ರಾಜ್ಯದಲ್ಲಿ ಮಳೆ ಅವಾಂತರ: ಬಂಟ್ವಾಳದ ಹಲವು ಗ್ರಾಮಗಳು ಜಲಾವೃತ, ಕಬಿನಿ ನದಿ ಪಾತ್ರದಲ್ಲಿಯೂ ಪ್ರವಾಹದ ಭೀತಿ – Kannada News | Rain Havoc in Karnataka: Heavy Flooding in Dakshina Kannada, Tree Fall in Shivamogga

ಬಂಟ್ವಾಳದ ಹಲವು ಗ್ರಾಮಗಳು ಜಲಾವೃತImage Credit source: Tv9 Kannada

ಮಂಗಳೂರು/ಶಿವಮೊಗ್ಗ ಆಗಸ್ಟ್​​ 02: ಕರ್ನಾಟಕದಾದ್ಯಂತ ಮುಂಗಾರು ಮಳೆಯ ಅಬ್ಬರ ಮುಂದುವರಿದಿದ್ದು, ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ವ್ಯಾಪಕ ಹಾನಿ ಉಂಟಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಜೊತೆಗೆ ಎಎಂಆರ್ ಜಲಾಶಯದಿಂದ ಅಪಾರ ಪ್ರಮಾಣದ ನೀರನ್ನು ನದಿಗೆ ಬಿಡುಗಡೆ ಮಾಡಲಾಗಿದೆ. ಇದರ ಪರಿಣಾಮವಾಗಿ ಬಂಟ್ವಾಳ ತಾಲೂಕಿನ ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡು, ಜನ ಪರದಾಟ ನಡೆಸಿದ್ದಾರೆ.

ಪಾಣೆಮಂಗಳೂರು ಬಳಿಯ ಅಲಡ್ಕ, ಬೊಗೊಡಿ, ನಂದಾವರ, ಗುಡಿನಬಳಿ, ಕಂಚಿಕಾರಪೇಟೆ, ಬಸ್ತಪಡ್ಪು, ಅಕ್ಕರಂಗಡಿ, ಜಕ್ರಿಬೆಟ್ಟು, ಅಜಿಲಮೊಗರು ಗ್ರಾಮ ಮತ್ತು ನಾವೂರು ಗ್ರಾಮಗಳು ಪ್ರವಾಹದ ಭೀತಿಯನ್ನು ಎದುರಿಸುತ್ತಿವೆ. ಈ ಪ್ರದೇಶಗಳಲ್ಲಿ ಅಂಗಡಿಗಳಿಗೆ ನೀರು ನುಗ್ಗಿದ್ದು, ಸ್ಥಳೀಯ ವರ್ತಕರು ತಮ್ಮ ಸಾಮಾನು ಸರಂಜಾಮುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಪರದಾಡಿದ್ದಾರೆ. ನಿನ್ನೆ ಸಂಜೆಯಿಂದ ನೇತ್ರಾವತಿ ನದಿ ನೀರಿನ ಪ್ರಮಾಣ ಮತ್ತಷ್ಟು ಹೆಚ್ಚಾಗಿದ್ದು, ನದಿಪಾತ್ರದ ಜನವಸತಿ ಪ್ರದೇಶಗಳಿಗೂ ನೀರು ನುಗ್ಗುತ್ತಿದೆ. ಇದರಿಂದಾಗಿ ನದಿ ಪಾತ್ರದಲ್ಲಿ ಪ್ರವಾಹದ ಭೀತಿ ಹೆಚ್ಚಾಗಿದೆ.

ಇದನ್ನೂ ಓದಿ: ಯಡಕುಮಾರಿ–ಶ್ರೀವಾಗಿಲು ರೈಲು ನಿಲ್ದಾಣಗಳ ನಡುವೆ ಭೂಕುಸಿತ: ಕರಾವಳಿ-ಬೆಂಗಳೂರು ಸಂಪರ್ಕಿಸುವ ಹಲವು ರೈಲುಗಳ ಸಂಚಾರ ವ್ಯತ್ಯಯ

ನೇತ್ರಾವತಿ ನದಿಯ ನೀರಿನ ಹರಿವು ದಾಖಲೆ ಮಟ್ಟಕ್ಕೆ ಏರಿಕೆ

ಪರಿಸ್ಥಿತಿಯ ಗಂಭೀರತೆಯನ್ನು ಅರಿತು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡವು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿಗೆ ಆಗಮಿಸಿದೆ. ಜಿಲ್ಲಾಧಿಕಾರಿಗಳು ಪರಿಸ್ಥಿತಿಯ ಕುರಿತು ಸಭೆ ನಡೆಸಿ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದಾರೆ. ಪಶ್ಚಿಮಘಟ್ಟ ಮತ್ತು ಕರಾವಳಿ ಎರಡೂ ಭಾಗಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನೇತ್ರಾವತಿ ನದಿಯ ನೀರಿನ ಹರಿವು ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ.

ಚಲಿಸುತ್ತಿದ್ದ ಗೂಡ್ಸ್ ವಾಹನದ ಮೇಲೆ ಬಿದ್ದ ಮರ

ಮಳೆಯ ಜೊತೆಗಿನ ಬಿರುಗಾಳಿಗೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲೂ ಅವಾಂತರ ಸೃಷ್ಟಿಯಾಗಿದೆ. ಬರುವೆ ಗ್ರಾಮದ ಆಚಾರ್ ಕೇರಿ ಬಳಿ ಬೃಹತ್ ಮರವೊಂದು ಚಲಿಸುತ್ತಿದ್ದ ಗೂಡ್ಸ್ ವಾಹನದ (ಪಿಕಪ್ ವಾಹನ) ಮೇಲೆ ಉರುಳಿಬಿದ್ದಿದೆ. ತರಕಾರಿ ಮಾರಾಟ ಮುಗಿಸಿ ಮನೆಗೆ ವಾಪಸ್ ಬರುತ್ತಿದ್ದ ಚಾಲಕ ತೌಸಿಫ್ ಮರದಡಿಯಲ್ಲಿ ಸಿಲುಕಿಕೊಂಡಿದ್ದರು. ಅದೃಷ್ಟವಶಾತ್, ತೌಸಿಫ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ತಕ್ಷಣವೇ ರಿಪ್ಪನ್ ಪೇಟೆ ಪೊಲೀಸ್ ಠಾಣೆಯ ಪೊಲೀಸರು ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿ ಧಾವಿಸಿ, ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿದ್ದಾರೆ.

ಕಬಿನಿ ಜಲಾಶಯದಿಂದ 25,000 ಕ್ಯೂಸೆಕ್ ನೀರು ಬಿಡುಗಡೆ

ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಒಂದಾದ ಕಬಿನಿ ಜಲಾಶಯದಿಂದ ಬಿಡುಗಡೆ ಮಾಡುವ ನೀರಿನ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಈ ಹಿಂದೆ 10,000 ರಿಂದ 12,000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗುತ್ತಿತ್ತು. ಆದರೆ, ಈಗ ಒಟ್ಟು 25,000 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಏಕಾಏಕಿ ಹೆಚ್ಚಿನ ಪ್ರಮಾಣದ ನೀರನ್ನು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಕಬಿನಿ ನದಿ ಪಾತ್ರದಲ್ಲಿ ಪ್ರವಾಹದ ಭೀತಿ ಎದುರಾಗಿದೆ. ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮತ್ತು ಎಚ್ಚರಿಕೆ ವಹಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಜಲಾಶಯದ ಒಳಹರಿವು ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿದ್ದು, ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಆತಂಕವಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *