ಬೆಂಗಳೂರು, ಜು. 27: ರಾಜ್ಯದ ಬರ ಪರಿಸ್ಥಿತಿ, ನೀರಿನ ಪರಿಸ್ಥಿತಿ, ಕಾವೇರಿ, ಮಹದಾಯಿ, ಮೇಕೆದಾಟು, ಕೃಷ್ಣ ಸೇರಿದಂತೆ ಅನೇಕ ನೀರಾವರಿ ಯೋಜನೆಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕಿರುವ ನಿಟ್ಟಿನಲ್ಲಿ ಕರ್ನಾಟಕದ (Karnataka) ಸಂಸತ್ ಸದಸ್ಯರನ್ನು ಇಂದು ಭೇಟಿ ಮಾಡುತ್ತಿರೋದಾಗಿ ಸಿಎಂ ಡಿಕೆ ಶಿವಕುಮಾರ್ (DK Shivakumar) ತಿಳಿಸಿದ್ದಾರೆ. ತಾನು ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕು ಎಂದು ಸಂಸದರಿಗೆ ಮನವಿ ಮಾಡಲು ಹೋಗುತ್ತಿದ್ದೇನೆ. ನಂತರ ಬೆಂಗಳೂರಿನಲ್ಲಿ ಸರ್ವಪಕ್ಷ ಸಭೆ ಕರೆಯಲಾಗುವುದು. ರಾಜ್ಯದ ಹಿರಿಯ ನಾಯಕರ ಜೊತೆಗೂ ಪ್ರಮುಖ ವಿಚಾರಗಳನ್ನು ಚರ್ಚಿಸಲಾಗುವುದು ಎಂದವರು ತಿಳಿಸಿದ್ದಾರೆ.
ಕರ್ನಾಟಕ ಭವನದಲ್ಲಿ ನಡೆಯಲಿರುವ ಸಭೆ
ಸಂಸತ್ ಮುಂಗಾರು ಅಧಿವೇಶನ ಹಿನ್ನೆಲೆ ದೆಹಲಿಯಲ್ಲೇ ಇರುವ ರಾಜ್ಯದ ಸಂಸದರುಗಳ ಜೊತೆಗೆ ಸಂಜೆ 6.30ಕ್ಕೆ ಕರ್ನಾಟಕ ಭವನದಲ್ಲಿ ಸಿಎಂ ಡಿಕೆಶಿ ಸಭೆ ನಡೆಸಲಿದ್ದಾರೆ. ಈ ಸಂಬಂಧ ಕಾಂಗ್ರೆಸ್, ಬಿಜೆಪಿ, JDS ಸಂಸದರಿಗೆ ಮುಖ್ಯಮಂತ್ರಿಗಳು ಆಹ್ವಾನ ನೀಡಿದ್ದು, ರಾಜ್ಯದ ಬಾಕಿ ಉಳಿದಿರುವ ಯೋಜನೆಗಳ ಕುರಿತು ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿದೆ.
ಇದನ್ನೂ ಓದಿ: ಡಿಕೆಶಿ ಸಚಿವ ಸಂಪುಟ ವಿಸ್ತರಣೆ ಸಂಬಂಧ ಮಹತ್ವದ ಸಭೆ; 12ರಿಂದ 15 ಹೊಸ ಮುಖಗಳಿಗೆ ಮಣೆ?
ಸಚಿವ ಸಂಪುಟ ವಿಸ್ತರಣೆ ಯಾವಾಗ?
ದೆಹಲಿಗೆ ಪ್ರಯಾಣ ಬೆಳೆಸುವ ಮುನ್ನ ಸದಾಶಿವನಗರ ನಿವಾಸದ ಬಳಿ ಸಚಿವ ಸಂಪುಟ ವಿಚಾರವಾಗಿಯೂ ಸಿಎಂ ಪ್ರತಿಕ್ರಿಯೆ ನೀಡಿದ್ದು, ಈ ವಾರದೊಳಗೆ ಕ್ಯಾಬಿನೆಟ್ ವಿಸ್ತರಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
