ಪ್ರಾತಿನಿಧಿಕ ಚಿತ್ರImage Credit source: Getty images
ಬೆಂಗಳೂರು, ಜುಲೈ 17: ರಾಜ್ಯಾದ್ಯಂತ ಒಟ್ಟು 579 ಮದ್ಯ ಮಾರಾಟ ಪರವಾನಗಿಗಳನ್ನ (Licenses) ಮುಂದಿನ 5 ವರ್ಷಗಳ ಅವಧಿಗೆ, ಅಂದರೆ 2026-27 ರಿಂದ 2030-31 ರವರೆಗೆ ಇ-ಹರಾಜು ಮೂಲಕ ಹಂಚಿಕೆ ಮಾಡಲು ಜುಲೈ 1ರಂದು ಅಧಿಕೃತ ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಇದೀಗ ಅಬಕಾರಿ ಇಲಾಖೆಯು ಇ-ಹರಾಜು ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಯಾರಿಗೆ ಎಷ್ಟು ಮೀಸಲಾತಿ?
ಒಟ್ಟು ಪರವಾನಗಿಗಳ ಪೈಕಿ 483 ಸಿಎಲ್(2-ಎ) ಮತ್ತು 96 ಸಿಎಲ್(9-ಎ) ಲಭ್ಯವಿವೆ. ಬೆಂಗಳೂರು ನಗರ ಜಿಲ್ಲೆಯೊಂದರಲ್ಲೇ 119 ಸಿಎಲ್(2-ಎ) ಮತ್ತು 67 ಸಿಎಲ್(9-ಎ) ಸನ್ನದುಗಳು ಇವೆ. ಈ ಇ-ಹರಾಜಿನಲ್ಲಿ ಪರಿಶಿಷ್ಟ ಜಾತಿ-ಎ ವರ್ಗದವರಿಗೆ ಶೇ. 5.25, ಪರಿಶಿಷ್ಟ ಜಾತಿ-ಬಿ ವರ್ಗದವರಿಗೆ ಶೇ. 5.25, ಪರಿಶಿಷ್ಟ ಜಾತಿ-ಸಿ ವರ್ಗದವರಿಗೆ ಶೇ. 4.50 ಹಾಗೂ ಪರಿಶಿಷ್ಟ ಪಂಗಡ ವರ್ಗದವರಿಗೆ ಶೇ. 3 ರಷ್ಟು ಮೀಸಲಾತಿಯನ್ನು ಕಲ್ಪಿಸಲಾಗಿದೆ.
ಇ-ಹರಾಜು ನಡೆಯುವ ದಿನಾಂಕ ಮತ್ತು ವಿವರ
- ಜುಲೈ 24ರಂದು ಬೀದರ್, ಹಾವೇರಿ, ಚಿಕ್ಕಮಗಳೂರು, ಕಲಬುರಗಿ
- ಜುಲೈ 27ರಂದು ಹಾಸನ, ರಾಯಚೂರು, ಶಿವಮೊಗ್ಗ, ಯಾದಗಿರಿ
- ಜುಲೈ 28ರಂದು ಬೆಳಗಾವಿ (ಉತ್ತರ), ಉತ್ತರ ಕನ್ನಡ, ಬಳ್ಳಾರಿ, ಬಾಗಲಕೋಟೆ
- ಜುಲೈ 29ರಂದು ತುಮಕೂರು, ಕೊಪ್ಪಳ, ಚಿಕ್ಕಬಳ್ಳಾಪುರ, ಮೈಸೂರು ಗ್ರಾಮಾಂತರ
- ಜುಲೈ 30ರಂದು ದಾವಣಗೆರೆ, ವಿಜಯನಗರ, ಚಿತ್ರದುರ್ಗ, ಮಂಡ್ಯ, ವಿಜಯಪುರ, ಚಾಮರಾಜನಗರ, ದಕ್ಷಿಣ ಕನ್ನಡ, ಗದಗ,
- ಜುಲೈ 31ರಂದು ಕೋಲಾರ, ಧಾರವಾಡ, ಕೊಡಗು, ಬೆಳಗಾವಿ (ದಕ್ಷಿಣ), ಬೆಂಗಳೂರು ಗ್ರಾಮಾಂತರ, ಮೈಸೂರು (ನಗರ), ಬೆಂಗಳೂರು (ದಕ್ಷಿಣ) ಮತ್ತು ಉಡುಪಿ ಜಿಲ್ಲೆಗಳಲ್ಲಿ ಇ-ಹರಾಜು ನಡೆಯಲಿದೆ.
ಇದನ್ನೂ ಓದಿ: ಡಿಸಿಆರ್ಇ ಘಟಕದ ಪೊಲೀಸ್ ಸಿಬ್ಬಂದಿಗೆ ಗುಡ್ನ್ಯೂಸ್: ವಾರದಲ್ಲಿ ಒಂದು ದಿನ ಕಡ್ಡಾಯ ರಜೆ
ಇ-ಹರಾಜಿನ ಸಂಪೂರ್ಣ ವಿವರಗಳು ಅಬಕಾರಿ ಇಲಾಖೆಯ ಅಧಿಕೃತ ವೆಬ್ಸೈಟ್ stateexcise.karnataka.gov.in ಹಾಗೂ ಇ-ಕಾಮರ್ಸ್ ಪೋರ್ಟಲ್ www.mstcecommerce.comನಲ್ಲಿ ಲಭ್ಯವಿವೆ. ಬಿಡ್ದಾರರ ನೋಂದಣಿ ಪ್ರಕ್ರಿಯೆಯು ಜುಲೈ 3 ರಿಂದಲೇ ಪ್ರಾರಂಭವಾಗಿದ್ದು, ಲೈವ್ ಬಿಡ್ಡಿಂಗ್ ಪ್ರಕ್ರಿಯೆಯು ಜುಲೈ 24ರಿಂದ 31 ರವರೆಗೆ ನಡೆಯಲಿದೆ. ಬಿಡ್ದಾರರು ತಾವು ಇಚ್ಛಿಸುವ ಸ್ಥಳಗಳ ನಿಯಮಿತ ಇ-ಹರಾಜಿನಲ್ಲಿ ಭಾಗವಹಿಸಲು ಎರಡು ದಿನಗಳ ಮುಂಚಿತವಾಗಿಯೇ ವೆಬ್ಸೈಟ್ನಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು.
ಅರ್ಜಿ ಸಲ್ಲಿಕೆ ಮತ್ತು ಶುಲ್ಕದ ವಿವರ
ಇ-ಹರಾಜಿನಲ್ಲಿ ಯಾವುದೇ ವ್ಯಕ್ತಿ, ಏಕವ್ಯಕ್ತಿ ಮಾಲೀಕತ್ವದ ಸಂಸ್ಥೆ ಅಥವಾ ಭಾರತದ ಕಾನೂನುಗಳ ಅಡಿಯಲ್ಲಿ ನೋಂದಾಯಿತವಾದ ಟ್ರಸ್ಟ್, ಸೊಸೈಟಿ, ಪಾಲುದಾರಿಕೆ ಸಂಸ್ಥೆ, ಸೀಮಿತ ಪಾಲುದಾರಿಕೆ ಒಪ್ಪಂದ ಮತ್ತು ಕಂಪನಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಇದನ್ನೂ ಓದಿ: ಕರಾವಳಿ ಕಂಬಳ ಆಯೋಜಕರಿಗೆ ಸರ್ಕಾರ ಗುಡ್ನ್ಯೂಸ್! 1.15 ಕೋಟಿ ರೂ ಅನುದಾನ ಘೋಷಣೆ
1 ಸಾವಿರ ರೂ ನೋಂದಣಿ ಶುಲ್ಕ ನಿಗದಿ ಪಡಿಸಲಾಗಿದ್ದು, ಜಿಎಸ್ಟಿ ಮೊತ್ತವನ್ನು ಆನ್ಲೈನ್ ಮೂಲಕವೇ ಪಾವತಿಸಬೇಕು. ಪ್ರತಿ ಸನ್ನದಿನ ಅರ್ಜಿಗೆ 50 ಸಾವಿರ ರೂ ಅರ್ಜಿ ಶುಲ್ಕ ನಿಗದಿಪಡಿಸಲಾಗಿದ್ದು, ಇದು ಯಾವುದೇ ಕಾರಣಕ್ಕೂ ಮರುಪಾವತಿಯಾಗುವುದಿಲ್ಲ. ಬಿಡ್ದಾರರು ತಮ್ಮ ಆಯ್ಕೆಗೆ ಅನುಗುಣವಾಗಿ ಎಷ್ಟು ಸನ್ನದುಗಳಿಗಾದರೂ ಅರ್ಜಿಗಳನ್ನು ಸಲ್ಲಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 7:42 pm, Fri, 17 July 26