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ್ (Sharanagouda Kandakur)
ಇಂತಹದೊಂದು ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತಾಗಿ ಸಿಎಂ ಸಿದ್ದರಾಮಯ್ಯಗೆ (Siddaramaiah) ನೇರವಾಗಿ ಪತ್ರ ಬರೆದಿರುವ ಶಾಸಕ, ಮೈಸೂರಿನಲ್ಲಿ ಸಂಭವಿಸಿದ ದುರಂತಕ್ಕೆ ತಕ್ಷಣ ಸ್ಪಂದಿಸುವ ಸರ್ಕಾರ, ಕಲ್ಯಾಣ ಕರ್ನಾಟಕದ ಜನರ ಸಾವಿಗೆ ಕನಿಷ್ಠ ಸಂತಾಪವನ್ನೂ ಸೂಚಿಸುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಸಿಎಂಗೆ ಬರೆದ ಪತ್ರದಲ್ಲೇನಿದೆ?
ಮಾರ್ಚ್ 29ರಂದು ಯಾದಗಿರಿ ಜಿಲ್ಲೆಯ ಸುರಪೂರ ತಾಲೂಕಿನ ನಗನೂರು ಗ್ರಾಮದ ರೈತನ ಕೃಷಿ ಹೊಂಡದಲ್ಲಿ ಈಜಾಡಲು ಹೋಗಿ ಒಂದೇ ಕುಟುಂಬದ ನಾಲ್ವರು ಮಕ್ಕಳು ಮೃತಪಟ್ಟಿದ್ದರು. ಏಪ್ರಿಲ್ 17ರಂದು ಅದೇ ಸುರಪೂರ ತಾಲೂಕಿನ ಗೋಪಾಲಸ್ವಾಮಿ ದೇವಸ್ಥಾನದ ದರ್ಶನಕ್ಕೆ ಸಿರವಾರ ಗ್ರಾಮದ ಒಂದೇ ಕುಟುಂಬದ 9 ಜನರು ರಸ್ತೆ ಅಪಘಾತದಲ್ಲಿ ಸಜೀವ ದಹನಗೊಂಡಿದ್ದರು.
ಇದನ್ನೂ ಓದಿ: ಮೈಸೂರು: ಕಾವೇರಿ ನದಿಯಲ್ಲಿ 6 ಜನ ಜಲಸಮಾಧಿ; ದರ್ಗಾಕ್ಕೆ ಬಂದವರು ದುರಂತ ಅಂತ್ಯ
ಈ ದುರಂತಗಳು ಸಂಭವಿಸಿ ಸುಮಾರು ದಿನಗಳು ಕಳೆದರು ಸಹ ಮೃತಕುಟುಂಬಗಳಿಗೆ ಪರಿಹಾರಧನ ಘೋಷಣೆ ಮಾಡುವುದಾಗಲಿ ಅಥವಾ ಕನಿಷ್ಠ ಸಾಂತ್ವಾನ ತಿಳಿಸುವುದಾಗಲಿ ಇಲ್ಲಿಯವರೆಗೆ ಮಾಡಿಲ್ಲ. ಆದರೆ ಏಪ್ರಿಲ್ 19ರಂದು ನಿಮ್ಮ ಸ್ವಂತ ಮೈಸೂರು ಜಿಲ್ಲೆಯಲ್ಲಿ ಬಿಸಿಲಿನ ತಾಪದಿಂದ ಕೆರೆಯಲ್ಲಿ ಈಜಾಡಲು ಹೋಗಿ 6 ಜನ ಮೃತಪಟ್ಟ ಕುಟುಂಬಗಳಿಗೆ ತಕ್ಷಣವೇ ಸಾಮಾಜಿಕ ಜಾಲತಾಣದ ಮುಖಾಂತರ ಸಾಂತ್ವಾನ ತಿಳಿಸಿರುತ್ತೀರಿ, ಅಲ್ಲದೇ ಸದರಿ ಕುಟುಂಬಗಳಿಗೆ ತಲಾ 5 ಲಕ್ಷ ರೂ ಪರಿಹಾರ ಧನ ಘೋಷಣೆ ಮಾಡಿರುತ್ತೀರಿ.
ಇದನ್ನೂ ಓದಿ: ಕಾಲು ಜಾರಿ ಕೆರೆಗೆ ಬಿದ್ದ ಅಳಿಯನ ರಕ್ಷಣೆಗೆ ಹೋದ ಮಾವನೂ ಸಾವು: ಅತ್ತ ಪಿರಿಯಾಪಟ್ಟಣದಲ್ಲಿ ಇಬ್ಬರು ಯುವಕರು ನೀರು ಪಾಲು
ತಾವು ಈ ಮಲತಾಯಿ ದೊರಣೆಯನ್ನು ಅನುಸರಿಸುತ್ತಿರುವುದರಿಂದ ರಾಜ್ಯದ ಮುಖ್ಯಮಂತ್ರಿಗಳೋ ಅಥವಾ ಮೈಸೂರು ಜಿಲ್ಲೆಗೆ ಮಾತ್ರ ಮುಖ್ಯಮಂತ್ರಿಗಳೋ ಎಂಬ ಸಂಶಯ ವ್ಯಕ್ತವಾಗಿದ್ದು, ಕಲ್ಯಾಣ ಕರ್ನಾಟಕದ ಭಾಗದ ಜನರು ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಈ ಕೂಡಲೇ ಯಾದಗಿರಿ ಜಿಲ್ಲೆಯ ಸುರಪೂರ ತಾಲೂಕಿನ ನಗನೂರು ಗ್ರಾಮದ ಸಂತ್ರಸ್ಥ ಕುಟುಂಬಗಳಿಗೆ ತಲಾ 5 ಲಕ್ಷ ರೂ ಪರಿಹಾರ ಧನ ಘೋಷಣೆ ಮಾಡಿ ಸಾಂತ್ವಾನ ವ್ಯಕ್ತಪಡಿಸುವಂತೆ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಪತ್ರದಲ್ಲಿ ಸಿಎಂಗೆ ಮನವಿ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
