ಯುದ್ಧದ ನಡುವೆ ಫಿಫಾ ವಿಶ್ವಕಪ್​​ಗೆ ಇರಾನ್ ಎಂಟ್ರಿ..! – Kannada News | Iran football team arrives in Mexico for fifa World Cup 2026

2026ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಇರಾನ್ ಕಣಕ್ಕಿಳಿಯಲಿದೆಯಾ? ಈ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಏಕೆಂದರೆ ಫಿಫಾ ವಿಶ್ವಕಪ್​ಗಾಗಿ ಈಗಾಗಲೇ ಇರಾನ್ ರಾಷ್ಟ್ರೀಯ ಫುಟ್‌ಬಾಲ್ ಮೆಕ್ಸಿಕೋದ ಟಿಜುವಾನಾ ನಗರಕ್ಕೆ ಬಂದು ತಲುಪಿದೆ. ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ವೀಸಾ ಗೊಂದಲಗಳಿಂದಾಗಿ ಈ ಬಾರಿ ಇರಾನ್ ಕಣಕ್ಕಿಳಿಯುವುದು ಅನುಮಾನ ಎನ್ನಲಾಗಿತ್ತು. ಆದರೆ ಇದೀಗ ಇರಾನ್ ಪಡೆ ವಿಶ್ವಕಪ್​ ಆಡಲು ಸಕಲ ರೀತಿಯಲ್ಲೂ ಸಜ್ಜಾಗಿ ನಿಂತಿದೆ.

ಇರಾನ್ ಹೋಗಿದ್ದು ಹೇಗೆ?

ಈ ಬಾರಿಯ ಫಿಫಾ ವಿಶ್ವಕಪ್ ಆಯೋಜಿಸುತ್ತಿರುವುದು ಅಮೆರಿಕ, ಕೆನಡಾ ಮತ್ತು ಮೆಕ್ಸಿಕೋ. ಆದರೆ ಇರಾನ್ ದೇಶದ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾದ ಇರಾನ್ ಏರ್ ವಿಮಾನಗಳು ಅಮೆರಿಕದ ವಾಯುಪ್ರದೇಶವನ್ನು ಪ್ರವೇಶಿಸಲು ಅನುಮತಿ ನೀಡಿರಲಿಲ್ಲ. ಹೀಗಾಗಿಯೇ ಇರಾನ್ ಈ ಬಾರಿ ಕಣಕ್ಕಿಳಿಯುವುದಿಲ್ಲ ಎಂದು ಎಲ್ಲರೂ ಭಾವಿಸಿದ್ದರು.

ಅದರಲ್ಲೂ ಇರಾನ್ ಮೇಲೆ ಅಮೆರಿಕ/ಇಸ್ರೇಲ್ ದಾಳಿ ಮಾಡುತ್ತಿದ್ದರಿಂದ ವಿಶ್ವಕಪ್​ಗೆ ತೆರಳುವುದು ಸವಾಲಾಗಿತ್ತು. ಆದರೆ ಎಲ್ಲರ ಲೆಕ್ಕಾಚಾರಗಳನ್ನು ತಲೆಕಳಗಾಗಿಸಿ ಇರಾನ್ ರಾಷ್ಟ್ರೀಯ ಫುಟ್​ಬಾಲ್ ತಂಡ ಪ್ರಯಾಣಿಸಿದೆ.

ಇರಾನ್​ನಿಂದ ಟರ್ಕಿಗೆ ತೆರಳಿದ ಇರಾನ್ ಫುಟ್​ಬಾಲ್ ತಂಡವು ಅಲ್ಲಿಂದೆ ಸ್ಲೇನ್​ಗೆ ಹೋಗಿದ್ದಾರೆ. ಸ್ಪೇನ್​ನಿಂದ ನೇರವಾಗಿ ಮೆಕ್ಸಿಕೋದ ಗಡಿ ನಗರವಾದ ಟಿಜುವಾನಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದ್ದಾರೆ. ಇದೀಗ ಮೆಕ್ಸಿಕೋದಲ್ಲಿ ಇರಾನ್ ತಂಡವು ಅಭ್ಯಾಸವನ್ನು ಆರಂಭಿಸಿದ್ದಾರೆ.

ಅಮೆರಿಕದ ವೀಸಾ ನಿರಾಕರಣೆ!

ವಿಶ್ವಕಪ್‌ನ ಗ್ರೂಪ್ ‘ಜಿ’ ನಲ್ಲಿರುವ ಇರಾನ್ ತಂಡದ ಎಲ್ಲಾ ಮೂರು ಪಂದ್ಯಗಳು ಅಮೆರಿಕದ ಮೈದಾನಗಳಲ್ಲೇ ನಿಗದಿಯಾಗಿವೆ. ಆದಾಗ್ಯೂ, ಇರಾನ್ ಆಟಗಾರರು ಮತ್ತು ಸಿಬ್ಬಂದಿಗೆ ಅಮೆರಿಕ ಕಠಿಣ ನಿಯಮಗಳನ್ನು ವಿಧಿಸಿದೆ.

ಇರಾನ್ ಫುಟ್‌ಬಾಲ್ ಫೆಡರೇಶನ್ ಮೊದಲು ಅರಿಜೋನಾದಲ್ಲಿ ತರಬೇತಿ ಪಡೆಯಲು ಯೋಜಿಸಿತ್ತು. ಆದರೆ ಅಮೆರಿಕ ಸರ್ಕಾರವು ಆಟಗಾರರಿಗೆ ವೀಸಾ ನೀಡಿದರೂ, ತಂಡದ ಮ್ಯಾನೇಜರ್ ಮಹ್ದಿ ಮೊಹಮ್ಮದ್ ನಬಿ ಮತ್ತು ಪ್ರಧಾನ ಕಾರ್ಯದರ್ಶಿ ಹೆದಾಯತ್ ಮೊಂಬೆನಿ ಸೇರಿದಂತೆ 15 ಪ್ರಮುಖ ಸಹಾಯಕ ಸಿಬ್ಬಂದಿಗೆ ವೀಸಾ ನಿರಾಕರಿಸಿದೆ. ಅಲ್ಲದೆ ಇರಾನ್ ತಂಡದ ಸದಸ್ಯರು ಅಮೆರಿಕದಲ್ಲಿ ರಾತ್ರಿ ತಂಗುವಂತಿಲ್ಲ ಎಂದು ತಿಳಿಸಿದೆ.

ಇದೀಗ ಇರಾನ್ ಆಟಗಾರರು ಪಂದ್ಯ ನಡೆಯುವ ದಿನದಂದೇ ಮೆಕ್ಸಿಕೋದಿಂದ ಅಮೆರಿಕಕ್ಕೆ ಪ್ರಯಾಣ ಬೆಳೆಸಿ, ಪಂದ್ಯ ಮುಗಿದ ತಕ್ಷಣವೇ ವಾಪಸ್ ಮೆಕ್ಸಿಕೋಗೆ ಮರಳಲು ಯೋಜನೆ ರೂಪಿಸಿದ್ದಾರೆ. ಈ ಮೂಲಕ ಫಿಫಾ ವಿಶ್ವಕಪ್​ನಲ್ಲಿ ಕಣಕ್ಕಿಳಿಯುವುದನ್ನು ಇರಾನ್ ಖಚಿತಪಡಿಸಿದೆ.

ಇರಾನ್ ಅಭಿಮಾನಿಗಳಿಗೆ ನಿರ್ಬಂಧ!

