
ಯಶ್, ರಣಬೀರ್ ಕಪೂರ್ ಮೊದಲಾದವರು ನಟಿಸಿರುವ ‘ರಾಮಾಯಣ’ ಸಿನಿಮಾ (Ramayana Movie) ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಈ ಚಿತ್ರದ ಟೀಸರ್ ಏಪ್ರಿಲ್ 2ರಂದು ರಿಲೀಸ್ ಆಗಿದ್ದು ಕೆಲವರಿಂದ ಟೀಕೆ ಎದುರಿಸುತ್ತಿದೆ. ಸಿನಿಮಾದ ಟೀಸರ್ ಉತ್ತಮವಾಗಿಲ್ಲ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಇದು ಎಐ ಎಂದಿದ್ದಾರೆ. ಅದಕ್ಕೆ ಪೂರಕವಾದ ಕೆಲವು ಸಾಕ್ಷಿಗಳನ್ನು ಕೂಡ ಒದಗಿಸಲಾಗಿದೆ. ಹೀಗಿರುವಾಗಲೇ ‘ರಾಮಾಯಣ’ ಬಿಹೈಂಡ್ ದಿ ಸೀನ್ (ಬಿಟಿಎಸ್) ವಿಡಿಯೋ ವೈರಲ್ ಆಗಿದೆ. ಇದರ ಅಸಲಿಯತ್ತು ಏನು ಎಂಬ ಬಗ್ಗೆ ಇಲ್ಲಿದೆ ವಿವರ.
‘ರಾಮಾಯಣ’ ಸಿನಿಮಾದಲ್ಲಿ ರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಹಾಗು ರಾವಣನಾಗಿ ಯಶ್ ಕಾಣಿಸಿಕೊಳ್ಳುತ್ತಿದ್ದಾರೆ. ‘ಚಿಲ್ಲರ್ ಪಾರ್ಟಿ’, ‘ದಂಗಲ್’ ರೀತಿಯ ಸಿನಿಮಾ ನೀಡಿದ ನಿತೇಶ್ ತಿವಾರಿ ಅವರು ‘ರಾಮಾಯಣ’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ದೊಡ್ಡ ಬಜೆಟ್ನಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಹನುಮ ಜಯಂತಿ ಪ್ರಯುಕ್ತ ರಿಲೀಸ್ ಆದ ಟೀಸರ್ಗೆ ಸಾಕಷ್ಟು ಟೀಕೆ ವ್ಯಕ್ತವಾಗಿದೆ.
ಈ ಟೀಕೆಯ ಬೆನ್ನಲ್ಲೇ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ‘ರಾಮಾಯಣ’ ಸಿನಿಮಾದ ಶೂಟ್ ಯಾವ ರೀತಿ ಮಾಡಲಾಗಿದೆ ಎಂಬುದನ್ನು ತೋರಿಸಲಾಗಿದೆ. ಸೆಟ್ಗಳಲ್ಲಿ ಅದ್ದೂರಿತನ ಕಾಣಿಸಿದೆ. ಇದು ನಿಜವಾದ ವಿಡಿಯೋ ಎಂದು ಕೆಲವರು ನಂಬಿದ್ದಾರೆ! ಅಸಲಿಗೆ ಇದು ನಿಜವಾದ ವಿಡಿಯೋ ಅಲ್ಲ. ಇದು ಎಐನಿಂದ ಮಾಡಲ್ಪಟ್ಟಿದ್ದಾಗಿದೆ.
ಇದನ್ನೂ ಓದಿ: ಕನ್ನಡದಿಂದ ಬಣ್ಣದ ಬದುಕು ಆರಂಭಿಸಿದ ನಟಿ ‘ರಾಮಾಯಣ’ದಲ್ಲಿ ಶೂರ್ಪನಖಿ
ಈ ವಿಡಿಯೋಗೆ ಕೆಲವರು ಕಮೆಂಟ್ ಮಾಡಿದ್ದಾರೆ. ವಿಡಿಯೋದ ಅಸಲಿಯತ್ತೇನು ಎಂಬುದನ್ನು ಹೇಳಿದ್ದಾರೆ. ‘ಟೀಸರ್ ಎಐನಲ್ಲಿ ಮಾಡಲಾಗಿದೆ. ಅದನ್ನು ಸಮರ್ಥಿಸಿಕೊಳ್ಳಲು ಮಾಡಿದ ವಿಡಿಯೋ ಕೂಡ ಎಐನದ್ದು’ ಎಂದು ಕೆಲವರು ಹೇಳಿದ್ದಾರೆ. ಈ ವಿಡಿಯೋ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಕೆಲವರು ಇದನ್ನು ನಿಜ ಎಂದು ನಂಬಿದ್ದಾರೆ.
‘ರಾಮಾಯಣ’ ಸಿನಿಮಾದ ಬಜೆಟ್ 4 ಸಾವಿರ ಕೋಟಿ ರೂಪಾಯಿ ಎಂದೆಲ್ಲ ವರದಿ ಆಗಿದೆ. ಈ ವರ್ಷದ ದೀಪಾವಳಿಗೆ ಮೊದಲ ಭಾಗ ಹಾಗೂ ಮುಂದಿನ ವರ್ಷದ ದೀಪಾವಳಿಗೆ ಎರಡನೇ ಭಾಗ ರಿಲೀಸ್ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.