ಒಂದೇ ದಿನ ಮೆಟ್ರೋ ಮೊರೆ ಹೋದ 12 ಲಕ್ಷ ಜನ!
Image Credit source: google Gemini
ಬೆಂಗಳೂರು, ಮೇ 01: ಸಿಲಿಕಾನ್ ಸಿಟಿಯಲ್ಲಿ ಕಳೆದ ಬುಧವಾರ ಸುರಿದ ಭಾರೀ ಮಳೆ ಮತ್ತು ರಸ್ತೆಗಳಲ್ಲಾದ ಟ್ರಾಫಿಕ್ ಜಾಮ್‌ನಿಂದಾಗಿ ಹೈರಾಣಾದ ಜನರು ಅಕ್ಷರಶಃ ಮೆಟ್ರೋ (Namma Metro) ಮೊರೆ ಹೋಗಿದ್ದಾರೆ. ರಸ್ತೆಗಳೆಲ್ಲಾ ತುಂಬಿ ಮೊಣಕಾಲು ತನಕ ನೀರು ಬಂದಿತ್ತು. ಏಕಾಏಕಿ ಸುರಿದ ಮಳೆಗೆ ಅದೆಷ್ಟೋ ವಾಹನಗಳು ಕೈ ಕೊಟ್ಟ ಕಾರಣಕ್ಕೆ ಜನ ಓಲಾ, ಊಬರ್ ಕಡೆ ಮುಖ ಮಾಡಿದರೆ, ಹಲವರಿಗೆ ಬುಕಿಂಗ್ ಸಮಸ್ಯೆ ಎದುರಾಗಿತ್ತು. ಸರಿ, ಇದೆಲ್ಲರ ಸಹವಾಸವೇ ಬೇಡವೆಂದ ಬೆಂಗಳೂರಿಗರು ಕೊನೆಗೆ ಕಡೆ ಶಿಫ್ಟ್ ಆಗಿದ್ದರು. ಈ ಹಿನ್ನೆಲೆ ಅವತ್ತು ಒಂದೇ ದಿನ 12.85 ಲಕ್ಷ ಜನ ಮೆಟ್ರೋದಲ್ಲಿ ಸಂಚಾರ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇದರ ಪರಿಣಾಮವಾಗಿ ಏಪ್ರಿಲ್ 29ರಂದು ‘ನಮ್ಮ ಮೆಟ್ರೋ’ ಇತಿಹಾಸದಲ್ಲೇ ಅತ್ಯಧಿಕ ಪ್ರಯಾಣಿಕರು ಸಂಚರಿಸುವ ಮೂಲಕ ಹೊಸ ದಾಖಲೆ ನಿರ್ಮಾಣವಾಗಿದೆ.
ದಾಖಲೆಯ ಪ್ರಯಾಣಿಕರ ಸಂಖ್ಯೆ
ಸಾಮಾನ್ಯವಾಗಿ ಬೆಂಗಳೂರು ಮೆಟ್ರೋದಲ್ಲಿ ಪ್ರತಿನಿತ್ಯ ಸುಮಾರು 10 ಲಕ್ಷ ಪ್ರಯಾಣಿಕರು ಸಂಚರಿಸುತ್ತಾರೆ. ಆದರೆ, ಬುಧವಾರ ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದ್ದರಿಂದ, ಜನ ಸುರಕ್ಷಿತ ಮತ್ತು ವೇಗದ ಪ್ರಯಾಣಕ್ಕಾಗಿ ಮೆಟ್ರೋವನ್ನು ಆಯ್ದುಕೊಂಡಿದ್ದಾರೆ. ಅಂದು ಒಟ್ಟು 12,85,108 ಪ್ರಯಾಣಿಕರು ಮೆಟ್ರೋ ಬಳಸಿದ್ದು, ಇದು ಈ ಹಿಂದಿನ ಗರಿಷ್ಠ ದಾಖಲೆಯಾದ 10.87 ಲಕ್ಷವನ್ನು ಬೃಹತ್ ಅಂತರದಿಂದ ಹಿಂದಿಕ್ಕಿದೆ. ಕಳೆದ ತಿಂಗಳು ಬೆಂಗಳೂರಿನಲ್ಲಿ ಬಿಸಿಲಿನ ತಾಪ ವಿಪರೀತವಾಗಿದ್ದ ಸಂದರ್ಭದಲ್ಲಿ, ಜನರು ಬೈಕ್ ಮತ್ತು ಸ್ಕೂಟರ್‌ಗಳನ್ನು ಬಿಟ್ಟು ಎಸಿ ಸೌಲಭ್ಯವಿರುವ ಬಿಎಂಟಿಸಿ ಬಸ್‌ಗಳು ಹಾಗೂ ಮೆಟ್ರೋದತ್ತ ಮುಖ ಮಾಡಿದ್ದರು.
ಇದನ್ನೂ ಓದಿ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಪಿಂಕ್ ಲೈನ್ ಹಳಿ ಮೇಲೆ ಆರ್‌ಡಿಎಸ್‌ಒ ಪರೀಕ್ಷೆ ಆರಂಭ!
ಇಂಟರ್‌ಚೇಂಜ್ ನಿಲ್ದಾಣಗಳಲ್ಲಿ ಜನಜಂಗುಳಿ
ಇದೇ ವೇಳೆ ಮೆಜೆಸ್ಟಿಕ್ (ನಾಡಪ್ರಭು ಕೆಂಪೇಗೌಡ ನಿಲ್ದಾಣ) ಮತ್ತು ಆರ್.ವಿ. ರಸ್ತೆಯ ಇಂಟರ್‌ಚೇಂಜ್ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ವಿಪರೀತವಾಗಿತ್ತು. ಸುಮಾರು 2.52 ಲಕ್ಷ ಪ್ರಯಾಣಿಕರು ಈ ನಿಲ್ದಾಣಗಳನ್ನು ಬಳಸಿದ್ದಾರೆ ಎಂದು ತಿಳಿದುಬಂದಿದೆ. ಮಳೆಯ ಕಾರಣದಿಂದ ಆಟೋ ಮತ್ತು ಟ್ಯಾಕ್ಸಿಗಳ ದರ ಏರಿಕೆ ಹಾಗೂ ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ಜನರು ಮೆಟ್ರೋ ಕಡೆ ಮುಖ ಮಾಡಿದ್ದೇ ಈ ದಾಖಲೆಗೆ ಪ್ರಮುಖ ಕಾರಣವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
