ಯುವ ನಟನಿಂದ ಸ್ಪೂರ್ತಿ, ಉಚಿತ ಶಿಕ್ಷಣ ಘೋಷಿಸಿದ ಮೆಗಾಸ್ಟಾರ್ ಚಿರಂಜೀವಿ

ಯುವ ನಟನಿಂದ ಸ್ಪೂರ್ತಿ, ಉಚಿತ ಶಿಕ್ಷಣ ಘೋಷಿಸಿದ ಮೆಗಾಸ್ಟಾರ್ ಚಿರಂಜೀವಿ

ಮೆಗಾಸ್ಟಾರ್ ಚಿರಂಜೀವಿ (Megastar Chiranjeevi), ಭಾರತದ ಸೂಪರ್ ಸ್ಟಾರ್ ನಟರಲ್ಲಿ ಒಬ್ಬರು. ಒಂದು ಸಮಯದಲ್ಲಿ ಅಮಿತಾಬ್ ಬಚ್ಚನ್​​ಗಿಂತಲೂ ದೊಡ್ಡ ಸ್ಟಾರ್ ಆಗಿದ್ದ ಚಿರಂಜೀವಿ, ಭಾರತದಲ್ಲಿ ಒಂದು ಕೋಟಿ ಸಂಭಾವನೆ ಪಡೆದಿದ್ದ ಮೊದಲ ನಟ. ಈಗಲೂ ಸಿನಿಮಾಗಳಲ್ಲಿ ಸಕ್ರಿಯವಾಗಿರುವ ಚಿರಂಜೀವಿ, ಸಿನಿಮಾ ನಟರುಗಳು ಹೇಗೆ ಅಭಿಮಾನಿ ಸಂಘಗಳ ಬಳಸಿ ಎಷ್ಟು ಸಕ್ರಿಯವಾಗಿ ಸಮಾಜ ಸೇವೆ ಮಾಡಬಹುದು ಎಂದು ತೋರಿಸಿಕೊಟ್ಟ ಕೆಲವೇ ಸ್ಟಾರ್ ನಟರುಗಳಲ್ಲಿ ಒಬ್ಬರು. ಮೆಗಾಸ್ಟಾರ್ ಅವರು ಪ್ರಾರಂಭಿಸಿದ ಬ್ಲಡ್ ಬ್ಯಾಂಕ್​​ಗಳು ಸಾವಿರಾರು ಜೀವಗಳನ್ನು ಉಳಿಸಿವೆ. ಈಗಲೂ ಸಹ ಚಿರಂಜೀವಿ ಹಲವು ಸಮಾಜ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದೀಗ ಅವರು ಬಹಳ ಮಹತ್ವವಾದ ಒಂದು ಸಾಮಾಜಿಕ ಕಾರ್ಯಕ್ಕೆ ಕೈ ಹಾಕಿದ್ದು, ಅದಕ್ಕೆ ಸ್ಪೂರ್ತಿ ತಮಿಳಿನ ಯುವ ಸ್ಟಾರ್ ನಟ ಎಂದು ಖುದ್ದು ಅವರೇ ಹೇಳಿಕೊಂಡಿದ್ದಾರೆ.

ಯುಗಾದಿ ಹಬ್ಬದ ಶುಭ ಸಂದರ್ಭದಲ್ಲಿ ಚಿರಂಜೀವಿ ಅವರು ಸಮಾಜಸೇವೆಯ ಕ್ಷೇತ್ರದಲ್ಲಿ ಹೊಸ ಅಧ್ಯಾಯವೊಂದನ್ನು ಆರಂಭಿಸುವುದಾಗಿ ಘೋಷಿಸಿದ್ದಾರೆ. ಕಳೆದ 25ಕ್ಕೂ ಹೆಚ್ಚು ವರ್ಷಗಳಿಂದ ಚಿರಂಜೀವಿ ಚಾರಿಟಬಲ್ ಟ್ರಸ್ಟ್ ಮೂಲಕ ರಕ್ತದಾನ ಮತ್ತು ನೇತ್ರದಾನ ಶಿಬಿರಗಳನ್ನು ನಡೆಸುತ್ತಾ ಲಕ್ಷಾಂತರ ಜೀವಗಳನ್ನು ಉಳಿಸಿರುವ ಚಿರಂಜೀವಿ, ಈಗ ಶಿಕ್ಷಣ ಕ್ಷೇತ್ರದತ್ತ ಹೆಜ್ಜೆ ಇಟ್ಟಿದ್ದಾರೆ. ತಮಿಳು ನಟ ಸೂರ್ಯ ನಡೆಸುತ್ತಿರುವ ‘ಅಗರಂ ಫೌಂಡೇಶನ್’ ಇಂದು ಸ್ಪೂರ್ತಿ ಪಡೆದು ಈ ಹೊಸ ಹೆಜ್ಜೆ ಇಟ್ಟಿರುವುದಾಗಿ ಚಿರಂಜೀವಿ ಹೇಳಿದ್ದಾರೆ. ಹಿರಿಯ ನಟರಾದರೂ ಕಿರಿಯ ನಟನಿಂದ ಸ್ಪೂರ್ತಿ ಪಡೆದಿರುವುದಾಗಿ ಯಾವುದೇ ಅಹಂ ಇಲ್ಲದೆ ಹೇಳಿಕೊಂಡಿದ್ದಾರೆ ಚಿರಂಜೀವಿ.

