ಯಾವುದೇ ಮಾತುಕತೆ ನಡೆದಿಲ್ಲ: ಮುಂಬೈ ಇಂಡಿಯನ್ಸ್​ನಿಂದ ಸ್ಪಷ್ಟನೆ! – Kannada News | IPL 2027: Fresh Twist In Hardik Pandya Trade

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಸೀಸನ್-20 ಕ್ಕೂ ಮುನ್ನ ಹಾರ್ದಿಕ್ ಪಾಂಡ್ಯ ಅವರ ಟ್ರೇಡಿಂಗ್ ಪ್ರಕ್ರಿಯೆ ನಡೆಯಲಿದೆಯೇ? – ಕಳೆದ ಕೆಲವು ವಾರಗಳಿಂದ ಕೇಳಿಬರುತ್ತಿರುವ ಸರಣಿ ವದಂತಿಗಳು ಇಂತಹದೊಂದು ದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕಿವೆ. ಆದರೆ, ಈ ಕುರಿತು ಸಿಎಸ್‌ಕೆ ಅಥವಾ ಇತರ ಯಾವುದೇ ಫ್ರಾಂಚೈಸಿಗಳೊಂದಿಗೆ ಯಾವುದೇ ಮಾತುಕತೆ ನಡೆದಿಲ್ಲ, ಇವೆಲ್ಲವೂ ಕೇವಲ ಗಾಳಿಸುದ್ದಿ ಎಂದು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ವಕ್ತಾರರು ಈಗ ಅಧಿಕೃತವಾಗಿ ಸ್ಪಷ್ಟಪಡಿಸಿದ್ದಾರೆ.

ವದಂತಿಗಳ ಹಿನ್ನೆಲೆ:

ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್​ ನಡುವೆ ಬೃಹತ್ ಆಫರ್ ಕುರಿತು ಚರ್ಚೆಗಳು ನಡೆಯುತ್ತಿದೆ ಎಂಬ ಸುದ್ದಿಗಳು ಹರಿದಾಡಿದ್ದವು.

  • ಮುಂಬೈ ಇಂಡಿಯನ್ಸ್ ಬೇಡಿಕೆ: ನಾಯಕ ಹಾರ್ದಿಕ್ ಪಾಂಡ್ಯರನ್ನು ಬಿಟ್ಟುಕೊಡಲು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಸಿಎಸ್‌ಕೆ ತಂಡದ ಮುಂದೆ ಕಠಿಣ ಷರತ್ತು ಇಟ್ಟಿದೆ. ಚೆನ್ನೈ ತಂಡದಿಂದ ಸ್ಟಾರ್ ಆಲ್-ರೌಂಡರ್ ಶಿವಂ ದುಬೆ ಮತ್ತು ಉದಯೋನ್ಮುಖ ಯುವ ಬ್ಯಾಟರ್ ಆಯುಷ್ ಮ್ಹಾತ್ರೆ ಇಬ್ಬರನ್ನೂ ತಮಗೆ ನೀಡಬೇಕು ಎಂದು ಮುಂಬೈ ಇಂಡಿಯನ್ ಫ್ರಾಂಚೈಸಿ ಬೇಡಿಕೆಯಿಟ್ಟಿದ್ದಾರೆ ಎಂದು ವರದಿಯಾಗಿತ್ತು.
  • ಚೆನ್ನೈ ಸೂಪರ್ ಕಿಂಗ್ಸ್ ಕೌಂಟರ್ ಆಫರ್: ಯುವ ಆಟಗಾರ ಮ್ಹಾತ್ರೆ ಅವರನ್ನು ಬಿಟ್ಟುಕೊಡಲು ನಿರಾಕರಿಸಿದ ಸಿಎಸ್‌ಕೆ, ಬದಲಿಗೆ ಶಿವಂ ದುಬೆ, ಡೆವಾಲ್ಡ್ ಬ್ರೆವಿಸ್ ಮತ್ತು ₹10 ಕೋಟಿ ನಗದು ಹಣದ ಆಫರ್ ನೀಡಿದೆ ಎಂದು ಸುದ್ದಿಯಾಗಿದ್ದವು.

ಈ ಟ್ರೇಡ್​ನಲ್ಲಿ ಇಬ್ಬರೂ ಆಟಗಾರರ ಮೌಲ್ಯಮಾಪನದಲ್ಲಿ ಒಮ್ಮತ ಮೂಡದ ಕಾರಣ ಮುಂಬೈ ಇಂಡಿಯನ್ಸ್ ಹಾಗೂ ಸಿಎಸ್​ಕೆ ನಡುವಣ  ಮೆಗಾ ಡೀಲ್ ಅರ್ಧಕ್ಕೇ ನಿಂತಿದೆ ಎನ್ನಲಾಗಿತ್ತು.

ಇದರ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್ (DC) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡಗಳು ಕೂಡ ಹಾರ್ದಿಕ್ ಪಾಂಡ್ಯ ಅವರನ್ನು ಸೆಳೆಯಲು ಆಸಕ್ತಿ ತೋರಿಸಿವೆ ಎಂಬ ಗಾಳಿ ಸುದ್ದಿಗಳು ಹಬ್ಬಿದ್ದವು.

ಫ್ರಾಂಚೈಸಿಗಳ ಅಧಿಕೃತ ಹೇಳಿಕೆ!

ಈ ಎಲ್ಲಾ ಊಹಾಪೋಹಗಳಿಗೆ ಬ್ರೇಕ್ ಹಾಕಿರುವ ಮುಂಬೈ ಇಂಡಿಯನ್ಸ್ ಹಾಗೂ ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್ ಅವರು ‘ಕ್ರಿಕ್‌ಬಜ್’ಗೆ ನೀಡಿರುವ ಜಂಟಿ ಹೇಳಿಕೆಯಲ್ಲಿ, ಸದ್ಯಕ್ಕೆ ಯಾವುದೇ ಆಟಗಾರರ ವರ್ಗಾವಣೆ ಪ್ರಕ್ರಿಯೆ ಚಾಲ್ತಿಯಲ್ಲಿಲ್ಲ ಎಂದು ಖಚಿತಪಡಿಸಿದ್ದಾರೆ.

MI ಆಂತರಿಕ ಪರಾಮರ್ಶೆ:

ಐಪಿಎಲ್ 2026ರ ಸೀಸನ್‌ನಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು 9ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿ ಬಂದಿತ್ತು. ಈ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಫ್ರಾಂಚೈಸಿಯು ಪ್ರಸ್ತುತ ಕೋಚಿಂಗ್ ಸ್ಟಾಫ್ ಮತ್ತು ಆಟಗಾರರ ಪ್ರದರ್ಶನದ ಬಗ್ಗೆ ಆಳವಾದ ಆಂತರಿಕ ಪರಾಮರ್ಶೆ  ನಡೆಸುತ್ತಿದೆ. ಈ ಪ್ರಕ್ರಿಯೆ ಮುಗಿಯುವವರೆಗೂ ತಂಡದ ನಾಯಕತ್ವದಲ್ಲಾಗಲಿ ಅಥವಾ ಆಟಗಾರರ ಟ್ರೇಡಿಂಗ್‌ನಲ್ಲಾಗಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಮ್ಯಾನೇಜ್‌ಮೆಂಟ್ ತಿಳಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಐಪಿಎಲ್ 2027ರ ಮೆಗಾ ಹರಾಜಿಗೂ ಮುನ್ನ ಹಾರ್ದಿಕ್ ಪಾಂಡ್ಯ ಅವರ ಟ್ರೇಡಿಂಗ್ ಸುದ್ದಿ ಕೇವಲ ಸಾಮಾಜಿಕ ಜಾಲತಾಣಗಳ ಊಹಾಪೋಹ ಎಂಬುದು ಈಗ ಸ್ಪಷ್ಟವಾಗಿದೆ. ಸದ್ಯಕ್ಕೆ ಮುಂಬೈ ಇಂಡಿಯನ್ಸ್ ತನ್ನ ಆಂತರಿಕ ಪರಾಮರ್ಶೆಯಲ್ಲೇ ಬ್ಯುಸಿಯಾಗಿದ್ದು, ತಂಡದ ನಾಯಕತ್ವದಲ್ಲಿ ಯಾವುದೇ ತಕ್ಷಣದ ಬದಲಾವಣೆಯ ಮುನ್ಸೂಚನೆ ನೀಡಿಲ್ಲ.

ಇದನ್ನೂ ಓದಿ: ನಿವೃತ್ತಿ ಘೋಷಿಸಿರುವ ರಹಾನೆಗೆ ಸಿಗಲಿರುವ ಪಿಂಚಣಿ ಮೊತ್ತ ಎಷ್ಟು ಗೊತ್ತಾ?

ಆದಾಗ್ಯೂ, ಐಪಿಎಲ್ ಇತಿಹಾಸದಲ್ಲಿ ಕೊನೆಯ ಕ್ಷಣದ ಟ್ವಿಸ್ಟ್‌ಗಳು ಹೊಸದೇನಲ್ಲ. ಹೀಗಾಗಿ, ಮುಂಬರುವ ಮಿನಿ ಹರಾಜಿನ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗುವವರೆಗೂ ಆಟಗಾರರ ಟ್ರೇಡ್​ ಪ್ರಕ್ರಿಯೆಯ ಕುತೂಹಲಗಳು ಮುಂದುವರೆಯಲಿದೆ.

Source link

Leave a Reply

Your email address will not be published. Required fields are marked *