ಇರಾನ್ ತಂಡಕ್ಕೆ ಅಮೆರಿಕಕ್ಕೆ ಬರಲು ನಿಯಮ ಸಡಿಸಿದರೂ, ಯುಎಸ್​ಎ ಇರಾನ್ ಅಭಿಮಾನಿಗಳಿಗೆ ನಿರ್ಬಂಧ ವಿಧಿಸಿದೆ. ಅಲ್ಲದೆ ಭದ್ರತಾ ಕಾರಣಗಳಿಂದಾಗಿ ಫಿಫಾ (FIFA) ಇರಾನ್ ಅಭಿಮಾನಿಗಳಿಗೆ ನಿಗದಿಪಡಿಸಿದ್ದ ಟಿಕೆಟ್ ಕೋಟಾವನ್ನು ರದ್ದುಗೊಳಿಸಿದೆ. ಇದರಿಂದಾಗಿ ಇರಾನ್ ತಂಡವು ಮೈದಾನದಲ್ಲಿ ಅಭಿಮಾನಿಗಳ ಬೆಂಬಲವಿಲ್ಲದೆ ಆಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 2026ರ ಫಿಫಾ ವಿಶ್ವಕಪ್‌ನಲ್ಲಿ ಇರಾನ್ ಫುಟ್‌ಬಾಲ್ ತಂಡದ ಪಯಣವು ಕೇವಲ ಕ್ರೀಡೆಯಾಗಿ ಉಳಿದಿಲ್ಲ. ಬದಲಿಗೆ ರಾಜತಾಂತ್ರಿಕ ಸಂಘರ್ಷಗಳು ಮತ್ತು ಕಠಿಣ ಸವಾಲುಗಳ ನಡುವಿನ ಹೋರಾಟವಾಗಿ ಮಾರ್ಪಟ್ಟಿದೆ. ಅಮೆರಿಕದ ಕಠಿಣ ನಿರ್ಬಂಧಗಳ ನಡುವೆಯೂ ಮೆಕ್ಸಿಕೋವನ್ನು ತಮ್ಮ ತಾತ್ಕಾಲಿಕ ನೆಲೆಯಾಗಿಸಿಕೊಂಡಿರುವ ಇರಾನ್ ಆಟಗಾರರು, ಕೇವಲ ಎದುರಾಳಿ ತಂಡಗಳ ವಿರುದ್ಧ ಮಾತ್ರವಲ್ಲದೆ ಭೌಗೋಳಿಕ ಸವಾಲುಗಳ ವಿರುದ್ಧವೂ ಹೋರಾಡಬೇಕಿದೆ.  ಅಭಿಮಾನಿಗಳ ಅಬ್ಬರವಿಲ್ಲದ, ಸ್ವಂತ ತರಬೇತುದಾರರ ಬೆಂಬಲ ಕಳೆದುಕೊಂಡಿರುವ ಇರಾನ್ ತಂಡವು ಮೈದಾನದಲ್ಲಿ ಹೇಗೆ ಪ್ರದರ್ಶನ ನೀಡಲಿದೆ ಎಂಬುದು ಇಡೀ ವಿಶ್ವದ ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ: 7 ಭರ್ಜರಿ ದಾಖಲೆಗಳನ್ನು ಬದಿಗಿಟ್ಟು ನಿವೃತ್ತಿ ಘೋಷಿಸಿದ ಕೇನ್ ವಿಲಿಯಮ್ಸನ್!

ಇರಾನ್ ತಂಡದ ಪಂದ್ಯಗಳ ವೇಳಾಪಟ್ಟಿ (ಗ್ರೂಪ್ G):

  •  ಜೂನ್ 15: ಇರಾನ್ vs ನ್ಯೂಝಿಲೆಂಡ್ (ಲಾಸ್ ಏಂಜಲೀಸ್ ಸ್ಟೇಡಿಯಂ, ಕ್ಯಾಲಿಫೋರ್ನಿಯಾ)
  • ಜೂನ್ 21: ಇರಾನ್ vs ಬೆಲ್ಜಿಯಂ (ಲಾಸ್ ಏಂಜಲೀಸ್ ಸ್ಟೇಡಿಯಂ, ಕ್ಯಾಲಿಫೋರ್ನಿಯಾ)
  • ಜೂನ್ 26: ಇರಾನ್ vs ಈಜಿಪ್ಟ್ (ಸಿಯಾಟಲ್ ಸ್ಟೇಡಿಯಂ, ವಾಷಿಂಗ್ಟನ್)

Source link

Leave a Reply

Your email address will not be published. Required fields are marked *