ಬಹುನಿರೀಕ್ಷಿತ ಬಿಗ್ ಬಜೆಟ್ ಸಿನಿಮಾ ‘ರಾಮಾಯಣ’ (Ramayana) ಟ್ರೇಲರ್ ಬಿಡುಗಡೆಯಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ಜೋರಾಗಿವೆ. ಚಿತ್ರದ ದೃಶ್ಯ ವೈಭವ ಹಾಗೂ ವಿಎಫ್‌ಎಕ್ಸ್ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿರುವುದರ ನಡುವೆಯೇ, ನಟಿ ಸಾಯಿ ಪಲ್ಲವಿ (Sai Pallavi) ಅವರ ಬಗ್ಗೆಯೂ ಅನಗತ್ಯ ವಿವಾದ ಮತ್ತು ಟ್ರೋಲ್ ಆರಂಭವಾಗಿದೆ. ಸೀತೆಯ ಪಾತ್ರಕ್ಕೆ ಸಾಯಿ ಪಲ್ಲವಿ ಸೂಕ್ತ ಆಯ್ಕೆ ಅಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಈ ರೀತಿಯ ಟೀಕೆ ಕೇವಲ ಬಾಲಿವುಡ್ ವಲಯದಿಂದ ಮಾತ್ರವಲ್ಲದೆ, ದಕ್ಷಿಣ ಭಾರತದ ಕೆಲವು ಸಿನಿರಸಿಕರಿಂದಲೂ ಕೇಳಿಬರುತ್ತಿದೆ. ಸಿನಿಮಾ ಬಿಡುಗಡೆಯಾಗಿ ಅವರ ಪೂರ್ಣ ನಟನೆಯನ್ನು ವೀಕ್ಷಿಸುವ ಮೊದಲೇ, ‘ಸಾಯಿ ಪಲ್ಲವಿ ಸೀತೆಯ ಪಾತ್ರಕ್ಕೆ ಸೂಕ್ತವಲ್ಲ’ ಎಂದು ತೀರ್ಪು ನೀಡಲು ಹಲವರು ಮುಂದಾಗಿದ್ದಾರೆ. ಇದರಿಂದ ಸಾಯಿ ಪಲ್ಲವಿ ಅವರ ಅಪ್ಪಟ ಅಭಿಮಾನಿಗಳಿಗೆ ಬೇಸರ ಆಗಿದೆ.
ಸಿನಿಮಾ ಬಿಡುಗಡೆಗೂ ಮುನ್ನವೇ ಟೀಕೆ:
‘ರಾಮಾಯಣ’ ಸಿನಿಮಾ ಇನ್ನೂ ಚಿತ್ರಮಂದಿರಕ್ಕೆ ಬಂದಿಲ್ಲ. ಸಾಯಿ ಪಲ್ಲವಿ ಅವರ ಅಭಿನಯ ಹೇಗಿರಲಿದೆ ಎಂಬುದು ಯಾರಿಗೂ ಪೂರ್ಣವಾಗಿ ತಿಳಿದಿಲ್ಲ. ಆದರೂ ಸೋಶಿಯಲ್ ಮೀಡಿಯಾದಲ್ಲಿ ಕೆಲವರು, ‘ಸಾಯಿ ಪಲ್ಲವಿ ಈ ಪಾತ್ರಕ್ಕೆ ಸೂಕ್ತವಲ್ಲ’, ‘ಅವರು ಸೀತೆಯಂತೆ ಕಾಣಿಸುತ್ತಿಲ್ಲ’, ಈ ಪಾತ್ರಕ್ಕೆ ಬೇರೆ ನಟಿಯನ್ನು ಆಯ್ಕೆ ಮಾಡಬೇಕಿತ್ತು’ ಎಂಬಿತ್ಯಾದಿಯಾಗಿ ಕಮೆಂಟ್ ಮಾಡುತ್ತಿದ್ದಾರೆ.
‘ರಾಮಾಯಣ’ ಟ್ರೇಲರ್:
ಗ್ಲಾಮರ್ಗಿಂತ ಅಭಿನಯಕ್ಕೇ ಆದ್ಯತೆ ನೀಡಿದ ನಟಿ:
ಸಾಯಿ ಪಲ್ಲವಿ ಎಂದಿಗೂ ಗ್ಲಾಮರ್ ಅಥವಾ ಕೇವಲ ಅಂದಚೆಂದದ ಪ್ರದರ್ಶನದಿಂದ ಹೆಸರು ಮಾಡಿದವರಲ್ಲ. ತಮ್ಮ ಸಹಜವಾದ ಅಭಿನಯ, ಪಾತ್ರದ ಭಾವನಾತ್ಮಕ ಆಳವನ್ನು ಪರದೆಯ ಮೇಲೆ ತರುವ ಅದ್ಭುತ ಕೌಶಲ್ಯದಿಂದಲೇ ಅವರು ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಸೀತೆಯಂತಹ ಪವಿತ್ರ ಹಾಗೂ ಭಾವನಾತ್ಮಕ ಪಾತ್ರಕ್ಕೆ ಸಾಯಿ ಪಲ್ಲವಿ ಅವರಂತಹ ನಟಿಯನ್ನು ಆಯ್ಕೆ ಮಾಡಿರುವುದು ಚಿತ್ರತಂಡದ ಸೃಜನಶೀಲ ನಿರ್ಧಾರ. ಟ್ರೇಲರ್‌ನಲ್ಲಿ ಕಾಣಿಸುವ ಕೆಲವೇ ಸೆಕೆಂಡುಗಳ ದೃಶ್ಯವನ್ನು ನೋಡಿ ಒಬ್ಬ ನಟಿಯ ಪ್ರತಿಭೆಯನ್ನು ನಿರ್ಧರಿಸುವುದು ಸರಿಯಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು.
ಇದನ್ನೂ ಓದಿ: ಸೀತೆ ಪಾತ್ರಕ್ಕೆ ಸಾಯಿ ಪಲ್ಲವಿ ಸೂಕ್ತವಲ್ಲ ಎಂದವರಿಗೆ ಹಳೆಯ ಸೀತಾ ಪಾತ್ರಧಾರಿ ತಿರುಗೇಟು
ದೀಪಾವಳಿ ಹಬ್ಬಕ್ಕೆ ರಾಮಾಯಣ ಬಿಡುಗಡೆ:
ಪೌರಾಣಿಕ ಪಾತ್ರಗಳು ಎಂದಿಗೂ ನೆನಪಿನಲ್ಲಿ ಉಳಿಯುವುದು ನಟ-ನಟಿಯರು ಬೆಳ್ಳಿಪರದೆಯ ಮೇಲೆ ನೀಡುವ ಜೀವಂತ ಅಭಿನಯದಿಂದಲೇ ಹೊರತು, ಫಸ್ಟ್ ಲುಕ್ ಪೋಸ್ಟರ್‌ಗಳು ಅಥವಾ ಟ್ರೇಲರ್‌ನ ಕೆಲ ದೃಶ್ಯಗಳಿಂದ ಅಲ್ಲ. ತರಾತುರಿಯಲ್ಲಿ ತೀರ್ಮಾನಕ್ಕೆ ಬರುವ ಬದಲು, ಮುಂಬರುವ ದೀಪಾವಳಿ ಹಬ್ಬಕ್ಕೆ ಬಿಡುಗಡೆಯಾಗಲಿರುವ ‘ರಾಮಾಯಣ’ ಚಿತ್ರವನ್ನು ವೀಕ್ಷಿಸಿದ ಬಳಿಕವಷ್ಟೇ ಸಾಯಿ ಪಲ್ಲವಿ ಅವರ ಅಭಿನಯವನ್ನು ನ್ಯಾಯಯುತವಾಗಿ ವಿಮರ್ಶಿಸುವುದು ಸೂಕ್ತ ಎಂದು ಅಭಿಮಾನಿಗಳು ನಟಿಯ ಪರ ವಹಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.