ಆಸಕ್ತಿಕರ ವಿಷಯವೆಂದರೆ ಈ ಹಿಂದೆ ನಟ ಸೂರ್ಯ ಅವರು ತಮ್ಮ ‘ಅಗರಂ ಫೌಂಡೇಶನ್’ನ ಸಮಾರಂಭದಲ್ಲಿ, ಮೆಗಾಸ್ಟಾರ್ ಚಿರಂಜೀವಿ ಅವರ ರಕ್ತದಾನ ಶಿಬಿರಗಳಿಂದ ಸ್ಫೂರ್ತಿ ಪಡೆದು ತಮ್ಮ ಫೌಂಡೇಶನ್ ಪ್ರಾರಂಭಿಸಿದ್ದಾಗಿ ಹೇಳಿಕೊಂಡಿದ್ದರು. ಈಗ ಅದೇ ಚಿರಂಜೀವಿ ಅವರು ಸೂರ್ಯ ಅವರ ಶಿಕ್ಷಣ ಸೇವೆಯನ್ನು ಕಂಡು, ಅದರಿಂದಲೇ ಸ್ಫೂರ್ತಿ ಪಡೆದು ತೆಲುಗು ರಾಜ್ಯಗಳು ಸೇರಿದಂತೆ ಅಗತ್ಯವಿರುವ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ:ಚಿರಂಜೀವಿ ಮೇಲೆ ನಡೆದಿತ್ತು ವಿಶಪ್ರಾಷನ ಪ್ರಯತ್ನ; ನಟ ಬಚಾವ್ ಆಗಿದ್ದೇ ಪವಾಡ

ಈ ಯೋಜನೆಯು ಕೇವಲ ಆಂಧ್ರಪ್ರದೇಶ ಅಥವಾ ತೆಲಂಗಾಣಕ್ಕೆ ಸೀಮಿತವಾಗಿರದೆ, ದೇಶದ ಯಾವುದೇ ಭಾಗದಲ್ಲಿ ಶಿಕ್ಷಣದ ಅಗತ್ಯವಿರುವ ಬಡ ವಿದ್ಯಾರ್ಥಿಗಳಿಗೆ ನೆರವಾಗಲಿದೆಯಂತೆ. ಬಡತನದ ಕಾರಣದಿಂದ ಶಿಕ್ಷಣದಿಂದ ವಂಚಿತರಾಗುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಉಚಿತವಾಗಿ ನೀಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ಈ ಯೋಜನೆಯ ರೂಪುರೇಷೆ ಮತ್ತು ಅನುಷ್ಠಾನದ ಬಗ್ಗೆ ಸಂಪೂರ್ಣ ವಿವರಗಳನ್ನು ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಿಸುವುದಾಗಿ ಚಿರಂಜೀವಿ ತಿಳಿಸಿದ್ದಾರೆ.

‘ಒಬ್ಬ ವ್ಯಕ್ತಿ ಸುಶಿಕ್ಷಿತನಾದರೆ ಆ ಇಡೀ ಕುಟುಂಬವೇ ಅಭಿವೃದ್ಧಿ ಹೊಂದುತ್ತದೆ. ರಕ್ತದಾನವು ಜೀವ ಉಳಿಸಿದರೆ, ಶಿಕ್ಷಣವು ಒಂದು ತಲೆಮಾರಿನ ಭವಿಷ್ಯವನ್ನೇ ಬದಲಿಸುತ್ತದೆ ಎಂಬುದು ನನ್ನ ನಂಬಿಕೆ’ ಎಂದು ಚಿರಂಜೀವಿ ತಮ್ಮ ಆಶಯವನ್ನು ವ್ಯಕ್ತಪಡಿಸಿದ್ದಾರೆ. ರಕ್ತದಾನ ಮತ್ತು ನೇತ್ರದಾನದ ಮೂಲಕ ಜನಸಾಮಾನ್ಯರ ಆಪದ್ಬಾಂಧವರಾಗಿರುವ ಚಿರಂಜೀವಿ ಅವರ ಈ ನಿರ್ಧಾರಕ್ಕೆ ಅಭಿಮಾನಿಗಳಿಂದ ಮತ್ತು ಸಮಾಜದ ಗಣ್ಯರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಕೂಡ ತಮ್ಮ ಅಣ್ಣನ ಈ ಉದಾತ್ತ ನಿರ್ಧಾರವನ್ನು ಶ್ಲಾಘಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *