ರಾಜ್ಯ ಸರ್ಕಾರ ಮಹತ್ವಾಕಾಂಕ್ಷೆ ಯೋಜನೆ ‘ಕೂಸಿನ ಮನೆ’ ಸಂಕಷ್ಟದಲ್ಲಿ: ಸಿಬ್ಬಂದಿಗೆ ಸಿಗುತ್ತಿಲ್ಲ ಸಂಬಳ – Kannada News | Kusina Mane Scheme in Koppal Faces Fund Crunch, Staff Unpaid: Impact on NREGA Mothers

ಕೊಪ್ಪಳ, ಫೆ.3: ಕೂಲಿ ಕಾರ್ಮಿಕರ ಮಕ್ಕಳ ಆರೈಕೆಗಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿದ್ದ ಮಹತ್ವಾಕಾಂಕ್ಷೆ ಯೋಜನೆ ‘ಕೂಸಿನ ಮನೆ’ ಇದೀಗ ಆರ್ಥಿಕ ಸಂಕಷ್ಟಕ್ಕೆ (Kusina Mane Crisis) ಸಿಲುಕಿದೆ. ಕಳೆದ ಒಂದು ತಿಂಗಳಿನಿಂದ ಕೆಲಸ ಮಾಡಿದ ಸಿಬ್ಬಂದಿಗೆ ವೇತನ ಪಾವತಿಯಾಗದ ಹಿನ್ನೆಲೆಯಲ್ಲಿ, ಕೊಪ್ಪಳ ಜಿಲ್ಲೆಯ ಹಲವೆಡೆ ಈ ಕೇಂದ್ರಗಳಿಗೆ ಬೀಗ ಬಿದ್ದಿದೆ.ನರೇಗಾ ಕೆಲಸಕ್ಕೆ ಹೋಗುವ ಮಹಿಳೆಯರು ತಮ್ಮ ಮಕ್ಕಳನ್ನು ಸುರಕ್ಷಿತವಾಗಿ ಬಿಟ್ಟು ಹೋಗಲಿ ಎಂಬ ಉದ್ದೇಶದಿಂದ ನರೇಗಾ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಈ ಯೋಜನೆ ಆರಂಭಿಸಲಾಗಿತ್ತು. ಆದರೆ, ಇದೀಗ ಸಿಬ್ಬಂದಿಗೆ ನೀಡಬೇಕಾದ ಸಂಬಳದ ಹಣ ಬಿಡುಗಡೆಯಾಗದ ಕಾರಣ, ಅಸಮಾಧಾನಗೊಂಡ ಸಿಬ್ಬಂದಿ ಕೇಂದ್ರಗಳನ್ನು ಬಂದ್ ಮಾಡಿದ್ದಾರೆ.

ಕೊಪ್ಪಳ ತಾಲೂಕಿನ ಕಾಟ್ರಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೂಸಿನ ಮನೆಗೆ ಬಾಗಿಲು ಹಾಕಲಾಗಿದ್ದು, ಮಕ್ಕಳು ಆಡಬೇಕಿದ್ದ ಆಟಿಕೆಗಳು ಧೂಳು ಹಿಡಿಯುತ್ತಿವೆ. ಜಿಲ್ಲೆಯ ಹಾಲವರ್ತಿ ಹಾಗೂ ಗಿಣಗೇರಿಗಳಲ್ಲಿ ಮಾತ್ರ ಸದ್ಯಕ್ಕೆ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಉಳಿದ ಕಡೆಗಳಲ್ಲಿ ಬಂದ್​ ಮಾಡಲಾಗಿದೆ. ಈ ಹಿಂದೆ ಕೂಸಿನ ಮನೆಯಲ್ಲಿ ಕೆಲಸ ಮಾಡುವ ಕೇರ್ ಟೇಕರ್ಸ್‌ಗಳಿಗೆ (ಇಬ್ಬರು ಸಿಬ್ಬಂದಿ) ನರೇಗಾ ಯೋಜನೆಯಡಿ ದಿನಕ್ಕೆ 370 ರೂ. ರಂತೆ ಗ್ರಾಮ ಪಂಚಾಯತ್ ಅಧಿಕಾರಿಗಳೇ ವೇತನ ಪಾವತಿಸುತ್ತಿದ್ದರು. ಜೊತೆಗೆ ಪ್ರತಿ ಮಗುವಿನ ಪೌಷ್ಟಿಕ ಆಹಾರಕ್ಕಾಗಿ ತಲಾ 12 ರೂ. ಖರ್ಚು ಮಾಡಲಾಗುತ್ತಿತ್ತು. ಆದರೆ, ಇತ್ತೀಚೆಗೆ ಗ್ರಾ.ಪಂ ಮೂಲಕ ಹಣ ಪಾವತಿಸದಂತೆ ಆದೇಶ ಬಂದಿರುವುದು ಈ ಗೊಂದಲಕ್ಕೆ ಮತ್ತು ವೇತನ ವಿಳಂಬಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಇಲ್ಲಿದೆ ನೋಡಿ ವಿಡಿಯೋ:

ಈ ಕುರಿತು ಪ್ರತಿಕ್ರಿಯಿಸಿರುವ ಕೊಪ್ಪಳ ಜಿಲ್ಲಾ ಪಂಚಾಯತ್ ಸಿಇಓ ವರ್ಣಿತ್ ನೇಗಿ, ವೇತನ ವಿಳಂಬವಾಗಿರುವುದು ಗಮನಕ್ಕೆ ಬಂದಿದೆ. ಈಗಾಗಲೇ ಹಣ ಬಂದಿದ್ದು, ಶೀಘ್ರದಲ್ಲೇ ಗ್ರಾಮ ಪಂಚಾಯತಿಗಳಿಗೆ ಬಿಡುಗಡೆ ಮಾಡಿ ಸಿಬ್ಬಂದಿಯ ವೇತನ ಪಾವತಿಸಲಾಗುವುದು ಎಂದು ತಿಳಿಸಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 145 ಕೂಸಿನ ಮನೆಗಳು ಮಂಜೂರಾಗಿವೆ. ಆದರೆ ಒಂದು ತಿಂಗಳಿನಿಂದ ಸಂಬಳವಿಲ್ಲದೆ ಸಿಬ್ಬಂದಿಗಳು ಕೆಲಸ ಬಿಡುತ್ತಿದ್ದಾರೆ. ಇದೀಗ ಇದರಿಂದ ಕೂಲಿ ಕೆಲಸಕ್ಕೆ ಹೋಗುವ ತಾಯಂದಿರಿಗೆ ಮಕ್ಕಳನ್ನು ಎಲ್ಲಿ ಬಿಡಬೇಕೆಂಬ ಆತಂಕ ಎದುರಾಗಿದೆ.

ಇದನ್ನೂ ಓದಿ: ಇದು ಬ್ರಾಂಡ್ ಬೆಂಗಳೂರಲ್ಲ, ಬ್ಯಾಡ್ ಬೆಂಗಳೂರು: ಕಸದಿಂದ ತುಂಬಿ ತುಳುಕಿದ ಬಸ್​​ ನಿಲ್ದಾಣ

ಒಂದು ಕಡೆ ಗ್ಯಾರಂಟಿ ಯೋಜನೆಗಳ ಅಬ್ಬರದ ನಡುವೆ, ತಳಮಟ್ಟದ ಕೂಲಿ ಕಾರ್ಮಿಕರ ಮಕ್ಕಳ ಹಿತ ಕಾಯುವ ಇಂತಹ ಮಹತ್ವದ ಯೋಜನೆಗಳು ಆರ್ಥಿಕ ಕಾರಣಗಳಿಗಾಗಿ ನಿಂತು ಹೋಗುತ್ತಿರುವುದು ದುರದೃಷ್ಟಕರ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಈ ‘ಕೂಸಿನ ಮನೆ’ಗಳನ್ನು ಪುನರಾರಂಭಿಸಬೇಕಿದೆ ಎಂದು ಸಾರ್ವಜನಿಕರ ಒತ್ತಾಯವಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *