ರಾಮ ಮಂದಿರ ದೇಣಿಗೆ ಹಗರಣ:ಬೆಳಗ್ಗೆ ಫೋನ್ ಕಾಲ್, ಮಧ್ಯಾಹ್ನ ಕೋಟಿ ಕಳ್ಳತನ, ಏನೇನೆಲ್ಲಾ ನಡೀತು? – Kannada News | Ram Mandir Donation Scam: Morning Calls, Afternoon Crores Stolen in Ayodhya

ಅಯೋಧ್ಯೆ, ಜುಲೈ 12: ಅಯೋಧ್ಯೆ(Ayodhya)ಯ ಭವ್ಯ ರಾಮ ಮಂದಿರಕ್ಕೆ ಭಕ್ತರು ಅರ್ಪಿಸಿದ ದೇಣಿಗೆ ಹಣವನ್ನು ಲೂಟಿ ಮಾಡಿದ ಜಾಲದ ಹಿಂದೆ ಬಾಲಿವುಡ್ ಸಿನಿಮಾಗಳನ್ನು ಮೀರಿಸುವಂತಹ ಮಾಸ್ಟರ್ ಪ್ಲಾನ್ ಇರುವುದು ಪತ್ತೆಯಾಗಿದೆ. ಇದು ಕೇವಲ ಸಾಧಾರಣ ಕಳ್ಳತನವಲ್ಲ, ಬದಲಿಗೆ ದಿನವೂ ಬೆಳಗ್ಗೆ ಎದ್ದು ‘ಸ್ಕ್ರಿಪ್ಟ್’ ಬರೆದು ನಡೆಸುತ್ತಿದ್ದ ಸಂಘಟಿತ ಆಡಳಿತಾತ್ಮಕ ಅಪರಾಧ ಎಂಬುದು ತನಿಖೆಯಿಂದ ಬಯಲಾಗಿದೆ. ಎಸ್​ಐಟಿ ನಡೆಸಿರುವ ತನಿಖೆಯ ಪ್ರಕಾರ, ಈ ಗ್ಯಾಂಗ್ ಕೇವಲ 40 ದಿನಗಳಲ್ಲಿ ಬರೋಬ್ಬರಿ 70 ಬಾರಿ ರಾಮನ ಹಣಕ್ಕೆ ಕನ್ನ ಹಾಕಿದೆ.

ಬೆಳಗ್ಗೆಯೇ ಫಿಕ್ಸ್ ಆಗ್ತಿತ್ತು ‘ಯಾರ ಪಾತ್ರ ಏನು?’

ಬ್ಯಾಂಕಿನ ಹೊರಗುತ್ತಿಗೆ ನೌಕರರಾಗಿದ್ದ ಈ ಕಿಲಾಡಿಗಳು ಕಳ್ಳತನ ಮಾಡಲು ಕೌಂಟರ್‌ಗೆ ಬರುವ ಮುನ್ನವೇ ಇಡೀ ದಿನದ ಪ್ಲಾನ್ ಮಾಡಿಕೊಳ್ಳುತ್ತಿದ್ದರು. ಬೆಳಗ್ಗೆಯೇ ಫೋನ್ ಕರೆಗಳ ಮೂಲಕ ಯಾರು ಏನು ಮಾಡಬೇಕು ಎಂದು ನಿರ್ಧರಿಸಲಾಗುತ್ತಿತ್ತು. ಸಿಸಿಟಿವಿ ಕ್ಯಾಮೆರಾದ ಕಣ್ಣಿಗೆ ಕಳ್ಳತನ ಬೀಳಬಾರದು ಎಂದು ಗ್ಯಾಂಗ್‌ನ ಕೆಲವು ನೌಕರರು ಮುಂಭಾಗದಲ್ಲಿ ತಡೆಗೋಡೆಯಂತೆ ನಿಲ್ಲಬೇಕಿತ್ತು. ಕ್ಯಾಮೆರಾ ಮರೆಯಲ್ಲಿದ್ದುಕೊಂಡು ಯಾರು ನೋಟುಗಳನ್ನು ಬಟ್ಟೆಯೊಳಗೆ ಅಡಗಿಸಬೇಕು ಎಂಬುದು ಮೊದಲೇ ಫಿಕ್ಸ್ ಆಗಿರುತ್ತಿತ್ತು.

