ರಣ್ಬೀರ್ ಕಪೂರ್, ಯಶ್ (Yash) ನಟಿಸಿರುವ ‘ರಾಮಾಯಣ’ ಸಿನಿಮಾ ವಿಶ್ವ ಬಾಕ್ಸ್ ಆಫೀಸ್ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಸಿನಿಮಾ ನಿರ್ಮಾಣ ಮಾಡಿರುವ ನಮಿತ್ ಮಲ್ಹೋತ್ರಾ, ‘ಭಾರತದ ಸಂಸ್ಕೃತಿಯನ್ನು, ಭಾರತದ ಧರ್ಮವನ್ನು ನಾವು ವಿಶ್ವಕ್ಕೆ ತಲುಪಿಸುತ್ತಿದ್ದೇವೆ’ ಎಂದಿದ್ದಾರೆ. ಅಸಲಿಗೆ ‘ರಾಮಾಯಣ’ ಕತೆಯನ್ನು ದಶಗಳ ಹಿಂದಿನಿಂದಲೂ ಹಲವು ರಾಷ್ಟ್ರಗಳಿಗೆ ಭಾರತೀಯರು ಪರಿಚಯಿಸಿದ್ದಾರೆ. ಹಲವಾರು ದೇಶಗಳಲ್ಲಿ ರಾಮಾಯಣದ ನಾಟಕ ಪ್ರದರ್ಶನಗಳಾಗಿವೆ. ರಾಮಾಯಣ ಕತೆಯ ತರ್ಜುಮೆಗಳನ್ನು ಮಾಡಲಾಗಿದೆ. ಆಸಕ್ತಿಕರ ಕತೆಯೆಂದರೆ ‘ರಾಮಾಯಣ’ ಕತೆ ಸಿನಿಮಾ ಆಗಿ ಜಪಾನ್ಗೆ ಹೋದ ಕತೆ.
ಜಪಾನಿಗೆ ‘ರಾಮಾಯಣ’ ಸಿನಿಮಾ ಆಗಿ ಹೋಗಿದ್ದು ಯುಗೊ ಸಾಕೊ ಎಂಬುವರ ಸತತ ಪ್ರಯತ್ನದಿಂದ. ಯುಗೊ ಸಾಕೊ ಜಪಾನಿನ ಜನಪ್ರಿಯ ಸಿನಿಮಾ ನಿರ್ದೇಶಕ, ಚಿತ್ರಕತೆ ಬರಹಗಾರ ಮತ್ತು ನಿರ್ಮಾಪಕ. 1970 ರಲ್ಲಿ ಮೊದಲ ಬಾರಿ ಭಾರತಕ್ಕೆ ಬಂದ ಯುಗೊ ಸಾಕೊ, ಭಾರತವನ್ನು ಬಹಳ ಇಷ್ಟಪಡುತ್ತಾರೆ. ಅದಾದ ಬಳಿಕ ಸುಮಾರು 40 ಬಾರಿ ಬೇರೆ ಬೇರೆ ಕಾರಣಗಳಿಗೆ ಅವರು ಭಾರತಕ್ಕೆ ಬರುತ್ತಾರೆ. ಆದರೆ 1983 ರಲ್ಲಿ ಅವರು ಭಾರತದ ಖ್ಯಾತ ಪುರಾತತ್ವ ಶಾಸ್ತ್ರಜ್ಞ ಡಾ ಬಿಬಿ ಲಾಲ್ ಅವರನ್ನು ಭೇಟಿ ಆಗುತ್ತಾರೆ. ಅವರೊಟ್ಟಿಗೆ ಸೇರಿ ರಾಮಾಯಣ ಕುರಿತಾದ ಡಾಕ್ಯುಮೆಂಟರಿ ಒಂದಕ್ಕೆ ಕೆಲಸ ಮಾಡುತ್ತಾರೆ. ಅವರ ಮೇಲೆ ‘ರಾಮಾಯಣ’ ಕತೆ ಬಹಳ ಪರಿಣಾಮ ಬೀರುತ್ತದೆ. ಅದನ್ನು ಜಪಾನಿನಲ್ಲಿ ಸಿನಿಮಾ ಮಾಡುವ ಆಸೆಯನ್ನು ಅವರು ವ್ಯಕ್ತಪಡಿಸುತ್ತಾರೆ.
