ರಾತ್ರಿ ಮಲಗುವ ಮುನ್ನ ಈ ತಪ್ಪುಗಳನ್ನು ಮಾಡಲೇಬೇಡಿ – Kannada News | Don’t do these things at night; know why?

ಇಂದಿನ ಈ ಬ್ಯುಸಿ ಜೀವನದಲ್ಲಿ ನಿದ್ರಾಹೀನತೆಯು (Insomnia) ಅನೇಕರಿಗೆ ಕಾಡುವ ಸಾಮಾನ್ಯ ಸಮಸ್ಯೆಯಾಗಿದೆ. ಇದಕ್ಕೆ ಒತ್ತಡ, ಕಳಪೆ ಆಹಾರ ಪದ್ಧತಿ, ಖಿನ್ನತೆ, ಕಳಪೆ ಗುಣಮಟ್ಟದ ದೈನಂದಿನ ದಿನಚರಿ ಮತ್ತು ದೈಹಿಕ ಚಟುವಟಿಕೆಯ ಕೊರತೆ ಸೇರಿದಂತೆ ಒಂದಷ್ಟು ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಜೀವನಶೈಲಿಯೇ ಕಾರಣ. ಇದರ ಜೊತೆಗೆ ನಾವು ರಾತ್ರಿಯ ವೇಳೆ ತಿಳಿದೋ ತಿಳಿಯದೆಯೋ ಮಾಡುವಂತಹ ತಪ್ಪುಗಳು ನಿದ್ರೆಯ ಗುಣಮಟ್ಟವನ್ನು ಹಾಳು ಮಾಡುವುದು ಮಾತ್ರವಲ್ಲದೆ ಆರೋಗ್ಯದ ಮೇಲೂ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ರಾತ್ರಿ ಮಲಗುವ ಮುನ್ನ ಈ ಕೆಲವು ತಪ್ಪುಗಳನ್ನು ಮಾಡಬೇಡಿ.

ರಾತ್ರಿ ಮಲಗುವ ಮುನ್ನ ಈ ತಪ್ಪುಗಳನ್ನು ಮಾಡಬೇಡಿ:

ರಾತ್ರಿಯಲ್ಲಿ ಭಾರವಾದ ಆಹಾರ ಸೇವಿಸುವುದು: ಮಲಗುವ ಮುನ್ನ ಭಾರವಾದ ಮತ್ತು ದೊಡ್ಡ ಪ್ರಮಾಣದ ಊಟವನ್ನು ಸೇವಿಸುವುದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಹೆಚ್ಚುವರಿ ಒತ್ತಡ ಉಂಟಾಗುತ್ತದೆ. ಇದು ಅಜೀರ್ಣ, ಆಮ್ಲೀಯತೆ ಮತ್ತು ಉಬ್ಬರದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು, ಅಲ್ಲದೆ ಇದು ನಿದ್ರೆಗೂ ಅಡ್ಡಿಪಡಿಸುತ್ತದೆ. ಹಾಗಾಗಿ ಮಲಗುವ ಮುನ್ನ ಕನಿಷ್ಠ 2-3 ಗಂಟೆಗಳ ಮೊದಲು ಭೋಜನವನ್ನು ಮಾಡಿ, ಆದಷ್ಟು ಹಗುರವಾದ ಮತ್ತು ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವನೆ ಮಾಡುವುದು ಉತ್ತಮ.

ಮಲಗುವ ಮುನ್ನ ಫೋನ್‌, ಲ್ಯಾಪ್‌ಟಾಪ್‌ ನೋಡಬೇಡಿ: ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಮಲಗುವ ಮುನ್ನ ರೀಲ್ಸ್‌, ವಿಡಿಯೋ ಸ್ಕ್ರೋಲ್‌ ಮಾಡುತ್ತಾ ಸೋಷಿಯಲ್‌ ಮೀಡಿಯಾದಲ್ಲಿ ಸಮಯ ಕಳೆಯುತ್ತಾರೆ. ಹೀಗೆ ಮಲಗುವ ಮುನ್ನ ಫೋನ್‌ ನೋಡುವುದು ದೊಡ್ಡ ತಪ್ಪು. ಏಕೆಂದರೆ ಫೋನ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಿಂದ ಹೊರಸೂಸುವ ನೀಲಿ ಬೆಳಕು ನಮಗೆ ನಿದ್ರಿಸಲು ಸಹಾಯ ಮಾಡುವ ಹಾರ್ಮೋನ್ ಮೆಲಟೋನಿನ್ ಉತ್ಪಾದನೆಯನ್ನು ಅಡ್ಡಿಪಡಿಸುತ್ತದೆ. ಹಾಗಾಗಿ ಮಲಗುವ ಕನಿಷ್ಠ ಒಂದು ಗಂಟೆ ಮೊದಲೇ ಫೋನ್‌ನಿಂದ ದೂರವಿರಿ. ಫೋನ್‌ ನೋಡುವ ಬದಲು ನೀವು ಪುಸ್ತಕ ಓದಬಹುದು, ಸಂಗೀತ ಕೇಳಬಹುದು ಅಥವಾ ಕುಟುಂಬದೊಂದಿಗೆ ಮಾತನಾಡುತ್ತಾ ಸಮಯ ಕಳೆಯಬಹುದು.

ಇದನ್ನೂ ಓದಿ: ಯಾವ ಸಮಯದಲ್ಲಿ ಕಾಫಿ ಕುಡಿಯುವುದು ಉತ್ತಮ? ಅದರ ಪ್ರಯೋಜನಗಳೇನು?

ಸಂಜೆ ತಡವಾಗಿ ಕೆಫೀನ್ ಸೇವನೆ: ಕಾಫಿ, ಟೀ, ಚಾಕೊಲೇಟ್ ಮಾತ್ರವಲ್ಲ ಅನೇಕ ತಂಪು ಪಾನೀಯಗಳು ಸಹ ಕೆಫೀನ್ ಅನ್ನು ಹೊಂದಿರುತ್ತವೆ. ಸಂಜೆ ತಡವಾಗಿ ಅಥವಾ ರಾತ್ರಿಯಲ್ಲಿ ಕೆಫೀನ್ ಸೇವಿಸುವುದರಿಂದ ನಿಮ್ಮ ನಿದ್ರೆಯ ಮೇಲೆ ಪರಿಣಾಮ ಬೀರಬಹುದು. ಇದಲ್ಲದೆ ಮದ್ಯಪಾನ ಸೇವನೆ ಮಾಡುವುದು ಕೂಡ ಒಳ್ಳೆಯದಲ್ಲ, ಇದು ನೈಸರ್ಗಿಕ ನಿದ್ರೆಯ ಪ್ರಕ್ರಿಯೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ರಾತ್ರಿ ಐಸ್ ಕ್ರೀಮ್ ತಿನ್ನುವುದು: ನಾವು ಸಾಮಾನ್ಯವಾಗಿ ಊಟದ ನಂತರ ಐಸ್ ಕ್ರೀಮ್ ತಿನ್ನಬೇಕೆಂದು ಹಂಬಲಿಸುತ್ತೇವೆ, ಆದರೆ ಹಾಗೆ ಮಾಡುವುದು ಹಾನಿಕಾರಕ. ಆದ್ದರಿಂದ, ಮಲಗುವ ಮುನ್ನ ಐಸ್ ಕ್ರೀಮ್ ತಿನ್ನುವುದನ್ನು ತಪ್ಪಿಸಿ. ಐಸ್ ಕ್ರೀಂನಲ್ಲಿ ಕೊಬ್ಬು ಮತ್ತು ಸಕ್ಕರೆ ಅಧಿಕವಾಗಿದ್ದು, ನಿದ್ರೆಗೆ ಭಂಗ ತರುವ ಸಾಧ್ಯತೆ ಇರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *