ರಣಜಿ ಟ್ರೋಫಿ ಸೆಮಿಫೈನಲ್​; ನಾಯಕನಾಗಿ 2ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್ – Kannada News | Devdutt Padikkal’s 9th First Class Century and 3500 Runs Powers Karnataka in Ranji Trophy Semifinal

ಲಕ್ನೋದ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 2025-26ರ ರಣಜಿ ಟ್ರೋಫಿಯ ಸೆಮಿಫೈನಲ್‌ ಪಂದ್ಯದಲ್ಲಿ ಉತ್ತರಾಖಂಡ್ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಕರ್ನಾಟಕ ತಂಡ ಮೊದಲ ದಿನದಂದು ಅಮೋಘ ಪ್ರದರ್ಶನ ನೀಡಿದೆ. ಅನುಭವಿ ಆರಂಭಿಕ ಕೆಎಲ್ ರಾಹುಲ್ 141 ರನ್​ಗಳ ಉಪಯುಕ್ತ ಇನ್ನಿಂಗ್ಸ್ ಆಡಿದರೆ, ತಂಡದ ನಾಯಕ ದೇವದತ್ ಪಡಿಕ್ಕಲ್ ಅದ್ಭುತ ಶತಕ ಬಾರಿಸಿ ತಂಡವನ್ನು ಮುನ್ನಡೆಸಿದರು. ಇದು ಈ ಅವೃತ್ತಿಯ ರಣಜಿ ಟ್ರೋಫಿಯಲ್ಲಿ ಪಡಿಕ್ಕಲ್ ಅವರ ಎರಡನೇ ಶತಕವಾಗಿದ್ದು, ಒಟ್ಟಾರೆಯಾಗಿ, ಇದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಪಡಿಕ್ಕಲ್ ಅವರ ಒಂಬತ್ತನೇ ಶತಕವಾಗಿವಾಗಿದೆ. ಈ ಶತಕದಿಂದಾಗಿ ಪಡಿಕ್ಕಲ್ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 3,500 ರನ್‌ಗಳ ಗಡಿ ಕೂಡ ದಾಟಿದ್ದಾರೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡಕ್ಕೆ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕ ಮಯಾಂಕ್ ಅಗರ್ವಾಲ್ 5 ರನ್‌ಗಳಿಸಿ ಔಟಾದರು. ಹೀಗಾಗಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಪಡಿಕ್ಕಲ್, ಶತಕ ವೀರ ಕೆಎಲ್ ರಾಹುಲ್ (141) ಅವರೊಂದಿಗೆ 278 ರನ್‌ಗಳ ಬೃಹತ್ ಪಾಲುದಾರಿಕೆಯನ್ನು ರೂಪಿಸಿ ತಂಡವನ್ನು 300 ರನ್‌ಗಳ ಗಡಿ ದಾಟಿಸಿದರು. ಮೊದಲ ದಿನದಾಟದ ಎರಡನೇ ಸೆಷನ್​ನಲ್ಲಿ ಈ ಇಬ್ಬರು ಆಟಗಾರರು ತಮ್ಮ ತಮ್ಮ ಶತಕ ಪೂರೈಸಿದರು.

ಈ ಪಂದ್ಯದಲ್ಲಿ 116 ನೇ ರನ್‌ ಕಲೆಹಾಕಿದ ಕೂಡಲೇ ಪಡಿಕ್ಕಲ್ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 3,500 ರನ್‌ಗಳ ಗಡಿ ದಾಟಿದ್ದಾರೆ. 53 ಪಂದ್ಯಗಳಲ್ಲಿ 41 ಕ್ಕೂ ಹೆಚ್ಚು ಸರಾಸರಿಯಲ್ಲಿ ರನ್ ಕಲೆಹಾಕಿರುವ ಪಡಿಕ್ಕಲ್, ಈ ಮಾದರಿಯಲ್ಲಿ 19 ಅರ್ಧಶತಕಗಳನ್ನು ಬಾರಿಸಿದ್ದಾರೆ.

ಪ್ರಸ್ತುತ ರಣಜಿ ಆವೃತ್ತಿಯಲ್ಲಿ ಪಡಿಕ್ಕಲ್, ತಮ್ಮ ಮೊದಲ ಶತಕವನ್ನು ಪಂಜಾಬ್ ವಿರುದ್ಧ ಬಾರಿಸಿದ್ದರು. ಈ ಪಂದ್ಯದಲ್ಲಿ ಪಡಿಕ್ಕಲ್ ಕೇವಲ 85 ಎಸೆತಗಳಲ್ಲಿ ಅಜೇಯ 120 ರನ್​ಗಳ ಇನ್ನಿಂಗ್ಸ್ ಆಡಿದ್ದರು. ಈ ಆವೃತ್ತಿಯಲ್ಲಿ ಒಂಬತ್ತು ಇನ್ನಿಂಗ್ಸ್‌ಗಳನ್ನಾಡಿರುವ ಪಡಿಕ್ಕಲ್ 420 ಕ್ಕೂ ಹೆಚ್ಚು ರನ್‌ ಕೆಲಹಾಕಿದ್ದಾರೆ. ಇದರಲ್ಲಿ ಒಂದು ಅರ್ಧಶತಕದ ಜೊತೆಗೆ ಎರಡು ಶತಕಗಳು ಸೇರಿವೆ.

Source link

Leave a Reply

Your email address will not be published. Required fields are marked *