ಟಾಲಿವುಡ್ ಸ್ಟಾರ್ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅಭಿನಯದ ಮುಂಬರುವ ಆ್ಯಕ್ಷನ್ ಕಾಮಿಡಿ ಸಿನಿಮಾ ‘ಮಾ ಇಂಟಿ ಬಂಗಾರಂ’ ಸದ್ಯ ಭಾರಿ ಕುತೂಹಲ ಮೂಡಿಸಿದೆ. ಈ ಚಿತ್ರದಲ್ಲಿ ಕನ್ನಡದ ಹೀರೋ ದಿಗಂತ್ ಕೂಡ ನಟಿಸಿದ್ದಾರೆ. ಇದರ ನಡುವೆ ಚಿತ್ರದ ಕಥೆಯ ಬಗ್ಗೆ ಪ್ರಮುಖ ರಹಸ್ಯವೊಂದನ್ನು ನಿರ್ದೇಶಕಿ ನಂದಿನಿ ರೆಡ್ಡಿ ಬಿಚ್ಚಿಟ್ಟಿದ್ದಾರೆ. ಈ ಚಿತ್ರದ ಕಥೆಯು ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ ಸಾರ್ವಕಾಲಿಕ ಬ್ಲಾಕ್‌ಬಸ್ಟರ್ ‘ಬಾಷಾ’ ಸಿನಿಮಾದಿಂದ ಸ್ಫೂರ್ತಿ ಪಡೆದಿದೆ ಎಂದು ಅವರು ಹೇಳಿದ್ದಾರೆ.
ಮಾಧ್ಯಮವೊಂದರ ಜೊತೆ ಮಾತನಾಡಿರುವ ನಿರ್ದೇಶಕಿ ನಂದಿನಿ ರೆಡ್ಡಿ, ‘ಮಾ ಇಂಟಿ ಬಂಗಾರಂ ಸಿನಿಮಾ ಬಾಷಾ ರೀತಿಯ ಕಥೆಯನ್ನು ಹೊಂದಿದೆ. ಬಾಷಾ ಚಿತ್ರದಲ್ಲಿ ನಾಯಕನಿಗೆ ಒಂದು ಫ್ಲ್ಯಾಶ್‌ಬ್ಯಾಕ್ (ರಹಸ್ಯ ಹಿನ್ನೆಲೆ) ಇರುವಂತೆ, ಇಲ್ಲೂ ಕೂಡ ಮುಖ್ಯ ಪಾತ್ರಕ್ಕೆ ಒಂದು ದೊಡ್ಡ ಹಿನ್ನೆಲೆ ಇರುತ್ತದೆ. ಆದರೆ, ನಾವು ಆ ಟೆಂಪ್ಲೇಟ್‌ಗೆ ಸಣ್ಣದೊಂದು ಟ್ವಿಸ್ಟ್ ಕೊಟ್ಟಿದ್ದೇವೆ. ಓರ್ವ ಮಹಿಳೆ ಆ ಜಾಗದಲ್ಲಿದ್ದರೆ ಕಥೆ ಹೇಗೆ ಸಾಗುತ್ತದೆ ಎಂಬುದನ್ನು ಕೌತುಕವಾಗಿ ತೋರಿಸಿದ್ದೇವೆ’ ಎಂದು ಅವರು ಮಾಹಿತಿ ನೀಡಿದ್ದಾರೆ.
ಸಾಯಿ ಪಲ್ಲವಿ ಮಾಡಬೇಕಿದ್ದ ಪಾತ್ರ ಸಮಂತಾ ಪಾಲಾಗಿದ್ದು ಹೇಗೆ?
ಇತ್ತೀಚೆಗೆ ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡು ಆಸಕ್ತಿದಾಯಕ ವಿಷಯವೊಂದನ್ನು ಹಂಚಿಕೊಂಡಿದ್ದರು. ನಿರ್ದೇಶಕಿ ನಂದಿನಿ ರೆಡ್ಡಿ ಅವರು ಮೊದಲು ಈ ಚಿತ್ರದ ಕಥೆಯನ್ನು ಸಾಯಿ ಪಲ್ಲವಿ ಮನಸ್ಸಿನಲ್ಲಿಟ್ಟುಕೊಂಡು ಬರೆದಿದ್ದರಂತೆ. ಆದರೆ, ಸಾಯಿ ಪಲ್ಲವಿ ಬೇರೆ ಸಿನಿಮಾಗಳ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರಿಂದ ಈ ಚಿತ್ರ ಮಾಡಲು ಸಾಧ್ಯವಾಗಲಿಲ್ಲ. ಆ ಬಳಿಕ ಚಿತ್ರಕಥೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ಸಮಂತಾ ಅವರಿಗೆ ಸೂಟ್ ಆಗುವಂತೆ ಸಿದ್ಧಪಡಿಸಲಾಯಿತಂತೆ.
ಇದನ್ನೂ ಓದಿ: ಸಮಂತಾ ಸೆಟ್ನಲ್ಲಿ ಹೇಗಿರ್ತಾರೆ? ವಿವರಿಸಿದ ದಿಗಂತ್
ಕನ್ನಡದವರಾದ ನಟ ದಿಗಂತ್ , ಗುಲ್ಶನ್ ದೇವಯ್ಯ ನಟಿಸಿದ್ದಾರೆ, ಗೌತಮಿ, ಶ್ರೀಮುಖಿ, ಆನಂದ್, ಲಕ್ಷ್ಮಿ, ಶ್ರೀನಿವಾಸ್ ಗವಿರೆಡ್ಡಿ ಮತ್ತು ಮಂಜುಷಾ ಪೋಷಕ ಪಾತ್ರಗಳಲ್ಲಿದ್ದಾರೆ. ಸಮಂತಾ ಅವರ ಸ್ವಂತ ನಿರ್ಮಾಣ ಸಂಸ್ಥೆಯಾದ ‘ಟ್ರಾಲಿಲಾ ಮೂವಿಂಗ್ ಪಿಕ್ಚರ್ಸ್’ ಈ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಿಸಿದೆ. ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ‘ಯು/ಎ’ ಸರ್ಟಿಫಿಕೇಟ್ ಸಿಕ್ಕಿದ್ದು, ಚಿತ್ರದ ರನ್‌ಟೈಮ್ 2 ಗಂಟೆ, 34 ನಿಮಿಷ ಇರಲಿದೆ. ಜೂನ್ 19ರಂದು ಸಿನಿಮಾ ತೆರೆಗೆ ಬರುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
