ಕರ್ನಾಟಕ ಹೈಕೋರ್ಟ್Image Credit source: Getty Images
ಬೆಂಗಳೂರು/ಚಿತ್ರದುರ್ಗ, (ಜೂನ್ 25): ಮದುವೆಯಾಗುವುದಾಗಿ ನಂಬಿಸಿ ಮಹಿಳೆಗೆ ವಂಚಿಸಿದ ಆರೋಪ ಎದುರಿಸುತ್ತಿದ್ದ ಪ್ರೊಬೇಷನರಿ ಸಬ್ಇನ್ಸ್‌ಪೆಕ್ಟರ್‌ವೊಬ್ಬರ ಸಹೋದರನನ್ನು ಬಂಧಿಸಿದ್ದ ಚಿತ್ರದುರ್ಗ (Chitradruga) ಮಹಿಳಾ ಠಾಣೆ ಪೊಲೀಸರ ಕ್ರಮವನ್ನು ಹೈಕೋರ್ಟ್ (Karnataka High Court) ಖಂಡಿಸಿದ್ದು, ತರಾಟೆಗೆ ತೆಗೆದುಕೊಂಡಿದೆ. ಆರೋಪಿಯ ಸಹೋದರನ ಬಂಧನ ಪ್ರಶ್ನಿಸಿ ಕುಟುಂಬಸ್ಥರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ, ಪ್ರಕರಣದಲ್ಲಿ ಆರೋಪಿ ತಮ್ಮನ ತಪ್ಪಿಲ್ಲದಿದ್ದರೂ ಬಂಧಿಸಿರುವುದೇಕೆ? ವಿನಾಕಾರಣ ಬಂಧಿಸುವುದು ಪೊಲೀಸರಿಗೆ ಆಟವಾಗಿದೆ. ಬಂಧಿತನ ಜೀವನದ ಮೇಲಾಗುವ ಪರಿಣಾಮದ ಅರಿವು ಪೊಲೀಸರಿಗಿದೆಯೇ? ಬಂಧನ ಅವಶ್ಯವಿರುವ ಕೇಸ್ನಲ್ಲಿ ಆರೋಪಿಗಳನ್ನು ಬಂಧಿಸುವುದಿಲ್ಲ. ಪೊಲೀಸ್ ಸಮವಸ್ತ್ರವಿದೆ ಎಂದು ಏನು ಬೇಕಾದರೂ ಮಾಡುತ್ತೀರಾ? ಕಾನೂನು ಉಲ್ಲಂಘಿಸಿ ಬಂಧಿಸುವ ಪೊಲೀಸರನ್ನು ಅಮಾನತುಗೊಳಿಸಿ ಇಲಾಖಾ ತನಿಖೆಗೆ ಆದೇಶಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಪೊಲೀಸರನ್ನ ಕರೆಯಿಸಿ ಕ್ಲಾಸ್ ತೆಗೆದುಕೊಂಡ ಕೋರ್ಟ್
ಆರೋಪಿ ಸಹೋದರನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಕುಟುಂಬಸ್ಥರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಕಳವಳ ವ್ಯಕ್ತಪಡಿಸಿತ್ತು. ಅಲ್ಲದೇ ಬಂಧಿತರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಆದೇಶಿಸಿತ್ತು. ಇನ್ನು ಚಿತ್ರದುರ್ಗ ಪೊಲೀಸರು ಖುದ್ದಾಗಿ ಹಾಜರಾಗಬೇಕೆಂದು ಸೂಚಿಸಿ ಇಂದಿಗೆ ಜೂನ್ 25 ವಿಚಾರಣೆ ಮುಂದೂಡಿತ್ತು. ಅದರಂತೆ ಇಂದು ಪೊಲೀಸರು ಹಾಜರಾಗಿದ್ದು, ಕೋರ್ಟ್ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದೆ. ಮ್ಯಾಜಿಸ್ಟ್ರೇಟ್ ಕೂಡಾ ಇಂತಹ ಬಂಧನಕ್ಕೆ ಅವಕಾಶ ನೀಡಬಾರದು. ಕಾನೂನು ಉಲ್ಲಂಘಿಸಿ ಬಂಧಿಸುವ ಪೊಲೀಸರನ್ನು ಅಮಾನತುಪಡಿಸಲಾಗುವುದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಖಡಕ್ ಎಚ್ಚರಿಕೆ ನೀಡಿ ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿದೆ.
