ಬೆಂಗಳೂರು, ಏ.29: ಸಿಲಿಕಾನ್ ಸಿಟಿಯ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರು ನಗರ ಪೊಲೀಸರು ತಮ್ಮ ತುರ್ತು ಸ್ಪಂದನಾ ವ್ಯವಸ್ಥೆಯಾದ ‘ನಮ್ಮ 112’ ಗೆ ಭರ್ಜರಿ ಅಪ್‌ಗ್ರೇಡ್ ನೀಡಿದ್ದಾರೆ. ತುರ್ತು ಸಂದರ್ಭಗಳಲ್ಲಿ ಭಾಷೆಯ ಅಡೆತಡೆಯನ್ನು ನಿವಾರಿಸಲು ಭಾರತದಲ್ಲೇ ಮೊದಲ ಬಾರಿಗೆ ಬಹುಭಾಷಾ AI ಚಾಲಿತ ‘VANKI’ (Voice AI for Nationwide Key Interventions) ವ್ಯವಸ್ಥೆಯನ್ನು ಬಿಡುಗಡೆ ಮಾಡಲಾಗಿದೆ. ಇದೀಗ ಇದು ಜನರಿಗೆ ಹೇಗೆ ಪ್ರಯೋಜನ ಆಗಲಿದೆ ಎಂಬುದನ್ನು ಕೂಡ ಹೇಳಿದೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಏನಿದು VANKI ತಂತ್ರಜ್ಞಾನ?
ಬೆಂಗಳೂರು ಜಾಗತಿಕ ನಗರವಾಗಿದ್ದು, ಇಲ್ಲಿ ದೇಶ-ವಿದೇಶಗಳ ಜನರು ವಾಸಿಸುತ್ತಿದ್ದಾರೆ. ತುರ್ತು ಸಂದರ್ಭದಲ್ಲಿ ಕರೆ ಮಾಡುವವರಿಗೆ ಕನ್ನಡ ಅಥವಾ ಇಂಗ್ಲಿಷ್ ತಿಳಿಯದಿದ್ದರೆ ಸಹಾಯ ಪಡೆಯುವುದು ವಿಳಂಬವಾಗುತ್ತಿತ್ತು. ಇದನ್ನು ತಪ್ಪಿಸಲು ಅಭಿವೃದ್ಧಿಪಡಿಸಲಾದ ಈ AI ವ್ಯವಸ್ಥೆಯು ಕರೆ ಮಾಡುವವರು ಮಾತನಾಡುವ ಭಾಷೆಯನ್ನು ತಕ್ಷಣವೇ ಅರ್ಥೈಸಿಕೊಂಡು, ಅದನ್ನು ಕಂಟ್ರೋಲ್ ರೂಂ ಅಧಿಕಾರಿಗಳಿಗೆ ರವಾನಿಸುತ್ತದೆ.
ಇದು ಹೇಗೆ ಕಾರ್ಯನಿರ್ವಹಿಸುತ್ತದೆ: ಇದರ ವಿಶೇಷತೆಗಳೇನು:
ಪ್ರಸ್ತುತ ಬೆಂಗಾಲಿ, ಗುಜರಾತಿ, ಒಡಿಯಾ, ಮಣಿಪುರಿ, ಕಾಶ್ಮೀರಿ, ನೇಪಾಳಿ ಮತ್ತು ಅಸ್ಸಾಮಿಯಂತಹ ಭಾರತೀಯ ಭಾಷೆಗಳು ಹಾಗೂ ಸ್ಪ್ಯಾನಿಷ್, ಫ್ರೆಂಚ್ ಮತ್ತು ಅರೇಬಿಕ್‌ನಂತಹ ಅಂತರರಾಷ್ಟ್ರೀಯ ಭಾಷೆಗಳನ್ನು ಇದು ಬೆಂಬಲಿಸುತ್ತದೆ. ಭಾಷೆಯ ಸಮಸ್ಯೆಯಿಂದಾಗಿ ಮಾಹಿತಿ ಪಡೆಯುವಲ್ಲಿ ಆಗುತ್ತಿದ್ದ ವಿಳಂಬ ತಪ್ಪಲಿದೆ, ಇದರಿಂದ ಪೊಲೀಸರು ಘಟನಾ ಸ್ಥಳಕ್ಕೆ ತಲುಪುವ ವೇಗ ಹೆಚ್ಚಾಗಲಿದೆ. ಮಂಡೇ ವೆಂಚರ್ಸ್ ಮತ್ತು ಅಯೋಸ್ (Monday Ventures and Aeos) ಸಹಯೋಗದೊಂದಿಗೆ ಈ ಸುಧಾರಿತ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ.
ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಭಾಷೆಗಳನ್ನು ಈ ವ್ಯವಸ್ಥೆಗೆ ಸೇರ್ಪಡೆಗೊಳಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ತಂತ್ರಜ್ಞಾನದ ಬಳಕೆಯ ಮೂಲಕ ನಾಗರಿಕ ಸ್ನೇಹಿ ಪೊಲೀಸಿಂಗ್‌ನಲ್ಲಿ ಬೆಂಗಳೂರು ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ.
ಇದನ್ನೂ ಓದಿ: ಬೆಂಗಳೂರಿನ ಹಲವೆಡೆ ಗುಡುಗು ಸಹಿತ ಧಾರಾಕಾರ ಮಳೆ; ಜನರು ಪರದಾಟ
ಇದು ಜನರಿಗೆ ಹೇಗೆ ಪ್ರಯೋಜನ:
ಬೆಂಗಳೂರು ಒಂದು ಜಾಗತಿಕ ನಗರ. ಇಲ್ಲಿ ಉತ್ತರ ಭಾರತದ ವಿವಿಧ ರಾಜ್ಯಗಳ ಜನರು ಹಾಗೂ ವಿದೇಶಿಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅನೇಕರಿಗೆ ಕನ್ನಡ ಅಥವಾ ಇಂಗ್ಲಿಷ್‌ನಲ್ಲಿ ಸ್ಪಷ್ಟವಾಗಿ ಮಾಹಿತಿ ನೀಡಲು ಬರುವುದಿಲ್ಲ. ಈ AI ವ್ಯವಸ್ಥೆಯು ಕರೆ ಮಾಡುವವರ ಭಾಷೆಯಲ್ಲೇ (ಉದಾಹರಣೆಗೆ: ಬೆಂಗಾಲಿ, ಒಡಿಯಾ, ಸ್ಪ್ಯಾನಿಷ್ ಇತ್ಯಾದಿ) ದೂರು ಆಲಿಸುವುದರಿಂದ, ಯಾವುದೇ ಭಾಷೆಯ ವ್ಯಕ್ತಿ ಭಯವಿಲ್ಲದೆ ಕರೆ ಮಾಡಬಹುದು. ಹಿಂದೆ ಕರೆ ಮಾಡುವವರ ಭಾಷೆ ಅರ್ಥವಾಗದಿದ್ದಾಗ, ಕಂಟ್ರೋಲ್ ರೂಂ ಸಿಬ್ಬಂದಿ ಅದನ್ನು ಅರ್ಥಮಾಡಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಿದ್ದರು ಅಥವಾ ಬೇರೆ ಭಾಷೆ ತಿಳಿದವರನ್ನು ಸಂಪರ್ಕಿಸಬೇಕಿತ್ತು. ಇದರಿಂದ ಪೊಲೀಸರು ಸ್ಥಳಕ್ಕೆ ತಲುಪುವುದು ವಿಳಂಬವಾಗುತ್ತಿತ್ತು. ಈಗ AI ತಕ್ಷಣವೇ ಭಾಷೆಯನ್ನು ಭಾಷಾಂತರಿಸುವುದರಿಂದ, ಪೊಲೀಸರು ಘಟನಾ ಸ್ಥಳಕ್ಕೆ ತಲುಪುವ ಸಮಯ ಗಣನೀಯವಾಗಿ ಉಳಿತಾಯವಾಗುತ್ತದೆ.
ತುರ್ತು ಸಂದರ್ಭದಲ್ಲಿ ಜನರು ಆತಂಕದಲ್ಲಿರುತ್ತಾರೆ. ಆಗ ಅವರಿಗೆ ಸರಿಯಾಗಿ ಪದಗಳು ಸಿಗದೆ ಇರಬಹುದು. ‘VANKI’ ತಂತ್ರಜ್ಞಾನವು ಕರೆ ಮಾಡುವವರ ಆಡುಭಾಷೆಯನ್ನು ಅರ್ಥೈಸಿಕೊಂಡು, ಘಟನೆ ನಡೆದ ಸ್ಥಳ ಮತ್ತು ಸಮಸ್ಯೆಯ ಸ್ವರೂಪವನ್ನು ನಿಖರವಾಗಿ ಕಂಟ್ರೋಲ್ ರೂಂಗೆ ರವಾನಿಸುತ್ತದೆ. ಇದರಿಂದ ತಪ್ಪು ಮಾಹಿತಿಯಿಂದ ಆಗುವ ಅನಾಹುತಗಳು ತಪ್ಪುತ್ತವೆ. ಕಡಿಮೆ ಓದಿದವರು ಅಥವಾ ಸ್ಥಳೀಯ ಭಾಷೆ ತಿಳಿಯದ ವಲಸೆ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದಾಗ ಈ ವ್ಯವಸ್ಥೆ ಅವರಿಗೆ ಸಂಜೀವಿನಿಯಂತೆ ಕೆಲಸ ಮಾಡುತ್ತದೆ. ಇದು ಸಮಾಜದ ಎಲ್ಲಾ ವರ್ಗದ ಜನರಿಗೂ ಸಮಾನವಾಗಿ ರಕ್ಷಣೆ ಒದಗಿಸಲು ಸಹಕಾರಿಯಾಗಿದೆ. ಅಪಘಾತ ಅಥವಾ ಅಪರಾಧಗಳು ನಡೆದಾಗ ಸೆಕೆಂಡುಗಳ ಕಾಲವೂ ಮುಖ್ಯವಾಗಿರುತ್ತದೆ. ಅಂತಹ ‘ಹೈ-ಪ್ರೆಶರ್’ ಸಮಯದಲ್ಲಿ ಭಾಷಾಂತರಕ್ಕಾಗಿ ಪರದಾಡುವ ಅಗತ್ಯವಿಲ್ಲದೆ, ಈ AI ವ್ಯವಸ್ಥೆಯು ಸಂವಹನವನ್ನು ಸರಳಗೊಳಿಸುತ್ತದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 6:09 pm, Wed, 29 April 26