ರಣ್ಬೀರ್ ಕಪೂರ್ (Ranbir Kapoor), ಯಶ್, ಸಾಯಿ ಪಲ್ಲವಿ ನಟನೆಯ ‘ರಾಮಾಯಣ’ ಸಿನಿಮಾ, ಪ್ರಸ್ತುತ ಭಾರತೀಯ ಚಿತ್ರರಂಗದ ಅತಿ ದೊಡ್ಡ ಬಜೆಟ್ನ ಸಿನಿಮಾ ಎನಿಸಿಕೊಂಡಿದೆ. ಎರಡೂ ಭಾಗಗಳಿಗೆ ಸೇರಿ 4000 ಕೋಟಿ ಖರ್ಚು ಮಾಡಲಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಸಿನಿಮಾದ ಟ್ರೈಲರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಭಾರಿ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿರುವುದು ಟ್ರೈಲರ್ನಿಂದ ಖಾತ್ರಿ ಆಗುತ್ತಿದೆ. ಟ್ರೈಲರ್ ನೋಡಿದವರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಸೀತೆಯ ಪಾತ್ರ ನಿರ್ವಹಿಸಿರುವ ಸಾಯಿ ಪಲ್ಲವಿ ಬಗ್ಗೆ ಭಿನ್ನ-ಭಿನ್ನ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಕೆಲವರು ಸಾಯಿ ಪಲ್ಲವಿ ಸೂಕ್ತ ಆಯ್ಕೆ ಎಂದರೆ, ಇನ್ನು ಕೆಲವರು ಅಲ್ಲ ಎನ್ನುತ್ತಿದ್ದಾರೆ. ಅಂದಹಾಗೆ ‘ರಾಮಾಯಣ’ದಲ್ಲಿ ಸೀತೆ ಪಾತ್ರ ಮಾಡುವ ಅವಕಾಶ ಕನ್ನಡದ ನಟಿಗೆ ಬಂದಿತ್ತು.
ಸಾಯಿ ಪಲ್ಲವಿ, ‘ರಾಮಾಯಣ’ ಸಿನಿಮಾನಲ್ಲಿ ಸೀತೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ಇದೇ ಪಾತ್ರ ನಿರ್ವಹಿಸುವ ಅವಕಾಶ ಕನ್ನಡದ ನಟಿ ಶ್ರೀನಿಧಿ ಶೆಟ್ಟಿಗೆ ಸಹ ಒದಗಿ ಬಂದಿತ್ತು. ಆದರೆ ಅವರೇನು ಪಾತ್ರವನ್ನು ರಿಜೆಕ್ಟ್ ಮಾಡಲಿಲ್ಲ ಆದರೆ ಅವರಿಗೆ ಅದೃಷ್ಟ ಕೈಕೊಟ್ಟಿತು. ಅವರೇ ಹಿಂದೊಮ್ಮೆ ಹೇಳಿಕೊಂಡಂತೆ ಶ್ರೀನಿಧಿ ಶೆಟ್ಟಿ ಅವರು ‘ರಾಮಾಯಣ’ ಸಿನಿಮಾದ ಸೀತೆಯ ಪಾತ್ರಕ್ಕಾಗಿ ಆಡಿಷನ್ ನೀಡಿದ್ದರಂತೆ. ಆದರೆ ಯಾವ ಕಾರಣಕ್ಕೋ ಏನೋ ಪಾತ್ರ ಅವರಿಗೆ ಸಿಕ್ಕಿಲ್ಲ, ಬದಲಿಗೆ ಸಾಯಿ ಪಲ್ಲವಿ ಅವರ ಪಾಲಾಗಿದೆ.
ಶ್ರೀನಿಧಿ ಶೆಟ್ಟಿ ಸಹ ಬಹಳ ಒಳ್ಳೆಯ ನಟಿ ಮತ್ತು ಸುಂದರಿ ಸಹ. ಸಪೂರ ದೇಹದ, ಕೋಲು ಮುಖದ ಅವರು ಖಂಡಿತ ಸೀತೆಯ ಪಾತ್ರಕ್ಕೆ ಚೆನ್ನಾಗಿ ಒಪ್ಪುತ್ತಿದ್ದರು. ಆದರೆ ಅದೃಷ್ಟ ಅವರ ಪರ ಇರಲಿಲ್ಲ. ಪಾತ್ರ ಸಾಯಿ ಪಲ್ಲವಿ ಪಾಲಾಗಿದೆ. ಸಾಯಿ ಪಲ್ಲವಿ ಸಹ ಟ್ರೈಲರ್ನಲ್ಲಿ ಅದ್ಭುತವಾಗಿ ಕಾಣುತ್ತಿದ್ದಾರೆ. ಆದರೆ ಕೆಲವರು ಸಾಯಿ ಪಲ್ಲವಿ ಅವರ ಆಯ್ಕೆಯ ಬಗ್ಗೆ ಚಕಾರ ಎತ್ತಿದ್ದಾರೆ. ಅವರ ಗುಂಗುರು ಕೂದಲಿನ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ರಾಮಾಯಣ ಟ್ರೇಲರ್ ರಿಲೀಸ್ ಬಳಿಕ ಟ್ರೋಲ್ ಆದ ಸಾಯಿ ಪಲ್ಲವಿ; ಕಾರಣ ಏನು?
‘ರಾಮಾಯಣ’ ಸಿನಿಮಾವು ಭಾರತದ ಈ ವರೆಗಿನ ಅತಿ ದೊಡ್ಡ ಬಜೆಟ್ ಸಿನಿಮಾ ಎನ್ನಲಾಗುತ್ತಿದೆ. ರಣ್ಬೀರ್ ಕಪೂರ್ ರಾಮನಾಗಿ, ಯಶ್ ರಾವಣನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ರಕುಲ್ ಶೂರ್ಪನಕಿಯಾಗಿ, ಸನ್ನಿ ಡಿಯೋಲ್ ಹನುಮಂತನಾಗಿ ನಟಿಸುತ್ತಿದ್ದಾರೆ. ಸಿನಿಮಾಕ್ಕೆ ಆಸ್ಕರ್ ವಿಜೇತರಾದ ಎಆರ್ ರೆಹಮಾನ್ ಮತ್ತು ಹಾನ್ಸ್ ಜೀಮರ್ ಅವರುಗಳು ಸಂಗೀತ ನೀಡಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ‘ದಂಗಲ್’ ಖ್ಯಾತಿಯ ನಿತೇಶ್ ತಿವಾರಿ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On – 9:35 pm, Sat, 1 August 26