70 ಬಾರಿ ಕಳ್ಳತನ: ಸಿಸಿಟಿವಿಯಲ್ಲಿ ಸಿಕ್ಕಿಬಿದ್ದ ಅವಿನಾಶ್ ಮತ್ತು ಮನೀಶ್

ಮಂದಿರದ ಸುರಕ್ಷತಾ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿಗಳ ಕರಾಳ ಆಟ ಬೆಳಕಿಗೆ ಬಂದಿದೆ. ಅವಿನಾಶ್ ಶುಕ್ಲಾ ಮತ್ತು ಮನೀಶ್ ಎಂಬ ಇಬ್ಬರು ನೌಕರರು ದೇಣಿಗೆ ಕೌಂಟರ್‌ನಲ್ಲಿ ನೋಟುಗಳನ್ನು ಜೋಡಿಸುವ ನೆಪದಲ್ಲಿ ಪದೇ ಪದೇ ಹಣವನ್ನು ತಮ್ಮ ಬಟ್ಟೆಯೊಳಗೆ ತುರುಕಿಕೊಳ್ಳುತ್ತಿರುವುದು ಪತ್ತೆಯಾಗಿದೆ.

ಇವರಿಗೆ ಕ್ಯಾಮೆರಾ ಮರೆ ಮಾಡಲು ಅನುಕಲ್ಪ್, ಕರುಣೇಶ್ ಮತ್ತು ಲವ್ಕುಶ್ ಎಂಬ ಇತರ ನೌಕರರು ಸಹಾಯ ಮಾಡುತ್ತಿದ್ದರು. ಗ್ಯಾಂಗ್‌ನ ಮುಖ್ಯ ಸೂತ್ರಧಾರನಾಗಿದ್ದ ಅವಿನಾಶ್ ಶುಕ್ಲಾ, ತಾನು ಹಣ ಲೂಟಿ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಲೂಟಿ ಮಾಡಿದ ಹಣವನ್ನು ದಿನದ ಕೊನೆಯಲ್ಲಿ ಎಲ್ಲರೂ ಸಮನಾಗಿ ಹಂಚಿಕೊಳ್ಳುತ್ತಿದ್ದರು. ಆದರೆ ರಿಸ್ಕ್ ಹೆಚ್ಚಾಗಿ ತಗಲುತ್ತಿದ್ದರಿಂದ ಅವಿನಾಶ್ ತನಗೆ ದೊಡ್ಡ ಪಾಲು ಬೇಕೆಂದು ವಾದಿಸಿ ಹೆಚ್ಚು ಹಣ ಇಟ್ಟುಕೊಳ್ಳುತ್ತಿದ್ದ ಎನ್ನಲಾಗಿದೆ.

ಮತ್ತಷ್ಟು ಓದಿ: ರಾಮ ಮಂದಿರ ದೇಣಿಗೆ ಹಗರಣ: 45 ದಿನಗಳಲ್ಲಿ 70 ಬಾರಿ ಕಳ್ಳತನ, ಟ್ರಸ್ಟಿ ಅನಿಲ್ ಮಿಶ್ರಾ ವಿರುದ್ಧ ತನಿಖೆ

