ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ ‘ರಾಜ ಶಿವಾಜಿ’ ಸಿನಿಮಾದ (Raja Shivaji) ಬಗ್ಗೆ ಈಗ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಚಿತ್ರದ ಭರ್ಜರಿ ಗಳಿಕೆಯ ನಡುವೆಯೇ, ಸಿನಿಮಾದ ಬಜೆಟ್ ಬಗ್ಗೆ ಹರಿದಾಡುತ್ತಿದ್ದ ವದಂತಿಗಳಿಗೆ ನಿರ್ದೇಶಕ ಹಾಗೂ ನಟ ರಿತೇಶ್ ದೇಶ್‌ಮುಖ್ ಈಗ ಪೂರ್ಣವಿರಾಮ ಇಟ್ಟಿದ್ದಾರೆ. ಸಿನಿಮಾ 100 ಕೋಟಿ ರೂಪಾಯಿಯಲ್ಲಿ ನಿರ್ಮಾಣ ಆಗಿದೆ ಎಂದು ಹೇಳಲಾಗಿತ್ತು. ಈ ವಿಷಯ ಪ್ರೇಕ್ಷಕನಿಗೆ ಮುಖ್ಯವಲ್ಲ ಎಂದಿದ್ದಾರೆ.
‘ರಾಜ ಶಿವಾಜಿ’ ಸಿನಿಮಾ ಬಿಡುಗಡೆಯಾದಾಗಿನಿಂದಲೂ ಇದು 100 ಕೋಟಿ ರೂಪಾಯಿ ವೆಚ್ಚದ ಸಿನಿಮಾ ಎಂಬ ಮಾತುಗಳು ಕೇಳಿಬರುತ್ತಿದ್ದವು. ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಿತೇಶ್, ‘ಸಿನಿಮಾದ ಅಸಲಿ ಬಜೆಟ್ ಕೇವಲ ನಿರ್ಮಾಪಕರಿಗೆ ಮಾತ್ರ ತಿಳಿದಿರುತ್ತದೆ. ನೀವು 100 ಕೋಟಿ ಖರ್ಚು ಮಾಡಿ ಸಿನಿಮಾ ಮಾಡಿದರೂ ಅಥವಾ 10 ಕೋಟಿ ಖರ್ಚು ಮಾಡಿ ಸಿನಿಮಾ ಮಾಡಿದರೂ, ಒಬ್ಬ ಪ್ರೇಕ್ಷಕ ಚಿತ್ರಮಂದಿರಕ್ಕೆ ಬಂದು ಟಿಕೆಟ್ಗೆ ಎಷ್ಟು ಕೊಡಬೇಕೋ ಅಷ್ಟನ್ನೇ ಕೊಡುತ್ತಾನೆ. ಅವನಿಗೆ ಸಿನಿಮಾ ಇಷ್ಟವಾಗಬೇಕೇ ಹೊರತು, ಅದರ ಹಿಂದಿನ ಖರ್ಚಿನ ಲೆಕ್ಕಾಚಾರವಲ್ಲ’ ಎಂದಿದ್ದಾರೆ ರಿತೇಶ್.
ಇದನ್ನೂ ಓದಿ: ‘ರಾಜ ಶಿವಾಜಿ’ ಚಿತ್ರಕ್ಕೆ ಕೈ ಕೊಟ್ಟ ಹಿಂದಿ ಭಾಷಿಕರು; ಅದೃಷ್ಟ ಬದಲಿಸಿದ್ದು ಯಾರು?
‘ನೀವು ಚಿತ್ರಮಂದಿರಕ್ಕೆ 100 ಅಥವಾ 300 ರೂಪಾಯಿ ಕೊಟ್ಟು ಟಿಕೆಟ್ ಖರೀದಿಸುತ್ತೀರಿ ಅಷ್ಟೇ ನಿಮಗೆ ಮುಖ್ಯವಾಗಬೇಕು. ಸಿನಿಮಾದ ಮ್ಯಾಜಿಕ್ ಅನ್ನು ಅನುಭವಿಸಿ ಹೊರಬರಬೇಕೇ ಹೊರತು, ಅದರ ವೆಚ್ಚದ ಬಗ್ಗೆ ತಲೆಕೆಡಿಸಿಕೊಳ್ಳಬಾರದು. ಅಮಿತಾಭ್ ಬಚ್ಚನ್ ಅವರ ‘ಶೋಲೆ’ ಕಾಲದಲ್ಲಿ ಯಾರೂ ಬಜೆಟ್ ಬಗ್ಗೆ ಕೇಳುತ್ತಿರಲಿಲ್ಲ, ಕೇವಲ ಮನರಂಜನೆಯನ್ನಷ್ಟೇ ಬಯಸುತ್ತಿದ್ದರು’ ಎಂದು ಅವರು ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
8 ದಿನಗಳಲ್ಲಿ 55 ಕೋಟಿ ದಾಟಿದ ಗಳಿಕೆ
ಮೇ 1 ರಂದು ಬಿಡುಗಡೆಯಾದ ‘ರಾಜ ಶಿವಾಜಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ತನ್ನ ಪಾರುಪತ್ಯ ಮುಂದುವರಿಸಿದೆ. ಕೇವಲ 8 ದಿನಗಳಲ್ಲಿ ಸಿನಿಮಾ 55 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಬಾಚಿಕೊಂಡಿದೆ. ಚಿತ್ರಮಂದಿರದ ಗಳಿಕೆಯಷ್ಟೇ ಅಲ್ಲದೆ, ಸ್ಯಾಟಲೈಟ್ ಮತ್ತು ಒಟಿಟಿ ಹಕ್ಕುಗಳ ಮಾರಾಟದಿಂದಲೂ ಚಿತ್ರಕ್ಕೆ ದೊಡ್ಡ ಮೊತ್ತದ ಆದಾಯ ಬಂದಿದೆ. ರಿತೇಶ್ ಹೇಳುವಂತೆ ಬಜೆಟ್ 100 ಕೋಟಿಗಿಂತ ಕಡಿಮೆ ಇದ್ದಲ್ಲಿ, ಈಗಾಗಲೇ ಗಳಿಸಿರುವ 55 ಕೋಟಿ ಹಾಗೂ ಡಿಜಿಟಲ್ ಹಕ್ಕುಗಳ ಆದಾಯವನ್ನು ಸೇರಿಸಿದರೆ ನಿರ್ಮಾಪಕರು ಲಾಭವನ್ನು ಜೇಬಿಗಿಳಿಸುವುದು ಖಚಿತವಾಗಿದೆ. ಸಿನಿಮಾ ನಷ್ಟದಲ್ಲಿದೆ ಎಂದೆಲ್ಲ ವರದಿ ಬಂದಿತ್ತು. ಆದರೆ, ರಿತೇಶ್ ಹೇಳಿಕೆಯಿಂದ ಲಾಭ-ನಷ್ಟದ ಲೆಕ್ಕಾಚಾರ ಬದಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
