ಜೈಪುರ, ಜುಲೈ 01: ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ದೆಹಲಿ–ಮುಂಬೈ ಎಕ್ಸ್‌ಪ್ರೆಸ್‌ವೇನಲ್ಲಿ ಬುಧವಾರ ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಋಷಿಕೇಶ್‌ನಿಂದ ಮಧ್ಯಪ್ರದೇಶದ ಇಂದೋರ್‌ಗೆ ತೆರಳುತ್ತಿದ್ದ ಬಸ್ ಬೆಳಗ್ಗಿನ ಜಾವ ಸುಮಾರು 3.30ರ ವೇಳೆಗೆ ಟ್ರಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡಿದ್ದು ಎರಡೂ ವಾಹನಗಳು ಸುಟ್ಟು ಕರಕಲಾಗಿವೆ. ಅವಘಡದಲ್ಲಿ 8 ಮಂದಿ ಮೃತಪಟ್ಟಿದ್ದು, 22ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಮಾಹಿತಿ ಇದೆ.
ಅಧಿಕಾರಿಗಳ ಪ್ರಕಾರ, ಮೇಲಿನ ಸೀಟ್ಗಳಲ್ಲಿ ಮಲಗಿದ್ದ ಕೆಲವರು ಕೆಳಗೆ ಬಿದ್ದಿದ್ದಾರೆ. ಸುಟ್ಟ ಗಾಯಗಳಿಂದ ಐವರು ಹಾಗೂ ತಲೆಗೆ ಗಂಭೀರ ಗಾಯಗಳಾಗಿ ಇಬ್ಬರು ಮೃತಪಟ್ಟಿದ್ದಾರೆ. ಮೃತರ ಪೈಕಿ ಹೆಚ್ಚಿನವರು ಅಪಘಾತ ಸಂಭವಿಸಿದ ವೇಳೆ ನಿದ್ರೆಯಲ್ಲಿದ್ದವರು ಎಂಬುದು ಗೊತ್ತಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು, ಅಗ್ನಿಶಾಮಕ ದಳ ಹಾಗೂ ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಗಾಯಗೊಂಡವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಮೃತದೇಹಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ಓದಿ: ಮುಂಬೈನಲ್ಲಿ ಭೀಕರ ದುರಂತ; ಶಾಲಾ ಬಸ್ ಮೇಲೆ ದೊಡ್ಡ ಮರ ಬಿದ್ದು 11 ವರ್ಷದ ವಿದ್ಯಾರ್ಥಿ ಸಾವು
ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಬಸ್ ಚಾಲಕ ನಿದ್ರೆಗೆ ಜಾರಿರುವ ಸಾಧ್ಯತೆ ಹಾಗೂ ಅತಿವೇಗವೂ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಬೆಂಕಿ ಕಾಣಿಸಿಕೊಂಡ ಸುಮಾರು ಒಂದು ಗಂಟೆಯ ಬಳಿಕ ಬಸ್‌ನಲ್ಲಿ ಸಿಲುಕಿದ್ದವರನ್ನು ರಕ್ಷಿಸಲು ಸಾಧ್ಯವಾದ ಕಾರಣವೇ ಸಾವು ನೋವುಗಳ ಸಮಖ್ಯೆ ಹೆಚ್ಚಾಗಿದೆ ಎನ್ನಲಾಗಿದೆ.
ಅಶೋಕ್ ಗೆಹ್ಲೋಟ್ ಸಂತಾಪ
ಇನ್ನು ಅಪಘಾತದಲ್ಲಿ ಮೃತಪಟ್ಟವರಿಗೆ ರಾಜಸ್ಥಾನ ಮಾಜಿ ಸಿಎಂ ಅಶೋಕ್ ಗೆಹ್ಲೋಟ್ ಸಂತಾಪ ಸೂಚಿಸಿದ್ದಾರೆ. ದೌಸಾ ಜಿಲ್ಲೆಯ ದೆಹಲಿ–ಮುಂಬೈ ಎಕ್ಸ್‌ಪ್ರೆಸ್‌ವೇನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಹಲವರು ಮೃತಪಟ್ಟಿರುವ ಸುದ್ದಿ ಅತ್ಯಂತ ದುಃಖಕರವಾಗಿದೆ. ಈ ದುರಂತದಲ್ಲಿ ತಮ್ಮ ಆತ್ಮೀಯರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳನ್ನು ಸಲ್ಲಿಸುತ್ತೇನೆ. ಈ ಕಠಿಣ ಸಮಯವನ್ನು ಎದುರಿಸುವ ಶಕ್ತಿಯನ್ನು ಭಗವಂತ ಅವರು ಅವರಿಗೆ ನೀಡಲಿ ಹಾಗೂ ಅಗಲಿದ ಆತ್ಮಗಳಿಗೆ ಚಿರಶಾಂತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ. ಗಾಯಗೊಂಡಿರುವ ಎಲ್ಲರೂ ಶೀಘ್ರ ಗುಣಮುಖರಾಗಲಿ ಎಂದು ಹಾರೈಸೋದಾಗಿ ಅವರು ಎಕ್ಸ್ ಪೋಸ್ಟ್ ಮಾಡಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 11:23 am, Wed, 1 July 26
