ನವದೆಹಲಿ, ಜುಲೈ 3: ‘ಇಬ್ಬರ ಜಗಳ ಮೂರನೆಯವರಿಗೆ ಲಾಭ’ ಎಂಬ ಮಾತೊಂದಿದೆ. ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಜಗಳದಿಂದ ಬಿಜೆಪಿಗೆ ಲಾಭವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ದಶಕಗಳಿಂದ ಬಿಜೆಪಿಯ ಪ್ರಮುಖ ರಾಜಕೀಯ ಟಾರ್ಗೆಟ್ ಆಗಿದ್ದ ಕಾಂಗ್ರೆಸ್‌ನ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ (Digvijay Singh) ಅವರನ್ನು ಇದೀಗ ಮಧ್ಯಪ್ರದೇಶ ಬಿಜೆಪಿ ನಾಯಕರು ಕೊಂಡಾಡುತ್ತಿದ್ದಾರೆ. ಸ್ವಪಕ್ಷದ ವಿರುದ್ಧವೇ ಹೇಳಿಕೆ ನೀಡಿ ಕಾಂಗ್ರೆಸ್‌ನಲ್ಲಿ ಆಂತರಿಕ ಕಲಹಕ್ಕೆ ಕಾರಣವಾಗಿರುವ ದಿಗ್ವಿಜಯ್ ಸಿಂಗ್ ಅವರಿಗೆ ಬಿಜೆಪಿ ಶಾಸಕರೊಬ್ಬರು ಬಹಿರಂಗವಾಗಿಯೇ ಪಕ್ಷಕ್ಕೆ ಆಹ್ವಾನ ನೀಡಿದ್ದು, ಅವರನ್ನು ಬಿಜೆಪಿ ರಾಜರಂತೆ ನಡೆಸಿಕೊಳ್ಳುತ್ತದೆ ಎಂದು ಹೇಳಿದ್ದಾರೆ. ಈ ದಿಢೀರ್ ಬದಲಾವಣೆಗೆ ಕಾರಣವೇನು ಗೊತ್ತಾ?
ದಶಕಗಳಿಂದ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರು ಬಿಜೆಪಿಯ ನೆಚ್ಚಿನ ರಾಜಕೀಯ ಗುರಿಯಾಗಿದ್ದರು. ಕಾಂಗ್ರೆಸ್‌ನ ಓಲೈಕೆಯ ರಾಜಕಾರಣಿ ಎಂದು ಬ್ರಾಂಡ್ ಮಾಡುವುದರಿಂದ ಹಿಡಿದು, ಚುನಾವಣಾ ಪ್ರಚಾರಗಳ ಕೇಂದ್ರಬಿಂದುವಾಗಿಸುವವರೆಗೆ ಬಿಜೆಪಿ ಅವರ ಮೇಲೆ ವಾಗ್ದಾಳಿ ನಡೆಸುವ ಯಾವುದೇ ಅವಕಾಶವನ್ನು ಬಿಡುತ್ತಿರಲಿಲ್ಲ. ಆದರೆ ಈ ವಾರ ಬಿಜೆಪಿ ನಾಯಕರ ವರಸೆ ಸಂಪೂರ್ಣ ಬದಲಾಗಿದೆ. ಇದೀಗ ಬಿಜೆಪಿ ನಾಯಕರು ದಿಗ್ವಿಜಯ ಸಿಂಗ್ ಅವರನ್ನು ಟೀಕಿಸುವ ಬದಲು ಶ್ಲಾಘಿಸುತ್ತಿದ್ದಾರೆ. ಒಬ್ಬ ಬಿಜೆಪಿ ಶಾಸಕರಂತೂ ಅವರಿಗೆ ಪಕ್ಷಕ್ಕೆ ಸೇರುವಂತೆ ಆಹ್ವಾನ ನೀಡಿ, ಅವರನ್ನು “ರಾಜರಂತೆ” ನಡೆಸಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ!
ಇದನ್ನೂ ಓದಿ: ಆರೆಸ್ಸೆಸ್, ಬಿಜೆಪಿಯ ಸಂಘಟನಾ ಶಕ್ತಿ ಶ್ಲಾಘಿಸಿದ ಮಾಜಿ ಸಿಎಂ ದಿಗ್ವಿಜಯ ಸಿಂಗ್; ಕಾಂಗ್ರೆಸ್ಸನ್ನು ಕಿಚಾಯಿಸಿದ ಬಿಜೆಪಿ
ತಮ್ಮದೇ ಪಕ್ಷವು ಮುಖ್ಯಮಂತ್ರಿ ಮೋಹನ್ ಯಾದವ್ ವಿರುದ್ಧ ಮಾಡಿದ್ದ ಪ್ರಮುಖ ಭ್ರಷ್ಟಾಚಾರದ ಆರೋಪವನ್ನು ದಿಗ್ವಿಜಯ್ ಸಿಂಗ್ ಸಾರ್ವಜನಿಕವಾಗಿ ತಳ್ಳಿಹಾಕಿದ ಬೆನ್ನಲ್ಲೇ ಈ ನಾಟಕೀಯ ಬೆಳವಣಿಗೆ ನಡೆದಿದೆ. ಇದು ಮಧ್ಯಪ್ರದೇಶ ಕಾಂಗ್ರೆಸ್‌ನಲ್ಲಿ ತೀವ್ರ ಮುಜುಗರದ ಆಂತರಿಕ ಕಲಹಕ್ಕೆ ಕಾರಣವಾಗಿದೆ. ತಮ್ಮ ಮಗನ ರಾಜಕೀಯ ಭವಿಷ್ಯವನ್ನು ರಕ್ಷಿಸಿಕೊಳ್ಳಲು ದಿಗ್ವಿಜಯ ಸಿಂಗ್ ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರ ವಿರೋಧಿ ಅಭಿಯಾನವನ್ನು ಬುಡಮೇಲು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರೇ ಅವರ ಮೇಲೆ ಗಂಭೀರ ಆರೋಪ ಹೊರಿಸಿದ್ದಾರೆ.
ವಿವಾದಕ್ಕೆ ಕಾರಣವೇನು?:
ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಜಿತು ಪಟವಾರಿ ಅವರು ಉಜ್ಜಯಿನಿಯ ವೀರ ಭಾರತ ನ್ಯಾಸ್ ಟ್ರಸ್ಟ್‌ಗೆ ಸಂಬಂಧಿಸಿದ ಅಕ್ರಮಗಳ ಕುರಿತು ಮುಖ್ಯಮಂತ್ರಿ ಮೋಹನ್ ಯಾದವ್ ಅವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದರು. ಮುಖ್ಯಮಂತ್ರಿಗಳ ಕುಟುಂಬ ಮತ್ತು ಸಹಚರರಿಗೆ ಸಂಬಂಧಿಸಿದ ಭೂ ವಹಿವಾಟುಗಳ ವರದಿಗಳನ್ನು ಉಲ್ಲೇಖಿಸಿದ್ದ ಪಟವಾರಿ, ಸುಮಾರು 500 ಕೋಟಿ ರೂ. ಮೌಲ್ಯದ ಸರ್ಕಾರಿ ಜಮೀನನ್ನು ಟ್ರಸ್ಟ್‌ಗೆ ಕೇವಲ 1 ರೂ.ಗೆ ಹಸ್ತಾಂತರಿಸಲಾಗಿದೆ ಎಂದು ಆರೋಪಿಸಿದ್ದರು. ಆದರೆ, ಕೆಲವು ದಿನಗಳ ನಂತರ ಉಜ್ಜಯಿನಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದಿಗ್ವಿಜಯ ಸಿಂಗ್, “ನನ್ನ ಬಳಿ ಎಲ್ಲಾ ಸಂಬಂಧಿತ ದಾಖಲೆಗಳಿವೆ. ಆ ಜಮೀನನ್ನು ಖಾಸಗಿ ಟ್ರಸ್ಟ್‌ಗೆ ನೀಡಿಲ್ಲ, ಸರ್ಕಾರಿ ಟ್ರಸ್ಟ್‌ಗೆ ನೀಡಲಾಗಿದೆ. ಸೂಕ್ತ ಸಂಶೋಧನೆ ಇಲ್ಲದೆ ನಾನು ಯಾವುದೇ ವಿಷಯದ ಬಗ್ಗೆ ಎಂದಿಗೂ ಪ್ರತಿಕ್ರಿಯಿಸುವುದಿಲ್ಲ” ಎಂದು ಹೇಳಿದ್ದರು. ಅಷ್ಟೇ ಅಲ್ಲದೆ, ಸುಳ್ಳು ಆರೋಪಗಳನ್ನು ಮಾಡುವ ದಲ್ಲಾಳಿಗಳಿಗೆ ಏನೂ ಕೊರತೆಯಿಲ್ಲ ಎಂದೂ ಅವರು ಹೇಳಿಕೆ ನೀಡಿದ್ದರು.
ಇದನ್ನೂ ಓದಿ: ನಮ್ಮ ಪಕ್ಷದಲ್ಲೂ ಶಿಸ್ತು ಬೇಕು; ಆರ್ಎಸ್ಎಸ್ ಕುರಿತ ದಿಗ್ವಿಜಯ ಸಿಂಗ್ ಹೇಳಿಕೆಗೆ ಶಶಿ ತರೂರ್ ಬೆಂಬಲ
ಈ ಹೇಳಿಕೆಯನ್ನು ಅನೇಕ ಕಾಂಗ್ರೆಸ್ ನಾಯಕರು ತಮ್ಮದೇ ಪಕ್ಷದ ವಿರುದ್ಧ ಮಾಡಿದ ವಾಗ್ದಾಳಿ ಎಂದು ಅರ್ಥೈಸಿಕೊಂಡರು. ಆದರೆ ನಂತರ ದಿಗ್ವಿಜಯ ಸಿಂಗ್ ಅವರು, ತಮ್ಮ ಹೇಳಿಕೆ ಪತ್ರಕರ್ತರೊಬ್ಬರನ್ನು ಉದ್ದೇಶಿಸಿ ಮಾಡಿದ್ದೇ ಹೊರತು ಜಿತು ಪಟವಾರಿ ಅಥವಾ ಯಾವುದೇ ಕಾಂಗ್ರೆಸ್ ಸಹೋದ್ಯೋಗಿಯನ್ನಲ್ಲ ಎಂದು ಸ್ಪಷ್ಟನೆ ನೀಡಿದರು.
ದಿಗ್ವಿಜಯ್ ಬೆನ್ನಿಗೆ ನಿಂತ ಬಿಜೆಪಿ:
ದಿಗ್ವಿಜಯ್ ಸಿಂಗ್ ಅವರ ಈ ಹೇಳಿಕೆಯನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳಲು ಬಿಜೆಪಿ ಮುಂದಾಯಿತು. ಹಲವು ಬಾರಿ ದಿಗ್ವಿಜಯ ಸಿಂಗ್ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದ ಬಿಜೆಪಿ ವಕ್ತಾರ ಡಾ. ಹಿತೇಶ್ ಬಾಜಪೇಯಿ, ಸಾರ್ವಜನಿಕ ಹೇಳಿಕೆ ನೀಡುವ ಮುನ್ನ ಅಧಿಕೃತ ದಾಖಲೆಗಳನ್ನು ಪರಿಶೀಲಿಸಿದ್ದಕ್ಕಾಗಿ ದಿಗ್ವಿಜಯ ಸಿಂಗ್ ಅವರನ್ನು ಶ್ಲಾಘಿಸಿದರು. ಬಿಜೆಪಿ ಶಾಸಕ ಪ್ರೀತಮ್ ಲೋಧಿ ಅವರು ದಿಗ್ವಿಜಯ ಸಿಂಗ್ ಅವರಿಗೆ ಪಕ್ಷಾಂತರ ಮಾಡುವಂತೆ ಬಹಿರಂಗ ಆಹ್ವಾನ ನೀಡಿದರು. ದಿಗ್ವಿಜಯ ಸಿಂಗ್ ಅವರನ್ನು “ಎಲ್ಲರಿಗೂ ಸಹಾಯ ಮಾಡುವ ಒಳ್ಳೆಯ ಹಿರಿಯ ಮನುಷ್ಯ” ಎಂದು ಕರೆದ ಲೋಧಿ, ಕಾಂಗ್ರೆಸ್ ತನ್ನ ಹಿರಿಯ ನಾಯಕನಿಗೆ ಗೌರವ ನೀಡುತ್ತಿಲ್ಲ ಎಂದು ಆರೋಪಿಸಿದರು. “ದಿಗ್ವಿಜಯ್ ಸಿಂಗ್ ಬಿಜೆಪಿಗೆ ಸೇರಿದರೆ, ನಾವು ಅವರನ್ನು ರಾಜರಂತೆ ನಡೆಸಿಕೊಳ್ಳುತ್ತೇವೆ” ಎಂದು ಅವರು ಹೇಳಿದರು.
ವರಸೆ ಬದಲಿಸಿದ ದಿಗ್ವಿಜಯ ಸಿಂಗ್:
ಬಳಿಕ, ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಕಾಂಗ್ರೆಸ್ ಹೈಕಮಾಂಡ್ ತಕ್ಷಣವೇ ಒಗ್ಗಟ್ಟು ಪ್ರದರ್ಶಿಸಲು ಮುಂದಾಯಿತು. ದಿಗ್ವಿಜಯ ಸಿಂಗ್ ಮತ್ತು ಜಿತು ಪಟವಾರಿ ಒಟ್ಟಿಗೆ ಸುದ್ದಿಗಾರರ ಮುಂದೆ ಬಂದು, ಮೋಹನ್ ಯಾದವ್ ಸರ್ಕಾರದ ಭೂ ಹಗರಣದ ವಿರುದ್ಧ ಇಡೀ ಪಕ್ಷ ಒಗ್ಗಟ್ಟಾಗಿದೆ ಎಂದು ಜಂಟಿ ಹೇಳಿಕೆ ನೀಡಿದರು. ಜಿತು ಪಟವಾರಿ ನನಗೆ ಮಗನಿದ್ದಂತೆ, ನಾನು ಕಾಂಗ್ರೆಸ್ ನಾಯಕರ ವಿರುದ್ಧ ‘ದಲ್ಲಾಳಿ’ ಪದ ಬಳಸಲು ಸಾಧ್ಯವೇ ಇಲ್ಲ ಎಂದು ದಿಗ್ವಿಜಯ ಸಿಂಗ್ ವಿವಾದಕ್ಕೆ ತಣ್ಣೀರೆರಚಲು ಪ್ರಯತ್ನಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 3:30 pm, Fri, 3 July 26
