ರಜನೀಕಾಂತ್ (Rajinikanth), ಭಾರತದ ನಂಬರ್ 1 ಸೂಪರ್ ಸ್ಟಾರ್. ರಜನೀಕಾಂತ್ ಅವರನ್ನು ಸ್ಟೈಲ್ ಕಿಂಗ್ ಎಂದೂ ಸಹ ಕರೆಯಲಾಗುತ್ತದೆ. ರಜನೀಕಾಂತ್ ಅವರಿಗೆ ಮೊದಲು ತಮಿಳು ಸಿನಿಮಾಗಳಲ್ಲಿ ಅವಕಾಶ ಸಿಕ್ಕಿದ್ದೇ ಅವರು ಮಾಡುತ್ತಿದ್ದ ಸ್ಟೈಲ್ನಿಂದ ಅದರಲ್ಲೂ ಅವರು ಸಿಗರೇಟನ್ನು ಬಾಯಿಗೆ ಎಸೆದುಕೊಳ್ಳುವ ಸ್ಟೈಲ್ ಈಗಲೂ ಜನಪ್ರಿಯ. ರಜನೀಕಾಂತ್ ತಮ್ಮ ಹಲವಾರು ಸಿನಿಮಾಗಳಲ್ಲಿ ಈ ಸಿಗರೇಟು ಸ್ಟೈಲ್ ಬಳಸಿದ್ದಾರೆ. ಅದರಿಂದಲೇ ಅವರಿಗೆ ದೊಡ್ಡ ಗುರುತು ಸಿಕ್ಕಿದೆ ಸಹ. ಆದರೆ ಆ ಸಿಗರೇಟು ಸ್ಟೈಲ್ ಅನ್ನು ರಜನೀಕಾಂತ್ ಕಲಿತಿದ್ದು ಕನ್ನಡದ ಸ್ಟಾರ್ ನಟನಿಂದ. ಈ ಬಗ್ಗೆ ಸ್ವತಃ ರಜನೀಕಾಂತ್ ಹಿಂದೊಮ್ಮೆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
ರಜನೀಕಾಂತ್ ಆಗಿನ್ನೂ ಬೆಂಗಳೂರಿನಲ್ಲಿ ಬಿಎಂಟಿಸಿ ಕಂಡೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಆಗ ವಿಷ್ಣುವರ್ಧನ್ ನಟನೆಯ ‘ನಾಗರಹಾವು’ ಸಿನಿಮಾ ಬಿಡುಗಡೆ ಆಗಿತ್ತು. ರಜನೀಕಾಂತ್ ಸಂದರ್ಶನದಲ್ಲಿ ಹೇಳಿಕೊಂಡಿರುವಂತೆ, ಅವರು ಡ್ಯೂಟಿ ಮುಗಿಸಿ, ಯೂನಿಫಾರ್ಮ್ ಸಹ ಕಳಚಿಡದೆ, ಟಿಕೆಟ್ ಬುಕ್ಗಳನ್ನು ಸಹ ಮರಳಿಸದೆ ‘ನಾಗರಹಾವು’ ಸಿನಿಮಾ ನೋಡಲು ಹೋಗಿದ್ದರಂತೆ.
ಇದನ್ನೂ ಓದಿ:ಸ್ವಚ್ಛತಾ ಕಾರ್ಮಿಕ ಮಹಿಳೆ ಪದ್ಮಮ್ಮನ ಸನ್ಮಾನಿಸಿದ ರಜನೀಕಾಂತ್: ಕಾರಣ?
ಅದೇ ‘ನಾಗರಹಾವು’ ಸಿನಿಮಾನಲ್ಲಿ ಅಂಬರೀಶ್ ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದ್ದರು. ಅವರ ಇಂಟ್ರೊಡಕ್ಷನ್ ಸೀನ್ ಸಖತ್ ಜನಪ್ರಿಯ ಆಗಿತ್ತು. ‘ಕ್ಯಾರೆ ಬುಲ್ ಬುಲ್ ಮಾತಾಡಕಿಲ್ವ’ ಎಂದು ಅಂಬರೀಶ್ ಸಖತ್ ಎಂಟ್ರಿ ಕೊಟ್ಟಿದ್ದರು. ಆ ಸೀನ್ನಲ್ಲಿ ಅಂಬರೀಶ್ ಸಿಗರೇಟನ್ನು ಬಾಯಿಗೆ ಎಸೆದುಕೊಳ್ಳುತ್ತಾರೆ. ಆ ಸೀನ್ ನೋಡಿದ್ದ ರಜನೀಕಾಂತ್ ಅದೇ ಸ್ಟೈಲ್ ಅನ್ನು ಕಾಪಿ ಮಾಡಿದರಂತೆ. ರಜನೀಕಾಂತ್, ಆ ಸಮಯದಲ್ಲಿ ಅಂಬರೀಶ್ ಫ್ಯಾನ್ ಆಗಿಬಿಟ್ಟಿದ್ದರಂತೆ. ‘ನಾಗರಹಾವು’ ಸಿನಿಮಾ 1972ರಲ್ಲಿ ಬಿಡುಗಡೆ ಆಗಿತ್ತು. ಅದಾಗಿ ಮೂರು ವರ್ಷಗಳ ಬಳಿಕ 1975 ರಲ್ಲಿ ರಜನೀಕಾಂತ್ ಅವರು ಮೊದಲ ಸಿನಿಮಾ ‘ಅಪೂರ್ವ ರಾಗಂಗಳ್’ನಲ್ಲಿ ನಟಿಸಿದರು.
ರಜನೀಕಾಂತ್ ಮತ್ತು ಅಂಬರೀಶ್ ಅವರು ಬಹಳ ಆತ್ಮೀಯ ಗೆಳೆಯರಾಗಿದ್ದರು. ಅಂಬರೀಶ್ ಕಾಲವಾದಾಗ ಬೆಂಗಳೂರಿಗೆ ಬಂದಿದ್ದ ರಜನೀಕಾಂತ್, ತಮ್ಮ ಹಾಗೂ ಅಂಬರೀಶ್ ನಡುವೆ ಇದ್ದ ಆತ್ಮೀಯತೆ ಬಗ್ಗೆ ಮಾತನಾಡಿದ್ದು, ಇಬ್ಬರೂ ಏಕವಚನದ ಗೆಳೆಯರಾಗಿದ್ದರು. ತಮ್ಮ ಆತ್ಮೀಯ ಗೆಳೆಯನನ್ನು ಕಳೆದುಕೊಂಡ ದುಃಖದಲ್ಲಿ ಕಣ್ಣೀರು ಹಾಕಿದ್ದರು ರಜನೀಕಾಂತ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
