ಬಿ.ಆರ್. ಚೋಪ್ರಾ ಅವರ ಪ್ರಸಿದ್ಧ ‘ಮಹಾಭಾರತ’ ಧಾರಾವಾಹಿಯಲ್ಲಿ ಯುಧಿಷ್ಠಿರನ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿದ್ದ ಹಿರಿಯ ನಟ ಗಜೇಂದ್ರ ಚೌಹಾಣ್ (Gajendra Chauhan) ಅವರು ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ (Ramayana) ಸಿನಿಮಾದ ಟ್ರೇಲರ್ ಕುರಿತು ತಮ್ಮ ಮುಕ್ತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶ್ರೀರಾಮನ ಪಾತ್ರದಲ್ಲಿ ರಣಬೀರ್ ಕಪೂರ್ (Ranbir Kapoor) ಗೆಟಪ್ ಚೆನ್ನಾಗಿದೆ ಎಂದಿರುವ ಅವರು, ಟ್ರೇಲರ್‌ನ ಕೆಲವು ಭಾಗಗಳು ತಮಗೆ ಸಂಪೂರ್ಣ ತೃಪ್ತಿ ನೀಡಿಲ್ಲ ಎಂದು ಹೇಳಿದ್ದಾರೆ.
‘ಹಿಂದಿ ರಶ್’ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಗಜೇಂದ್ರ ಚೌಹಾಣ್, ಚಿತ್ರದಲ್ಲಿ ನಟಿ ಲಾರಾ ದತ್ತಾ ನಿರ್ವಹಿಸಿರುವ ಕೈಕೇಯಿ ಪಾತ್ರದ ಚಿತ್ರಣದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶ್ರೀರಾಮನನ್ನು ವನವಾಸಕ್ಕೆ ಕಳುಹಿಸುವಂತೆ ದಶರಥ ಮಹಾರಾಜನ ಬಳಿ ಕೈಕೇಯಿ ಕೇಳುವ ದೃಶ್ಯವನ್ನು ತೋರಿಸಿದ ರೀತಿ ಅವರಿಗೆ ಇಷ್ಟವಾಗಿಲ್ಲ. ‘ನಾನು ರಾಮಾಯಣ ಟ್ರೇಲರ್ ನೋಡಿದೆ. ವೈಯಕ್ತಿಕವಾಗಿ ಹೇಳಬೇಕೆಂದರೆ, ನನಗೇನೂ ಇಂಪ್ರೆಸ್ ಆಗಿಲ್ಲ. ಶ್ರೀರಾಮನ ವನವಾಸವನ್ನು ಕೋರುವ ಕೈಕೇಯಿಯ ದೃಶ್ಯ ನನ್ನನ್ನು ಸೆಳೆಯಲಿಲ್ಲ. ಆಕೆಯ ವೇಷಭೂಷಣ ತುಂಬಾ ಆಧುನಿಕವಾಗಿದೆ. ಅವರಿಗೆ ಆಧುನಿಕ ಶೈಲಿಯ ಸೀರೆಯನ್ನು ನೀಡಲಾಗಿದೆ’ ಎಂದು ಚೌಹಾಣ್ ಹೇಳಿದ್ದಾರೆ.
2002ರಲ್ಲಿ ರವಿ ಚೋಪ್ರಾ ಅವರ ‘ರಾಮಾಯಣ’ ಧಾರಾವಾಹಿಯಲ್ಲಿ ದಶರಥನಾಗಿ ಅಭಿನಯಿಸಿದ ಅನುಭವವನ್ನು ನೆನಪಿಸಿಕೊಂಡ ಅವರು, ಮಂಥರೆಯ ಮಾತಿಗೆ ಮರುಳಾಗಿ ಕೈಕೇಯಿ ವನವಾಸ ಕೇಳುವ ಘಟನೆಯು ಇಡೀ ಕುಟುಂಬ ಒಡೆಯುವ ಪ್ರಮುಖ ಭಾವನಾತ್ಮಕ ತಿರುವು. ಹಾಗಾಗಿ ಅಂತಹ ದೃಶ್ಯಗಳನ್ನು ಅತ್ಯಂತ ಜಾಗರೂಕತೆಯಿಂದ ಮತ್ತು ಭಾವನಾತ್ಮಕವಾಗಿ ಸೆರೆಹಿಡಿಯಬೇಕಿತ್ತು ಎಂದಿದ್ದಾರೆ.
‘ರಾಮಾಯಣ’ ಸಿನಿಮಾದ ಟ್ರೇಲರ್:
ಆದಾಗ್ಯೂ, ರಣಬೀರ್ ಕಪೂರ್ ಅವರ ಶ್ರೀರಾಮನ ಗೆಟಪ್ ಅನ್ನು ಗಜೇಂದ್ರ ಚೌಹಾಣ್ ಶ್ಲಾಘಿಸಿದ್ದಾರೆ. ‘ರಣಬೀರ್ ಕಪೂರ್ ಅವರಿಗೆ ಸ್ಟಾರ್ ಆಗಿ ತಮ್ಮದೇ ಆದ ಇಮೇಜ್ ಇದೆ. ಅವರು ದೊಡ್ಡ ನಟ. ಈಗ ರಾಮನ ಪಾತ್ರ ಮಾಡುತ್ತಿದ್ದಾರೆ. ಆ ಗೆಟಪ್‌ನಲ್ಲಿ ಅವರು ನಿಜಕ್ಕೂ ಚೆನ್ನಾಗಿ ಕಾಣಿಸುತ್ತಿದ್ದಾರೆ. ಅದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ‘ರಾಮಾಯಣ’ ಪಾತ್ರದ ವಸ್ತ್ರಗಳ ಬಗೆಗಿನ ಟೀಕೆಗೆ ಸ್ಪಷ್ಟನೆ ನೀಡಿದ ವಿನ್ಯಾಸಕರು
‘ನಮ್ಮ ಸಂಸ್ಕೃತಿ ಮತ್ತು ಹಿಂದಿನ ಸಿನಿಮಾಗಳಿಂದಾಗಿ ಜನರ ಮನಸ್ಸಿನಲ್ಲಿ ಶ್ರೀರಾಮನ ಬಗ್ಗೆ ನಿರ್ದಿಷ್ಟವಾದ ದೈವಿಕ ಕಲ್ಪನೆ ಆಳವಾಗಿ ಬೇರೂರಿದೆ. ಹಾಗಾಗಿ ಅಂತಹ ನಿರೀಕ್ಷೆಗಳನ್ನು ತಲುಪುವುದು ಯಾವುದೇ ನಟನಿಗೂ ಸವಾಲಿನ ಕೆಲಸ. ಆದರೂ ಕೇವಲ ಟ್ರೇಲರ್ ನೋಡಿ ನಟನೆಯನ್ನು ನಿರ್ಣಯಿಸುವುದು ಸರಿಯಲ್ಲ. ಸಂಪೂರ್ಣ ಸಿನಿಮಾ ಬಿಡುಗಡೆಯಾದ ಮೇಲೆಯೇ ಅಂತಿಮ ಅಭಿಪ್ರಾಯಕ್ಕೆ ಬರಬಹುದು’ ಎಂದು ಗಜೇಂದ್ರ ಚೌಹಾಣ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.