ನವದೆಹಲಿ, ಜುಲೈ 03: ರಾಮನಗರ ಜಿಲ್ಲೆಯಲ್ಲಿ ನಡೆದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರೀ ಪ್ರಮಾಣದ ಅಕ್ರಮಗಳು ನಡೆದಿವೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಲ್ಹಾದ ಜೋಶಿ ಗಂಭೀರ ಆರೋಪ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ಬಗೆದ ದ್ರೋಹವಾಗಿದ್ದು, ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಬಿಎಲ್‌ಒ ಅಧಿಕಾರಿಗಳ ದುರ್ಬಳಕೆ
ಕೇಂದ್ರ ಚುನಾವಣಾ ಆಯೋಗ ನಿಗದಿಪಡಿಸಿರುವ ವಿಶೇಷ ನಿಯಮಾವಳಿ ಹಾಗೂ ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ಈ ಪರಿಷ್ಕರಣೆ ಪ್ರಕ್ರಿಯೆ ನಡೆಸಲಾಗಿದೆ. ಸ್ಥಳೀಯ ಬೂತ್ ಮಟ್ಟದ ಅಧಿಕಾರಿಗಳನ್ನು (ಬಿಎಲ್‌ಒ) ರಾಜಕೀಯವಾಗಿ ದುರುಪಯೋಗಪಡಿಸಿಕೊಂಡಿದ್ದು, ಈ ಇಡೀ ಪ್ರಕ್ರಿಯೆಯೇ ಕಾನೂನುಬಾಹಿರ ಮತ್ತು ನಿಯಮಬಾಹಿರವಾಗಿದೆ ಎಂದು ಸಚಿವರು ಕಿಡಿಕಾರಿದ್ದಾರೆ.
ರಾಜ್ಯ ಸರ್ಕಾರದಿಂದ ವ್ಯವಸ್ಥಿತ ಸಂಚು?
ಸ್ವತಂತ್ರವಾಗಿ ನಡೆಯಬೇಕಾದ ಸಾಂವಿಧಾನಿಕ ಪ್ರಕ್ರಿಯೆಯಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ನೇರವಾಗಿ ಹಸ್ತಕ್ಷೇಪ ಮಾಡಿದೆ ಎಂದು ಜೋಶಿ ದೂರಿದ್ದಾರೆ. ಕೇವಲ ರಾಜಕೀಯ ಲಾಭಕ್ಕಾಗಿ, ಮತದಾರರ ಪಟ್ಟಿಯನ್ನು ತಮಗೆ ಅನುಕೂಲವಾಗುವಂತೆ ತಿರುಚಲು ಸರ್ಕಾರದ ಉನ್ನತ ಮಟ್ಟದಿಂದಲೇ ವ್ಯವಸ್ಥಿತವಾಗಿ ಸಂಚು ರೂಪಿಸಲಾಗಿದೆ. ಈ ಪರಿಷ್ಕರಣೆಯು ರಾಜಕೀಯ ಪ್ರಭಾವದಿಂದ ಕೂಡಿದ್ದು, ಸ್ಥಳೀಯ ಆಡಳಿತದ ಮೇಲೆ ತೀವ್ರ ಒತ್ತಡ ಹೇರಲಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ ಜಯನಗರದ ಮಸೀದಿ ಒಳಗೆ ಎಸ್ಐಆರ್!: ಸ್ಫೋಟಕ ಆರೋಪ ಮಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ
ಪಾರದರ್ಶಕ ತನಿಖೆಗೆ ಒತ್ತಾಯ
ಸಾಮಾನ್ಯ ಮತದಾರರ ಧ್ವನಿಯನ್ನು ಹತ್ತಿಕ್ಕಲು ನಡೆಸಿರುವ ಈ ಬೃಹತ್ ಹಗರಣದ ಹಿಂದೆ ಯಾರ ಹಿತಾಸಕ್ತಿಗಳು ಅಡಗಿವೆ ಎಂಬುದನ್ನು ಪತ್ತೆ ಹಚ್ಚಬೇಕಿದೆ. ಸಾಂವಿಧಾನಿಕ ವ್ಯವಸ್ಥೆಯ ಹಸ್ತಕ್ಷೇಪವು ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆ ಮತ್ತು ಪಾವಿತ್ರ್ಯಕ್ಕೆ ಧಕ್ಕೆ ತರುತ್ತದೆ. ಹೀಗಾಗಿ, ತಕ್ಷಣವೇ ನಿಷ್ಪಕ್ಷಪಾತ, ಸಮಗ್ರ ಹಾಗೂ ಪಾರದರ್ಶಕ ತನಿಖೆ ನಡೆಸಿ ಸತ್ಯಾಂಶವನ್ನು ಬಹಿರಂಗಪಡಿಸಬೇಕು ಎಂದು ಪ್ರಲ್ಹಾದ ಜೋಶಿ ಆಗ್ರಹಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