ಬೆಂಗಳೂರು ಏಪ್ರಿಲ್ 24: ರಸ್ತೆ ಬದಿ ನಡೆದು ಹೋಗುತ್ತಿದ್ದ ಯುವತಿಯ ಜೊತೆ ಅಸಭ್ಯ ವರ್ತನೆ ಮತ್ತು ಕಿರುಕುಳ ನೀಡಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರಿನ (Bengaluru) ಯಲಹಂಕ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಯುವಕರು ಆನ್‌ಲೈನ್ ಗ್ರೋಸರಿ ಡೆಲಿವರಿ ಕೆಲಸ ಮಾಡಿಕೊಂಡಿದ್ದವರು ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ. ಮಂಗಳವಾರ ಮಧ್ಯಾಹ್ನ ಮಾರುತಿನಗರದ ಕೋಗಿಲು ಮುಖ್ಯ ರಸ್ತೆಯಲ್ಲಿ ಆರೋಪಿಗಳು ಯುವತಿ ಜೊತೆ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿದ್ದರು.
ಬೈಕ್ನಲ್ಲಿ ತೆರಳುತ್ತಿದ್ದ ಆರೋಪಿಗಳು ಪಾದಚಾರಿ ಯುವತಿಯ ಜೊತೆ ಅಸಭ್ಯವಾಗಿ ವರ್ತಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಯಲಹಂಕ ಪೊಲೀಸರು ಈ ಬಗ್ಗೆ ಸ್ವಯಂ ಪ್ರೇರಿತ (ಸುಮೋಟೋ ಕೇಸ್) ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಬಂಧಿತರನ್ನು ಸಿಂಗನಾಯಕನಹಳ್ಳಿ ನಿವಾಸಿ ಹರೀಶ್ ಮತ್ತು ಆವಲಹಳ್ಳಿ ನಿವಾಸಿ ಪ್ರಜ್ವಲ್ ಎಂದು ಗುರುತಿಸಲಾಗಿದೆ. ಈ ಇಬ್ಬರೂ ತುಮಕೂರು ಜಿಲ್ಲೆಯ ಪಾವಗಡ ಮೂಲದವರಾಗಿದ್ದು, 10ನೇ ತರಗತಿ ಉತ್ತೀರ್ಣರಾಗದ ಹಿನ್ನೆಲೆ ನಗರಕ್ಕೆ ಬಂದು ಡೆಲಿವರಿ ಬಾಯ್ಸ್ ಆಗಿ ಕೆಲಸ ಮಾಡುತ್ತಿದ್ದರು ಎಂಬುದು ಗೊತ್ತಾಗಿದೆ.
ಇದನ್ನೂ ಓದಿ: ದಾವಣಗೆರೆ ಉಪಚುನಾವಣೆ ಅಭ್ಯರ್ಥಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ; ಮನೆಗೆ ನುಗ್ಗಿ ಅಟ್ಯಾಕ್ ಮಾಡಿದ ಗ್ಯಾಂಗ್!
ಯಲಹಂಕದಿಂದ ಬಾಗಲೂರು ಕಡೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿ ಹತ್ತಿರ ಹೋಗಿ ಅಸಭ್ಯವಾಗಿ ಸ್ಪರ್ಶಿಸಿ ಆರೋಪಿಗಳು ಕಿರುಕುಳ ನೀಡಿದ್ದರು. ಈ ಘಟನೆ ಆರೋಪಿಗಳ ಸ್ಕೂಟರ್ ಹಿಂಬದಿಯಲ್ಲಿ ಬರುತ್ತಿದ್ದ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ದಾಖಲಾಗಿದ್ದು, ನಂತರ ಬೆಳಕಿಗೆ ಬಂದಿತ್ತು. ಯುವತಿ ಮತ್ತೊಬ್ಬಳೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿಗಳು ಪಕ್ಕದಿಂದ ಹಾದು ಹೋಗುವ ವೇಳೆ ಲೈಂಗಿಕ ಕಿರುಕುಳ ನೀಡಿದ್ದರು. ಹೀಗಿದ್ದರೂ ಘಟನೆ ಬಗ್ಗೆ ಯುವತಿ ಪೊಲೀಸರಿಗೆ ದೂರು ನೀಡಿರಲಿಲ್ಲ. ಸ್ಕೂಟರ್‌ನ ನೋಂದಣಿ ಸಂಖ್ಯೆಯ ಆಧಾರದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿರೋದಾಗಿ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