ಇದನ್ನೂ ಓದಿ: ನಿರೀಕ್ಷಣಾ ಜಾಮೀನು ಕೊಟ್ಟ ವಿಧಾನ ಸರಿಯಲ್ಲ: ವಚನಾನಂದ ಸ್ವಾಮೀಜಿಗೆ ಹೈಕೋರ್ಟ್ ಬಿಗ್ ಶಾಕ್
ಆರೋಪವಿರುವುದು ಎಸ್‌ಐ ಮೇಲೆ ಬಂಧಿಸಿದ್ದು ಸಹೋದರನನ್ನ!
ಇನ್ಸ್ಟಾಗ್ರಾಂನಲ್ಲಿ ಮಹಿಳೆ ಜತೆ ಸ್ನೇಹ ಬೆಳೆಸಿದ್ದ ಪ್ರೊಬೆಷನರಿ ಪಿಎಸ್ಐ ವರುಣ್ ಕುಮಾರ್, ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ. ಬಳಿಕ ಮಹಿಳೆಗೆ ವಿವಾಹವಾಗಿದೆ ಎಂದು ಸಂಬಂಧ ಕಡಿತಗೊಳಿಸಿದ್ದ. ಈ ಸಂಬಂಧ ಮಹಿಳೆ, ಎಸ್‌ಐ ವರುಣ್ ಕುಮಾರ್ ವಿರುದ್ಧ ಮಹಿಳೆ ದೂರು ನೀಡಿದ್ದು, ಈ ದೂರಿನ ಮೇರೆಗೆ ಚಿತ್ರದುರ್ಗ ಮಹಿಳಾ ಠಾಣೆಯ ಪೊಲೀಸರು, ಆರೋಪಿ ಕುಟುಂಬಸ್ಥರ ವಿರುದ್ಧವೂ ಎಫ್‌ಐಆರ್ ದಾಖಲಿಸಿದ್ದರು. ಅಲ್ಲದೇ ಆರೋಪಿ ಸಹೋದರನನ್ನು ಬಂಧಿಸಿದ್ದರು. ಹೀಗಾಗಿ ಪೊಲಿಸರು ಕ್ರಮವನ್ನು ಖಂಡಿಸಿ ಕುಟುಂಬಸ್ಥರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಪೊಲಿಸರನ್ನ ತರಾಟೆಗೆ ತೆಗೆದುಕೊಂಡ ಕೋರ್ಟ್
ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ವಿನಾಕಾರಣ ಆರೋಪಿ ಸಹೋದರನ ಬಂಧನ ಆಘಾತಕಾರಿ. ‘ವಿವಾಹಿತ ಮಹಿಳೆಯನ್ನು ಮದುವೆಯಾಗುವುದಾಗಿ ನಂಬಿಸುವುದು ಹೇಗೆ ಎಂದು ಪ್ರಶ್ನಿಸಿತ್ತು. ಅಲ್ಲದೇ ತನಿಖೆಗೆ ಮಧ್ಯಂತರ ತಡೆ ನೀಡಿರುವುದಲ್ಲದೆ, ತಕ್ಷಣವೇ ಬಂಧಿತನ ಬಿಡುಗಡೆ ಮಾಡಬೇಕು. ಅಷ್ಟೇ ಅಲ್ಲ, ಪ್ರಕರಣದಲ್ಲಿ ಸಂಬಂಧವಿಲ್ಲದವರನ್ನು ಬಂಧಿಸಿದ್ದು ಏಕೆ? ಎಂದು ಪ್ರಮಾಣಪತ್ರ ಸಲ್ಲಿಸಲು ತನಿಖಾಧಿಕಾರಿಗೆ ಸೂಚನೆ ನೀಡಿ ವಿಚಾರಣೆಯನ್ನು ಇಂದಿಗೆ ಅಂದರೆ ಜೂ.25ಕ್ಕೆ ಮುಂದೂಡಿತ್ತು.
ಅರ್ಜಿದಾರರ ಪರ ವಕೀಲ ಭರತ್ ಕುಮಾರ್ ವಾದ ಮಂಡಿಸಿದ್ದು, ಪ್ರಕರಣದಲ್ಲಿ ಆರೋಪವಿರುವುದು ಎಸ್‌ಐ ಮೇಲೆ ಮಾತ್ರ. ಆದರೆ ಇಡೀ ಕುಟುಂಬದವರ ವಿರುದ್ಧ ದೂರು ನೀಡಲಾಗಿದೆ. ಮಹಿಳೆಯ ದೂರು ಆಧರಿಸಿ ಆರೋಪಿಯ ಸಹೋದರನನ್ನು ಪೊಲೀಸರು ಬಂಧಿಸಿರುವುದು ಕಾನೂನು ಬಾಹಿರ ಕ್ರಮ. ಕೂಡಲೇ ಆತನ ಬಿಡುಗಡೆಗೆ ಆದೇಶ ನೀಡಬೇಕು ಎಂದು ಕೋರಿದ್ದರು.
