
ಹುಬ್ಬಳ್ಳಿ, ಮಾರ್ಚ್ 29: ಇರಾನ್ ಇಸ್ರೇಲ್, ಅಮೆರಿಕಾ ನಡುವೆ ನಡೆಯುತ್ತಿರುವ ಯುದ್ದದಿಂದಾಗಿ (War) ನಮ್ಮ ದೇಶದ ಮೇಲೆ ಅನೇಕ ರೀತಿಯ ಪರಿಣಾಮಗಳಾಗುತ್ತಿವೆ. ಈಗಾಗಲೇ ಸಿಲಿಂಡರ್ ಅಭಾವ ಉಂಟಾಗಿದ್ದು, ಆಮದು, ರಫ್ತು ವ್ಯವಹಾರ ಕಡಿಮೆಯಾಗಿರೋದರಿಂದ ಅನೇಕ ವಸ್ತುಗಳ ಬೆಲೆ ಕೂಡ ಹೆಚ್ಚಾಗುತ್ತಿವೆ. ಇದರ ಜೊತೆಗೆ ಇದೀಗ ರಸಗೊಬ್ಬರಕ್ಕೂ ಅಭಾವ (Fertilizer Shortage) ಉಂಟಾಗುವ ಆತಂಕ ಎದುರಾಗಿದೆ. ಈ ಬಾರಿ ಮುಂಗಾರು ಬಿತ್ತನೆಗೆ ರಸಗೊಬ್ಬರ ಸಿಗುತ್ತೋ, ಇಲ್ವೋ ಅನ್ನೋ ಆತಂಕ ರೈತರನ್ನು ಕಾಡುತ್ತಿದೆ.
ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕಾ ನಡೆಸುತ್ತಿರುವ ಯುದ್ದ, ಸದ್ಯಕ್ಕೆ ಮುಗಿಯುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಇದರಿಂದ ಜಾಗತಿಕ ಮಟ್ಟದ ಎಲ್ಲಾ ದೇಶಗಳ ಮೇಲೆ ಅನೇಕ ವ್ಯತಿರಿಕ್ತ ಪರಿಣಾಮಗಳಾಗುತ್ತಿದ್ದು, ಅದಕ್ಕೆ ಭಾರತ ಕೂಡ ಹೊರತಾಗಿಲ್ಲ. ಈಗಾಗಲೇ ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಅಭಾವ ಕಾಡುತ್ತಿದೆ. ಅನೇಕ ವಸ್ತುಗಳ ಬೆಲೆ ಕೂಡ ಹೆಚ್ಚಾಗಿವೆ. ಇನ್ನು ಈ ಯುದ್ಧ ರೈತರ ಮೇಲೆ ಕೂಡ ಅನೇಕ ದುಷ್ಪರಿಣಾಮ ಬೀರಿದೆ.
ಇದನ್ನೂ ಓದಿ: ಚಿಯಾ ಬೆಳೆಗಾರರಿಗೆ ತಟ್ಟಿದ ಯುದ್ಧದ ಬಿಸಿ: ಸರ್ರನೆ ಕುಸಿದ ದರ; ಬೀದರ್ ರೈತರು ಕಂಗಾಲು
ರಫ್ತು ಮಾಡಲಾಗದಿರುವುದರಿಂದ ಟೊಮ್ಯಾಟೋ, ಈರುಳ್ಳಿ ಸೇರಿದಂತೆ ಅನೇಕ ತರಕಾರಿ, ಆಹಾರ ಪದಾರ್ಥಗಳಿಗೆ ಸೂಕ್ತ ಬೆಲೆ ಸಿಗದೇ ರೈತರು ಕಂಗಾಲಾಗಿದ್ದಾರೆ. ಇದರ ಜೊತೆಗೆ ಇದೀಗ ಗೊಬ್ಬರ ಅಭಾವದ ಆತಂಕ ರೈತರನ್ನು ಕಾಡುತ್ತಿದೆ. ರೈತರು ಹೆಚ್ಚಾಗಿ ಬಳಸುವುದು ಯೂರಿಯಾ, ಡಿಎಪಿ ಗೊಬ್ಬರ. ಆದರೆ ಈ ಗೊಬ್ಬರಗಳನ್ನು ಸಿದ್ಧ ಮಾಡಲು ಬೇಕಾಗುವ ಅನೇಕ ಕಚ್ಚಾವಸ್ತುಗಳು ಬರುವುದು ಗಲ್ಫ್ ಸೇರಿದಂತೆ ಅನೇಕ ವಿದೇಶಗಳಿಂದ. ಇದೀಗ ಯುದ್ದದಿಂದಾಗಿ ಕಚ್ಚಾವಸ್ತುಗಳಿಗೆ ತೊಂದರೆಯಾಗಿದ್ದು, ರಸಗೊಬ್ಬರ ತಯಾರಿಕೆಗೆ ಸಮಸ್ಯೆಯಾಗ್ತಿದೆಯಂತೆ. ಇದು ರೈತರ ಆತಂಕವನ್ನು ಹೆಚ್ಚಿಸುತ್ತಿದೆ.
ರಸಗೊಬ್ಬರ ಅಂಗಡಿ ಮಾಲೀಕರು ಹೇಳುವುದೇನು?
ಈಗಾಗಲೇ ಧಾರವಾಡ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಬೇಸಿಗೆಯ ಮಳೆ ಸುರಿದಿದೆ. ರೈತರು ಕೆಲವೇ ದಿನಗಳಲ್ಲಿ ಭೂಮಿ ಹದಮಾಡುವ ಕೆಲಸ ಆರಂಭಿಸಲಿದ್ದು, ಮೇ ಮೊದಲ ವಾರದಲ್ಲಿಯೇ ಬಿತ್ತನೆ ಆರಂಭಿಸಲಿದ್ದಾರೆ. ಈ ಸಮಯದಲ್ಲಿ ರೈತರಿಗೆ ಹೆಚ್ಚಿನ ಗೊಬ್ಬರದ ಅವಶ್ಯಕತೆ ಇದೆ. ಆದರೆ ಇದೇ ಪರಿಸ್ಥಿತಿ ಮುಂದುವರಿದರೆ ಮೇ, ಜೂನ್ ತಿಂಗಳಲ್ಲಿ ದೇಶದಲ್ಲಿ ರಸಗೊಬ್ಬರ ಅಭಾವ ಕಾಡಲಿದೆ ಎಂಬುವುದು ರಸಗೊಬ್ಬರ ಅಂಗಡಿ ಮಾಲೀಕರಾದ ಲಿಂಬಯ್ಯಸ್ವಾಮಿ ಮಾತು.
ಪರ್ಯಾಯ ಗೊಬ್ಬರಗಳ ಬಳಕೆಗೆ ಉತ್ತೇಜನ
ಧಾರವಾಡ ಜಿಲ್ಲೆಯೊಂದಕ್ಕೆ ವಾರ್ಷಿಕ 57 ಸಾವಿರ ಟನ್ ರಸಗೊಬ್ಬರ ಅವಶ್ಯಕತೆ ಇದೆ. ಸದ್ಯ ರಸಗೊಬ್ಬರ ಇದೆ ಅಂತ ಅಂಗಡಿ ಮಾಲೀಕರು ಹೇಳುತ್ತಿದ್ದರು ಕೂಡ, ಬಹುತೇಕ ಕಡೆ ಯೂರಿಯಾ, ಡಿಎಪಿ ಗೊಬ್ಬರ ಸಿಗುತ್ತಿಲ್ಲ. ಬಿತ್ತನೆ ಆರಂಭವಾದ ಮೇಲೆ ರಸಗೊಬ್ಬರ ಸಿಗದಿದ್ದರೆ ರೈತರ ಆಕ್ರೋಶ ಹೆಚ್ಚಾಗುವ ಸಾಧ್ಯತೆಯಿದೆ. ಈಗಾಗಲೇ ಕೃಷಿ ಇಲಾಖೆ ಅಧಿಕಾರಿಗಳು ರಸಗೊಬ್ಬರ ಅಂಗಡಿ ಮಾಲೀಕರ ಜೊತೆ ಸಭೆ ಕೂಡ ಮಾಡಿದ್ದಾರಂತೆ. ಕೇಂದ್ರ ರಸಗೊಬ್ಬರ ಇಲಾಖೆ ಕೂಡ ಈ ಬಗ್ಗೆ ಸಭೆ ಮಾಡಿದೆ. ಭವಿಷ್ಯದಲ್ಲಿ ಉಂಟಾಗುವ ಸಮಸ್ಯೆ ಬಗ್ಗೆ ಚರ್ಚಿಸಿದ್ದು, ರೈತರು, ಯೂರಿಯಾ, ಡಿಎಪಿ ಬದಲಾಗಿ ಪರ್ಯಾಯ ಗೊಬ್ಬರಗಳ ಬಳಕೆಗೆ ಉತ್ತೇಜಿಸುವಂತೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ಇಂಧನ ಕೊರತೆ ವದಂತಿ: ಕೊಪ್ಪಳದಲ್ಲಿ ಪೆಟ್ರೋಲ್ ತುಂಬಿಸಲು ಬ್ಯಾರಲ್ ತಂದ ಜನ!
ಕೆಲವೇ ದಿನಗಳಲ್ಲಿ ಬಿತ್ತನೆ ಆರಂಭವಾಗಲಿದ್ದು, ಕೇಂದ್ರ ಸರ್ಕಾರ ಇನ್ನಷ್ಟು ಕ್ರಮಗಳನ್ನು ಕೈಗೊಂಡು, ಆಗುವ ಸಮಸ್ಯೆಗೆ ಪರಿಹಾರ ಕಲ್ಪಿಸುವ ಕೆಲಸ ಮಾಡಬೇಕಿದೆ. ಬಿತ್ತನೆ ಸಮಯದಲ್ಲಿ ಗೊಬ್ಬರದ ಅಭಾವವಾದರೆ ರೈತರಿಗೆ ದೊಡ್ಡ ಮಟ್ಟದಲ್ಲಿ ತೊಂದರೆಯಾಗಲಿದ್ದು, ಈ ನಿಟ್ಟಿನಲ್ಲಿ ಈಗಿನಿಂದಲೇ ರಾಜ್ಯ ಮತ್ತು ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.