ಸಿಸಿಟಿವಿ ದೃಶ್ಯಾವಳಿ ಡಿಲೀಟ್? ತನಿಖಾಧಿಕಾರಿಗಳಿಗೇ ಶಾಕ್

ಈ ಪ್ರಕರಣದಲ್ಲಿ ಪೊಲೀಸರಿಗೆ ಮತ್ತೊಂದು ದೊಡ್ಡ ಆಘಾತ ಕಾಯುತ್ತಿತ್ತು. ಕಳ್ಳತನ ನಡೆದ ಕೆಲವು ದಿನಗಳ ಸಿಸಿಟಿವಿ ದೃಶ್ಯಾವಳಿಗಳು ಡಿಲೀಟ್ ಆಗಿರುವುದು ಪತ್ತೆಯಾಗಿದೆ. ಇದರರ್ಥ, ಈ ನೌಕರರಿಗೆ ಮಂದಿರದ ಮುಖ್ಯ ಸಿಸಿಟಿವಿ ಕಂಟ್ರೋಲ್ ರೂಮ್‌ಗೂ ಪ್ರವೇಶ ಇತ್ತು ಅಥವಾ ಕಂಟ್ರೋಲ್ ರೂಮ್‌ನಲ್ಲಿದ್ದ ಯಾರೋ ಇವರಿಗೆ ಸಾಥ್ ನೀಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ದೃಶ್ಯಾವಳಿಗಳಲ್ಲಿ ಸುಭಾಷ್ ಶ್ರೀವಾಸ್ತವ ಮತ್ತು ಹೈಪ್ರೊಫೈಲ್ ಪಾಸ್ ಹಗರಣದ ಪ್ರಮುಖ ಆರೋಪಿ ತಿನ್ನು ಯಾದವ್ ಇಬ್ಬರೂ ಕಳ್ಳತನದ ಜಾಗದಲ್ಲಿ ಹಲವು ಬಾರಿ ಓಡಾಡಿರುವುದು ಕಂಡುಬಂದಿದೆ. ಇವರ ಮೌನ ಸಮ್ಮತಿಯಿಂದಲೇ ಈ ಕಳ್ಳತನ ನಡೆದಿದೆಯೇ ಎಂದು ಪತ್ತೆಹಚ್ಚಲು ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಭದ್ರತೆಗಾಗಿ ಮಂದಿರ ಟ್ರಸ್ಟ್‌ನ ಮುಂದಿನ ಹೆಜ್ಜೆ

ಈ ಭಾರಿ ಹಗರಣದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ದೇಣಿಗೆ ಕೌಂಟರ್‌ಗಳಲ್ಲಿ ಭಾರಿ ಬದಲಾವಣೆ ತರಲು ಮುಂದಾಗಿದೆ: ನಗದು ಹಣದ ಆವೃತ್ತಿಯನ್ನು ಕಡಿಮೆ ಮಾಡಲು ಮಂದಿರದ ಒಳಗೆ ಕೇವಲ ಕ್ಯೂಆರ್ ಕೋಡ್ ಮತ್ತು ಡಿಜಿಟಲ್ ಕಿಯೋಸ್ಕ್‌ಗಳ ಮೂಲಕವೇ ಕಾಣಿಕೆ ಸಲ್ಲಿಸಲು ಭಕ್ತರಿಗೆ ಉತ್ತೇಜನ ನೀಡಲಾಗುತ್ತಿದೆ.

ನೌಕರರ ಬದಲಾವಣೆ: ಇನ್ಮುಂದೆ ಖಾಸಗಿ ಹೊರಗುತ್ತಿಗೆ ನೌಕರರ ಬದಲಾಗಿ, ದೇಶದ ಪ್ರತಿಷ್ಠಿತ ಸರ್ಕಾರಿ ಬ್ಯಾಂಕುಗಳ ಕಾಯಂ ಸಿಬ್ಬಂದಿಗಳನ್ನು ಮಾತ್ರ ಹಣದ ವರ್ಗಾವಣೆ ಮತ್ತು ಎಣಿಕೆಗೆ ಬಳಸಲು ಜುಲೈ 22ರ ಟ್ರಸ್ಟ್ ಸಭೆಯಲ್ಲಿ ಅಧಿಕೃತ ನಿಯಮ ರೂಪಿಸಲಾಗುತ್ತಿದೆ. ಸದ್ಯ ರಾಜಕೀಯವಾಗಿ ಭಾರಿ ಚರ್ಚೆಗೆ ಗ್ರಾಸವಾಗಿರುವ ಈ ಪ್ರಕರಣದ ತನಿಖೆ ಚುರುಕಾಗಿ ನಡೆಯುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *