ರಷ್ಯನ್ ಎಲ್​ಎನ್​ಜಿಯನ್ನು ಖರೀದಿಸಲಿರುವ ಭಾರತ; ಎಲ್​ಪಿಜಿ, ಪಿಎನ್​ಜಿ, ಎಲ್​ಎನ್​ಜಿಗಿರುವ ವ್ಯತ್ಯಾಸಗಳೇನು?

ರಷ್ಯನ್ ಎಲ್​ಎನ್​ಜಿಯನ್ನು ಖರೀದಿಸಲಿರುವ ಭಾರತ; ಎಲ್​ಪಿಜಿ, ಪಿಎನ್​ಜಿ, ಎಲ್​ಎನ್​ಜಿಗಿರುವ ವ್ಯತ್ಯಾಸಗಳೇನು?

ನವದೆಹಲಿ, ಮಾರ್ಚ್ 27: ಇರಾನ್ ಯುದ್ಧದ ಪರಿಣಾಮ ಇಂಧನ ಬಿಕ್ಕಟ್ಟು ಉದ್ಭವವಾಗಿದೆ. ಕಚ್ಛಾ ತೈಲ, ಎಲ್​ಪಿಜಿ, ಎಲ್​ಎನ್​ಜಿಗಳ (LNG – Liquefied Natural Gas) ಪೂರೈಕೆ ವ್ಯತ್ಯಯಗೊಂಡಿದೆ. ಈ ಸಂದರ್ಭದಲ್ಲಿ ಭಾರತಕ್ಕೆ ರಷ್ಯಾ ಆಪದ್ಬಾಂಧವ ಎನಿಸಿದೆ. ರಷ್ಯಾದಿಂದ ಕಚ್ಛಾ ತೈಲದ ಖರೀದಿಯನ್ನು ಭಾರತ ಪುನಾರಂಭಿಸಿದೆ. ಇದೇ ವೇಳೆ ಎಲ್​ಎನ್​ಜಿಯನ್ನೂ ರಷ್ಯಾದಿಂದ ಪಡೆಯಲು ಭಾರತ ಯೋಜಿಸಿದೆ. ಅಮೆರಿಕದ ಅನುಮತಿ ಪಡೆದೇ ಭಾರತವು ರಷ್ಯಾದಿಂದ ತೈಲ ಖರೀದಿ ಮಾಡುತ್ತಿದೆ. ಈಗ ಎಲ್​ಎನ್​ಜಿ ಖರೀದಿಗೂ ಅಮೆರಿಕದ ಅನುಮತಿ ಸಿಗುವ ನಿರೀಕ್ಷೆ ಇದೆ.

ರಷ್ಯಾದಿಂದ ಎಲ್​ಎನ್​ಜಿ ಸಿಕ್ಕರೆ ಭಾರತದ ಇಂಧನ ಬಿಕ್ಕಟ್ಟಿನ ಸಮಸ್ಯೆಗೆ ಒಂದು ಮಟ್ಟಕ್ಕೆ ಪರಿಹಾರ ಸಿಗಬಹುದು. ಉಕ್ರೇನ್ ಯುದ್ಧ ಶುರುವಾದಾಗಿನಿಂದ ರಷ್ಯಾದಿಂದ ಭಾರತಕ್ಕೆ ಎಲ್​ಎನ್​ಜಿ ಪೂರೈಕೆ ನಿಂತಿತ್ತು. ಕೇವಲ ಕಚ್ಛಾ ತೈಲದ ಪೂರೈಕೆ ಮಾತ್ರವೇ ನಡೆಯುತ್ತಿದ್ದುದು. ಈಗ ಭಾರತಕ್ಕೆ ರಷ್ಯಾದ ಎಲ್​ಎನ್​ಜಿ ಪೂರೈಕೆ ಪುನಾರಂಭಗೊಳ್ಳುವುದು ಬಹುತೇಕ ಖಚಿತವಾಗಿದೆ. ಭಾರತವು ಎಲ್​ಎನ್​ಜಿ ಪಡೆಯಲು ಒಪ್ಪಿಕೊಂಡಿದ್ದೇ ಆದಲ್ಲಿ ಕೆಲವೇ ವಾರಗಳಲ್ಲಿ ವ್ಯವಸ್ಥೆ ಪೂರ್ಣವಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಆಪರೇಷನ್ ಊರ್ಜಾ ಸುರಕ್ಷಾ; ಏನಿದು ವಿಶೇಷ ಕಾರ್ಯಾಚರಣೆ?

ಏನಿದು ಎಲ್​ಎನ್​ಜಿ? ಎಲ್​ಪಿಜಿಗೂ ಅದಕ್ಕೂ ಏನು ವ್ಯತ್ಯಾಸ?

ಎಲ್​ಎನ್​ಜಿ ಒಂದು ನೈಸರ್ಗಿಕ ಅನಿಲ. ಎಲ್​ಪಿಜಿ ಒಂದು ಪೆಟ್ರೋಲಿಯಂ ಗ್ಯಾಸ್. ಎರಡೂ ಕೂಡ ಧ್ರವರೂಪಕ್ಕೆ ಇಳಿಸಲಾಗಿರುವ ಅನಿಲಗಳೇ ಆಗಿವೆ. ಹಾಗೆಯೇ ಎರಡೂ ಕೂಡ ಬೇರೆ ಬೇರೆ ಗುಣ ಇರುವ ಗ್ಯಾಸ್ ಆಗಿವೆ.

ತೈಲ ಸಂಸ್ಕರಣೆ ಪ್ರಕ್ರಿಯೆ ವೇಳೆ ಬರುವ ಪ್ರೊಪೇನ್, ಬುಟೇನ್ ಇತ್ಯಾದಿ ಅನಿಲಗಳು ಪೆಟ್ರೋಲಿಯಂ ಗ್ಯಾಸ್ ಎನಿಸುತ್ತವೆ. ಇದು ಗಾಳಿಗಿಂತ ಭಾರದ್ದಾಗಿರುತ್ತದೆ. ಈ ಪ್ರೊಪೇನ್, ಬುಟೇನ್ ಅನ್ನು ಧ್ರವ ರೂಪಕ್ಕೆ ಇಳಿಸಿ ಸಾಗಿಸಲಾಗುತ್ತದೆ.

ಎಲ್​ಎನ್​ಜಿಯಲ್ಲಿ ನೈಸರ್ಗಿಕ ಅನಿಲವಾದ ಮೀಥೇನ್ ಇರುತ್ತದೆ. ಕ್ರಯೋಜೆನಿಕ್ ವಿಧಾನದಲ್ಲಿ ಮೈನಸ್ 162 ಡಿಗ್ರಿ ಸೆಲ್ಷಿಸ್ ಶೀತದಲ್ಲಿ ಇದನ್ನು ಧ್ರವರೂಪಕ್ಕೆ ತರಲಾಗುತ್ತದೆ. ಈ ಅನಿಲವನ್ನು ಹಡಗುಗಳಲ್ಲಿ ಸಾಗಿಸಲೆಂದೇ ಧ್ರವರೂಪಕ್ಕೆ ತರಲಾಗುವುದು. ಅದಕ್ಕೆ ಇದನ್ನು ಲಿಕ್ವಿಫೈಡ್ ನ್ಯಾಚುರಲ್ ಗ್ಯಾಸ್ ಎನ್ನುವುದು.

ಇದನ್ನೂ ಓದಿ: ಗೃಹೇತರ ಬಳಕೆಯ ಎಲ್​ಪಿಜಿ, ಹೆಚ್ಚುವರಿ ಶೇ. 20 ಹಂಚಿಕೆ; ಒಟ್ಟು ಪೂರೈಕೆ ಶೇ. 70ಕ್ಕೆ ಏರಿಕೆ

ಪಿಎನ್​ಜಿಗೂ ಎಲ್​ಎನ್​ಜಿಗೂ ಏನು ವ್ಯತ್ಯಾಸ?

ಪಿಎನ್​ಜಿ ಮತ್ತು ಎಲ್​ಎನ್​ಜಿ ಎರಡೂ ಕೂಡ ಮೀಥೇನ್​ಯುಕ್ತ ನೈಸರ್ಗಿಕ ಅನಿಲಗಳೇ. ಒಂದೇ ವ್ಯತ್ಯಾಸ ಎಂದರೆ ಮೀಥೇನ್ ಅನ್ನು ಧ್ರವರೂಪಕ್ಕೆ ತಂದರೆ ಅದು ಎಲ್​ಎನ್​ಜಿ ಆಗುತ್ತದೆ. ಈ ಎಲ್​ಎನ್​ಜಿಯನ್ನು ಬಳಸಬೇಕಾದರೆ ಅದನ್ನು ಮತ್ತೆ ಗ್ಯಾಸ್ ರೂಪಕ್ಕೆ ತರಬೇಕು. ಈ ಗ್ಯಾಸ್ ಅನ್ನು ಪೈಪ್​ಗಳ ಮೂಲಕ ಸರಬರಾಜು ಮಾಡಿದರೆ ಅದು ಪಿಎನ್​ಜಿ ಎನಿಸುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *