ಆಸ್ಟ್ರೇಲಿಯಾ ಟೆಸ್ಟ್ ತಂಡದ ಪ್ರಮುಖ ಬ್ಯಾಟರ್ ಮಾರ್ನಸ್ ಲಾಬುಶೇನ್ ಅವರ ಕಳಪೆ ಫಾರ್ಮ್ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ಬಾಂಗ್ಲಾದೇಶ್ ವಿರುದ್ಧ ಆಸ್ಟ್ರೇಲಿಯಾ ಅನುಭವಿಸಿದ ಆಘಾತಕಾರಿ ಸೋಲಿನ ಬೆನ್ನಲ್ಲೇ, ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಅವರು ಲಾಬುಶೇನ್ ತಂಡದಲ್ಲಿ ಮುಂದುವರಿಯುವ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ.
ಎರಡು ವರ್ಷಗಳಿಂದ ವೈಫಲ್ಯ!
ಕಳೆದ ಎರಡು ವರ್ಷಗಳಿಂದ ಮಾರ್ನಸ್ ಲಾಬುಶೇನ್ ರನ್ ಗಳಿಸಲು ತೀವ್ರ ಹೆಣಗಾಡುತ್ತಿದ್ದಾರೆ. ಒಂದು ಕಾಲದಲ್ಲಿ ಆಸ್ಟ್ರೇಲಿಯಾ ಬ್ಯಾಟಿಂಗ್ ಬೆನ್ನೆಲುಬಾಗಿದ್ದ ಲಾಬುಶೇನ್, ಇತ್ತೀಚಿನ ಸರಣಿಗಳಲ್ಲಿ ನಿರಂತರವಾಗಿ ವೈಫಲ್ಯ ಅನುಭವಿಸುತ್ತಿದ್ದಾರೆ. ಬಾಂಗ್ಲಾದೇಶf ವಿರುದ್ಧದ ಇತ್ತೀಚಿನ ಟೆಸ್ಟ್ ಪಂದ್ಯದಲ್ಲೂ ಇದು ಮುಂದುವರಿದಿದ್ದು, ಆಸ್ಟ್ರೇಲಿಯಾದ ಸೋಲಿಗೆ ಬ್ಯಾಟಿಂಗ್ ವಿಭಾಗದ ವೈಫಲ್ಯವೇ ಪ್ರಮುಖ ಕಾರಣವಾಗಿದೆ.
ಲಾಬುಶೇನ್ ಅವರ ಪ್ರದರ್ಶನವನ್ನು ವಿಶ್ಲೇಷಿಸಿರುವ ಮ್ಯಾಥ್ಯೂ ಹೇಡನ್, ತಂಡದ ಮ್ಯಾನೇಜ್‌ಮೆಂಟ್ ಧೋರಣೆಯನ್ನು ಮುಕ್ತವಾಗಿ ಟೀಕಿಸಿದ್ದಾರೆ.
“ಕಳೆದ ಎರಡು ವರ್ಷಗಳಿಂದ ಅವರ ಫಾರ್ಮ್‌ನಲ್ಲಿ ಯಾವುದೇ ಸುಧಾರಣೆ ಕಂಡಿಲ್ಲ. ಹೀಗಿರುವಾಗ ಮುಂದಿನ ಪಂದ್ಯದಲ್ಲಿ ಅವರು ರಾತ್ರೋರಾತ್ರಿ ಅದ್ಭುತವಾಗಿ ರನ್ ಗಳಿಸುತ್ತಾರೆ ಎಂದು ನಂಬಲು ಹೇಗೆ ಸಾಧ್ಯ? ರಾತ್ರೋರಾತ್ರಿ ಏನು ಸಹ ಬದಲಾಗಲ್ಲ. ಹೀಗಾಗಿ ಮಾರ್ನಸ್ ಲಾಬುಶೇನ್ ಅವರನ್ನು ಯಾವ ಮಾನದಂಡದ ಮೇಲೆ ಆಯ್ಕೆ ಮಾಡಲಾಗುತ್ತಿದೆ” ಎಂದು ಹೇಡನ್ ಪ್ರಶ್ನಿಸಿದ್ದಾರೆ.
ತಂಡದ ಪುನರ್ರಚನೆಗೆ ಆಗ್ರಹ:
ಆಸ್ಟ್ರೇಲಿಯಾ ತಂಡದ ಅಗ್ರ ಕ್ರಮಾಂಕದಲ್ಲಿ ದೊಡ್ಡ ಬದಲಾವಣೆ ಆಗಬೇಕಿದೆ ಎಂದು ಅಭಿಪ್ರಾಯಪಟ್ಟಿರುವ ಮ್ಯಾಥ್ಯೂ ಹೇಡನ್, ಆಕ್ರಮಣಕಾರಿ ಬ್ಯಾಟರ್ ಟ್ರಾವಿಸ್ ಹೆಡ್ ಅವರನ್ನು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಸಬೇಕೆಂದು ತಿಳಿಸಿದ್ದಾರೆ.
ಅಲ್ಲದೆ ದೇಶಿಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಮ್ಯಾಟ್ ರೆನ್‌ಶಾ ಅವರನ್ನು ಮರಳಿ ತಂಡಕ್ಕೆ ಸೇರಿಸಿಕೊಳ್ಳಬೇಕು ಎಂದು ಹೇಡನ್ ಸಲಹೆ ನೀಡಿದ್ದಾರೆ.
ಲಾಬುಶೇನ್ ಪರ ನಿಂತ ಕೋಚ್!
ಆಸ್ಟ್ರೇಲಿಯಾದ ಮಾಜಿ ಆಟಗಾರರಿಂದ ತೀವ್ರ ಒತ್ತಡ ಮತ್ತು ಟೀಕೆಗಳು ಕೇಳಿಬರುತ್ತಿದ್ದರೂ, ಆಸ್ಟ್ರೇಲಿಯಾ ತಂಡದ ಮುಖ್ಯ ಕೋಚ್ ಆಂಡ್ರ್ಯೂ ಮೆಕ್‌ಡೊನಾಲ್ಡ್ ಮಾತ್ರ ಮಾರ್ನಸ್ ಲಾಬುಶೇನ್ ಅವರನ್ನು ಬೆಂಬಲಿಸಿದ್ದಾರೆ. ಮಾರ್ನಸ್ ಒಬ್ಬ ಅತ್ಯುತ್ತಮ ದರ್ಜೆಯ ಆಟಗಾರನಾಗಿದ್ದು, ಶೀಘ್ರದಲ್ಲೇ ಫಾರ್ಮ್‌ಗೆ ಮರಳಲಿದ್ದಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಆಘಾತ; ಪಾಕಿಸ್ತಾನ್ ಪಂದ್ಯವೇ ನಿರ್ಣಾಯಕ!
ಆದರೆ, ಮುಂಬರುವ ಪ್ರಮುಖ ಟೆಸ್ಟ್ ಸರಣಿಗಳ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಮತ್ತು ಆಯ್ಕೆಗಾರರು ಹೇಡನ್ ಅವರ ಈ ಕಳವಳಕಾರಿ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