ಜಪಾನಿನ ಅನಿಮೇಟೆಡ್ ಮಾದರಿ ಬಳಸಿ ‘ರಾಮಾಯಣ’ ಕತೆಯನ್ನು ಸಿನಿಮಾ ಮಾಡುವುದು ಅವರ ಆಸೆ ಆಗಿರುತ್ತದೆ. ಆದರೆ ‘ರಾಮಾಯಣ’ ದೇವರ ಕತೆಯಾಗಿದ್ದು ಅದನ್ನು ಕಾರ್ಟೂನ್ ಮಾದರಿಯಲ್ಲಿ ನಿರ್ಮಿಸಲು ಇಲ್ಲಿನ ಸಂಪ್ರದಾಯವಾದಿಗಳು ಒಪ್ಪುವುದಿಲ್ಲ. ವಿಶ್ವ ಹಿಂದೂ ಪರಿಷತ್ ಅಂದೂ ದೆಹಲಿಯ ಜಪಾನಿನ ರಾಯಭಾರಿ ಕಚೇರಿ ಮುಂದೆ ಪ್ರತಿಭಟನೆ ಸಹ ನಡೆಸುತ್ತದೆ. ಆದರೆ ಯುಗೊ ಸಾಕೊ ತಮ್ಮ ಪ್ರಯತ್ನ ಬಿಡುವುದಿಲ್ಲ, ಅನಿಮೇಷನ್ ಎಂಬುದು ಜಪಾನಿನ ಬಹಳ ಪ್ರಬುದ್ಧ ಮತ್ತು ಜನಪ್ರಿಯ ಕಲೆ ಎಂಬುದನ್ನು ಮನದಟ್ಟು ಮಾಡಿ ಸರ್ಕಾರದಿಂದಲೂ ಅನುಮತಿ ಪಡೆದೇ ಬಿಡುತ್ತಾರೆ.
ಇದನ್ನೂ ಓದಿ:ಎರಡು ಭಿನ್ನ ಆರ್ಕೆಸ್ಟ್ರಾ, ‘ರಾಮಾಯಣ’ಕ್ಕಾಗಿ ರೆಹಮಾನ್ ಸಾಹಸ ನೋಡಿ
ಬಳಿಕ ಹಲವು ವರ್ಷಗಳ ಕಾಲ ‘ರಾಮಾಯಣ: ದಿ ಲೆಜೆಂಡ್ ಆಫ್ ಪ್ರಿನ್ಸ್ ರಾಮ’ ಕತೆಯನ್ನು ಅನಿಮೇಷನ್ ಸಿನಿಮಾ ಮೇಲೆ ಕೆಲಸ ಮಾಡುತ್ತಾರೆ. ಈ ಸಿನಿಮಾಕ್ಕಾಗಿ ಹಲವು ಕಲಾವಿದರು ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಡ್ರಾಯಿಂಗ್ಗಳನ್ನು ಮಾಡುತ್ತಾರೆ. ಈ ಡ್ರಾಯಿಂಗ್ಗಳನ್ನು ಪ್ರತಿದಿನ ಭಾರತಕ್ಕೆ ಕಳಿಸಿ ಅಭಿಪ್ರಾಯಗಳನ್ನು ಸಹ ಸಂಗ್ರಹಿಸಲಾಗುತ್ತಿರುತ್ತದೆ. ಹೀಗಾಗಿ ಸಿನಿಮಾದ ನಿರ್ಮಾಣಕ್ಕೆ ವರ್ಷಗಳೇ ಬೇಕಾಗುತ್ತದೆ. ಆದರೆ ಸಿನಿಮಾ ಮುಗಿಯುವ ವೇಳೆಗೆ ಭಾರತದಲ್ಲಿ ಬಾಬ್ರಿ ಮಸೀದಿ ಕುರಿತು ಹೋರಾಟ ಶುರು ಆಗಿರುತ್ತದೆ. ಮೊದಲು ಸಿನಿಮಾದ ಇಂಗ್ಲೀಷ್ ಆವೃತ್ತಿಯನ್ನು ಕೆಲ ಆಯ್ದ ಚಿತ್ರೋತ್ಸವಗಳಲ್ಲಿ ಪ್ರದರ್ಶಿಸಲಾಗುತ್ತದೆ. ಬಳಿಕ ಧೈರ್ಯ ಮಾಡಿ ಕಮಲ್ ಹಾಸನ್ ಅವರು ಸಿನಿಮಾದ ಬಿಡುಗಡೆ ಹಕ್ಕು ಖರೀದಿಸಿ ಬಿಡುಗಡೆ ಮಾಡುತ್ತಾರೆ. ಆದರೆ ರಾಮ ಜನ್ಮಭೂಮಿ ಚಳವಳಿ ಉತ್ಕೃಷ್ಟ ಸ್ಥಿತಿಯಲ್ಲಿದ್ದ ಆ ಸಮಯದಲ್ಲಿ ಸಿನಿಮಾ ಅಷ್ಟೇನೂ ಉತ್ತಮ ಪ್ರದರ್ಶನ ಕಾಣುವುದಿಲ್ಲ. ಹಲವು ಚಿತ್ರಮಂದಿರಗಳು ಸಿನಿಮಾವನ್ನು ಪ್ರದರ್ಶನ ಸಹ ಮಾಡುವುದಿಲ್ಲ, ಕೆಲವೆಡೆ ಸರ್ಕಾರಗಳೇ ಅನುಮತಿ ಕೊಟ್ಟಿರುವುದಿಲ್ಲ.
1997 ರಲ್ಲಿ ಜಪಾನಿನ ಯೊಕೊಹಾಮಾನಲ್ಲಿ ಈ ಸಿನಿಮಾ ಜಪಾನಿ ಭಾಷೆಯಲ್ಲಿ ಪ್ರದರ್ಶನ ಆಗುತ್ತದೆ. ಅಲ್ಲಿ ಅತ್ಯುತ್ತಮ ಪ್ರತಿಕ್ರಿಯೆಯನ್ನು ಸಿನಿಮಾ ಪಡೆಯುತ್ತದೆ. 97ರ ಬಳಿಕ ಭಾರತದಲ್ಲಿ ಟಿವಿ ಬಳಕೆ ಹಾಗೂ ಸಿಡಿ ಪ್ಲೇಯರ್ ಬಳಕೆ ಹೆಚ್ಚಾದ ಸಮಯದಲ್ಲಿ ‘ರಾಮಾಯಣ’ ಅನಿಮೇಷನ್ ಸಿನಿಮಾಕ್ಕೆ ಮತ್ತೆ ಬೇಡಿಕೆ ಬರುತ್ತದೆ. ಸಿನಿಮಾವನ್ನು ಮಕ್ಕಳ ಚಾನೆಲ್ಗಳು ಪದೇ ಪದೇ ಪ್ರದರ್ಶಿಸುತ್ತವೆ, ಸಿಡಿ, ಡಿವಿಡಿಗಳು ಭಾರಿ ಸಂಖ್ಯೆಯಲ್ಲಿ ಮಾರಾಟ ಆಗುತ್ತವೆ. ಅತ್ತ ಜಪಾನಿನಲ್ಲೂ ಸಹ ಈ ಸಿನಿಮಾ ಬ್ಲಾಕ್ ಬಸ್ಟರ್ ಆಗಿಬಿಡುತ್ತದೆ. ತೀರ ಇತ್ತೀಚೆಗೆ 2018 ರಿಂದ 2019 ರ ವರೆಗೆ ಬರೋಬ್ಬರಿ ಒಂದು ವರ್ಷಗಳ ಕಾಲ ಈ ಸಿನಿಮಾ ಜಪಾನಿನ ಮಿನಿ ಥಿಯೇಟರ್ ಸಿನಿಮಾ ನೊವ್ಸೆಂಟೊ ನಲ್ಲಿ ಪ್ರದರ್ಶನ ಕಾಣುತ್ತದೆ.
2022 ರಲ್ಲಿ ಭಾರತ ಮತ್ತು ಜಪಾನಿನ ಗೆಳೆತನದ 70ನೇ ವಾರ್ಷಿಕೋತ್ಸವ ಆಚರಣೆಯಾಯ್ತು. ಭಾರತದಲ್ಲಿ ಜಪಾನಿ ಸಿನಿಮಾ ಫೆಸ್ಟಿವಲ್ ಆಯೋಜಿಸಲಾಗಿತ್ತು. ಇದರಲ್ಲಿ ಮೊದಲು ಪ್ರದರ್ಶನವಾದ ಸಿನಿಮಾ ‘ರಾಮಾಯಣ: ದಿ ಲೆಜೆಂಡ್ ಆಫ್ ಪ್ರಿನ್ಸ್ ರಾಮ’. ಈ ಸಿನಿಮಾದ ಡಿಜಿಟಲ್ ಆವೃತ್ತಿಯನ್ನು ನರೇಂದ್ರ ಮೋದಿ ಅವರೇ ಬಿಡುಗಡೆ ಮಾಡಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On – 8:36 pm, Sun, 26 April 26
