ಅಹಮದಾಬಾದ್, ಜೂನ್ 25: ಗುಜರಾತ್ನ ಅಹಮದಾಬಾದ್ನಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಜೆ ವಿಮಾನ(Flight) ಅಪಘಾತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಏರ್ ಇಂಡಿಯಾ ವಿಮಾನವೊಂದು ತಪ್ಪು ತಿರುವು ಪಡೆದಿದ್ದರಿಂದ, ರನ್ವೇ ಕಡೆಗೆ ಸಾಗುತ್ತಿದ್ದ ಇಂಡಿಗೋ ವಿಮಾನದ ಎದುರೇ ಬಂದು ನಿಂತಿತ್ತು. ಏರ್ ಟ್ರಾಫಿಕ್ ಕಂಟ್ರೋಲ್ (ATC) ಅಧಿಕಾರಿಗಳು ಸಮಯಪ್ರಜ್ಞೆ ಮೆರೆದು ತಕ್ಷಣವೇ ಎರಡೂ ವಿಮಾನಗಳನ್ನು ತಡೆದಿದ್ದರಿಂದ ನೂರಾರು ಪ್ರಯಾಣಿಕರ ಪ್ರಾಣ ಉಳಿದಿದೆ.
ಕೇವಲ 200 ಮೀಟರ್ ಅಂತರದಲ್ಲಿ ನಿಂತ ವಿಮಾನಗಳು
ಬುಧವಾರ ಸಂಜೆ 6.30 ರ ಸುಮಾರಿಗೆ ಮುಂಬೈನಿಂದ ಅಹಮದಾಬಾದ್ಗೆ ಬಂದಿಳಿದ ಏರ್ ಇಂಡಿಯಾ ವಿಮಾನ (AI-2493), ರನ್ವೇಯಿಂದ ಪಾರ್ಕಿಂಗ್ ಬೇ ಕಡೆಗೆ ಹೋಗುವಾಗ ಪೈಲಟ್ ಮಾಡಿದ ಸಣ್ಣ ತಪ್ಪು ತಿರುವು ಇಡೀ ಆತಂಕಕ್ಕೆ ಕಾರಣವಾಯಿತು.
ಏರ್ ಇಂಡಿಯಾ ವಿಮಾನ ಸಕ್ರಿಯ ಟ್ಯಾಕ್ಸಿವೇಗೆ (ವಿಮಾನಗಳು ಚಲಿಸುವ ಮಾರ್ಗ) ಪ್ರವೇಶಿಸಿತು. ಇದೇ ಸಮಯದಲ್ಲಿ ಮುಂಬೈಗೆ ಟೇಕ್-ಆಫ್ ಆಗಲು ಸಿದ್ಧವಾಗುತ್ತಿದ್ದ ಇಂಡಿಗೋ ವಿಮಾನ (6E-5160) ಅದೇ ಮಾರ್ಗದಲ್ಲಿ ವೇಗವಾಗಿ ಬರುತ್ತಿತ್ತು. ಇದನ್ನು ಗಮನಿಸಿದ ವಾಯು ಸಂಚಾರ ನಿಯಂತ್ರಣ (ATC) ಸಿಬ್ಬಂದಿ ತಕ್ಷಣವೇ ಮಧ್ಯಪ್ರವೇಶಿಸಿ ಇಬ್ಬರೂ ಪೈಲಟ್ಗಳಿಗೆ ವಿಮಾನ ನಿಲ್ಲಿಸುವಂತೆ ತುರ್ತು ಸಂದೇಶ ರವಾನಿಸಿದರು. ಪರಿಣಾಮವಾಗಿ, ಎರಡೂ ವಿಮಾನಗಳು ಮುಖಾಮುಖಿಯಾಗುವ ಕೇವಲ 200 ಮೀಟರ್ ಮುಂಚಿತವಾಗಿಯೇ ಸ್ತಬ್ಧಗೊಂಡವು.
ಮತ್ತಷ್ಟು ಓದಿ:
Video: ಲುಫ್ಥಾನ್ಸಾ ಬೋಯಿಂಗ್ ವಿಮಾನದ ಲ್ಯಾಂಡಿಂಗ್ ಗೇರ್ ಕುಸಿತ, ಹಲವರಿಗೆ ಗಾಯ
ಸುರಕ್ಷಿತವಾಗಿ ಪಾರ್ಕಿಂಗ್ ಬೇ ತಲುಪಿದ ವಿಮಾನ
ಸಾಮಾನ್ಯ ಸ್ಥಿತಿಗೆ ಮರಳಿದ ಸಂಚಾರ: ಅಪಘಾತದ ಭೀತಿ ದೂರಾದ ಬಳಿಕ, ತಪ್ಪು ತಿರುವು ಪಡೆದಿದ್ದ ಏರ್ ಇಂಡಿಯಾ ವಿಮಾನವನ್ನು ನೆಲದ ಸಹಾಯದ ಮೂಲಕ ಸುರಕ್ಷಿತವಾಗಿ ಅದರ ನಿಗದಿತ ಪಾರ್ಕಿಂಗ್ ಬೇಗೆ ಎಳೆದುಕೊಂಡು ಹೋಗಲಾಯಿತು. ಇದರ ನಂತರ ಇಂಡಿಗೋ ವಿಮಾನವು ಸಾಮಾನ್ಯ ಕಾರ್ಯಾಚರಣೆಯೊಂದಿಗೆ ಸುರಕ್ಷಿತವಾಗಿ ಮುಂಬೈಗೆ ಹಾರಾಟ ನಡೆಸಿ ತಲುಪಿದೆ.
ತನಿಖೆಗೆ ಆದೇಶಿಸಿದ ನಾಗರಿಕ ವಿಮಾನಯಾನ ಸಂಸ್ಥೆ
ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಅಥವಾ ವಿಮಾನಗಳಿಗೆ ಹಾನಿಯಾಗಿಲ್ಲ ಎಂದು ಎರಡೂ ವಿಮಾನಯಾನ ಸಂಸ್ಥೆಗಳು ಅಧಿಕೃತ ಪ್ರಕಟಣೆಯಲ್ಲಿ ದೃಢಪಡಿಸಿವೆ. ಅಪಘಾತಕ್ಕೆ ಸಿಲುಕಲಿದ್ದ ಎರಡೂ ವಿಮಾನಗಳು ಏರ್ಬಸ್ A320 ಮಾದರಿಯಾಗಿದ್ದು, ತಲಾ 150 ರಿಂದ 180 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದ್ದವು. ಈ ಗಂಭೀರ ಲೋಪದ ಬಗ್ಗೆ ನಾಗರಿಕ ವಿಮಾನಯಾನ ನಿಯಂತ್ರಕರಿಗೆ (DGCA) ಮಾಹಿತಿ ನೀಡಲಾಗಿದ್ದು, ಘಟನೆಗೆ ನಿಖರ ಕಾರಣವೇನು ಎಂಬುದರ ಬಗ್ಗೆ ತನಿಖೆ ಆರಂಭಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