Headlines

ರಶ್ಮಿಕಾ-ವಿಜಯ್ ಚಿತ್ರಕ್ಕೆ ವಿಲನ್ ಆದ ಹಾಲಿವುಡ್​ನ ‘ದಿ ಮಮ್ಮಿ’ ಚಿತ್ರದ ಖಳ – Kannada News | The Mummy Star Arnold Vosloo is Villain for Vijay Rashmika Starrer Ranbaali

ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಬ್ಯಾಕ್-ಟು-ಬ್ಯಾಕ್ ಸರ್ಪ್ರೈಸ್ ಸಿಗುತ್ತಿದೆ. ‘ಡಿಯರ್ ಕಾಮ್ರೇಡ್’ ಚಿತ್ರ ರಿಲೀಸ್ ಆದ ಏಳು ವರ್ಷಗಳ ನಂತರ, ಈ ಜೋಡಿ ರಾಹುಲ್ ಸಾಂಕೃತ್ಯನ್
ನಿರ್ದೇಶನದ ‘ರಣಬಾಲಿ’ ಚಿತ್ರದ (Ranabaali) ಮೂಲಕ ಮತ್ತೆ ಒಂದಾಗುತ್ತಿದೆ. ಮದುವೆಯ ನಂತರದ ಮೊದಲ ಸಿನಿಮಾ ಇದಾಗಿರುವುದರಿಂದ ಕುತೂಹಲ ಹೆಚ್ಚಿದೆ. ನಿರ್ಮಾಣ ಸಂಸ್ಥೆಯಾದ ಮೈತ್ರಿ ಮೂವಿ ಮೇಕರ್ಸ್ ಚಿತ್ರದ ಪವರ್‌ಫುಲ್ ವಿಲನ್ ಪಾತ್ರವನ್ನು ಪರಿಚಯಿಸಿದ್ದು, ಇಡೀ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದೆ. ಹೌದು, ಹಾಲಿವುಡ್‌ನ ಖ್ಯಾತ ವಿಲನ್ ಈಗ ರಣಬಾಲಿಗೆ ಎಂಟ್ರಿ ಕೊಟ್ಟಿದ್ದಾರೆ.

ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯು ‘ರಣಬಾಲಿ’ ಚಿತ್ರದ ಮುಖ್ಯ ಖಳನಾಯಕ ಸರ್ ಥಿಯೋಡರ್ ಹೆಕ್ಟರ್ ಪಾತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದೆ. ಇದರಲ್ಲಿ ‘ದಿ ಮಮ್ಮಿ’ ಚಿತ್ರದ ಖ್ಯಾತಿಯ ಹಾಲಿವುಡ್ ನಟ ಅರ್ನಾಲ್ಡ್ ವೋಸ್ಲೂ ನಟಿಸಿದ್ದಾರೆ. ಬ್ರಿಟಿಷ್ ಅಧಿಕಾರಿಯ ರಾಯಲ್ ಲುಕ್‌ನಲ್ಲಿ, ಕೈಯಲ್ಲಿ ಚಿನ್ನದ ಕತ್ತಿ ಹಿಡಿದು ಕಾಣಿಸಿಕೊಂಡಿದ್ದಾರೆ. ಇವರ ಹಿನ್ನೆಲೆಯಲ್ಲಿ ಕೋಟೆಯೊಂದು ಧಗಧಗನೆ ಉರಿಯುತ್ತಿರುವುದನ್ನು ಕಾಣಬಹುದು. ಈ ಫಸ್ಟ್ ಲುಕ್ ಹಂಚಿಕೊಂಡಿರುವ ಚಿತ್ರತಂಡ, ‘ದಿ ಡೆಮನ್ ಆಫ್ ಡ್ರಾಟ್, ಸರ್ ಥಿಯೋಡರ್ ಹೆಕ್ಟರ್. ದಿ ಮಮ್ಮಿ ಚಿತ್ರದಲ್ಲಿ ಇಮ್ಹೋಟೆಪ್ ಪಾತ್ರದ ಮೂಲಕ ಜಗತ್ತನ್ನೇ ನಡುಗಿಸಿದ್ದ ಅರ್ನಾಲ್ಡ್ ವೋಸ್ಲೂ ಈಗ ರಣಬಾಲಿ ಚಿತ್ರದಲ್ಲಿ ಕ್ರೂರ ಸರ್ ಥಿಯೋಡರ್ ಹೆಕ್ಟರ್ ಆಗಿ ಅಬ್ಬರಿಸಲಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ಸುಸ್ವಾಗತ’ ಎಂದು ಟ್ವೀಟ್ ಮಾಡಿದೆ.

ಚಿತ್ರದ ಫಸ್ಟ್ ಲುಕ್ ಅನ್ನು ರೀ-ಪೋಸ್ಟ್ ಮಾಡಿದ ನಿರ್ದೇಶಕ ರಾಹುಲ್ ಸಾಂಕೃತ್ಯನ್, ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ತಮಗೆ ಚಿಕ್ಕವನಿದ್ದಾಗ ‘ದಿ ಮಮ್ಮಿ’ ಆಲ್-ಟೈಮ್ ಫೇವರಿಟ್ ಸಿನಿಮಾ ಆಗಿತ್ತು ಎಂದು ನೆನೆದಿರುವ ಅವರು, ಅದರಲ್ಲಿ ಎಲ್ಲ ಪಾತ್ರಗಳೂ ಇಷ್ಟವಾಗಿದ್ದರೂ, ಆ ವಿಲನ್ ಪಾತ್ರವನ್ನು ನೋಡಿಯೇ ಜಗತ್ತಿನಲ್ಲಿ ರಾಕ್ಷಸರು ನಿಜವಾಗಿಯೂ ಇರುತ್ತಾರೆ ಎಂದು ತಾವು ನಂಬಿದ್ದಾಗಿ ಹೇಳಿದ್ದಾರೆ. ಅಲ್ಲದೆ, ತಮ್ಮ ಬಾಲ್ಯದ ಫೇವರಿಟ್ ವಿಲನ್ ಎದುರು ತಾವೇ ನಿಲ್ಲುತ್ತೇನೆ ಎಂದು ಅಂದುಕೊಂಡಿರಲಿಲ್ಲ, ಇದು ವಿಧಿ ಬರಹ ಎಂದು ಭಾವುಕರಾಗಿದ್ದಾರೆ.

ಇದನ್ನೂ ಓದಿ: ಮದುವೆ ಬಳಿಕ ‘ರಣಬಾಲಿ’ ಚಿತ್ರೀಕರಣಕ್ಕೆ ಬಂದ ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ

63 ವರ್ಷದ ಅರ್ನಾಲ್ಡ್ ವೋಸ್ಲೂ ಮೂಲತಃ ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದವರು. ಇವರ ಪೋಷಕರೂ ರಂಗಭೂಮಿ ಕಲಾವಿದರಾಗಿದ್ದರಿಂದ ಇವರಿಗೂ ನಟನೆ ರಕ್ತಗತವಾಗಿ ಬಂದಿತ್ತು. 1980ರ ದಶಕದ ಕೊನೆಯಲ್ಲಿ ಅಮೆರಿಕಾಗೆ ವಲಸೆ ಹೋದ ಅರ್ನಾಲ್ಡ್, 1987ರಲ್ಲಿ ‘ಗೋರ್’ ಸಿನಿಮಾ ಮೂಲಕ ಹಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಆದರೆ ಇವರಿಗೆ ಜಾಗತಿಕ ಮಟ್ಟದಲ್ಲಿ ದೊಡ್ಡ ಬ್ರೇಕ್ ನೀಡಿದ್ದು 1999ರಲ್ಲಿ ಬಂದ ಸ್ಟೀಫನ್ ಸೋಮರ್ಸ್ ನಿರ್ದೇಶನದ ಬ್ಲಾಕ್‌ಬಸ್ಟರ್ ಮೂವಿ ‘ದಿ ಮಮ್ಮಿ’. ಇದರಲ್ಲಿ ಇವರು ನಟಿಸಿದ ‘ಇಮ್ಹೋಟೆಪ್’ ಎಂಬ ಪುರಾತನ ಈಜಿಪ್ಟ್ ಅರ್ಚಕನ ಪಾತ್ರ ಇತಿಹಾಸ ಸೃಷ್ಟಿಸಿತು. ಈ ಸಿನಿಮಾ ವಿಶ್ವಾದ್ಯಂತ ಬರೋಬ್ಬರಿ 422.50 ಮಿಲಿಯನ್ ಡಾಲರ್ ಗಳಿಸಿತ್ತು. ನಂತರ 2001ರಲ್ಲಿ ಬಂದ ಇದರ ಸೀಕ್ವೆಲ್ ‘ದಿ ಮಮ್ಮಿ ರಿಟರ್ನ್ಸ್’ 436 ಮಿಲಿಯನ್ ಡಾಲರ್ ಬಾಚಿಕೊಂಡಿತ್ತು. ಆ ಬಳಿಕ ಅವರು ಹಲವು ಸಿನಿಮಾ ಹಾಗೂ ಟಿವಿ ಸೀರಿಸ್​​ಗಳಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *