ರಾಮ ಮಂದಿರ ದೇಣಿಗೆ ಹಗರಣ: ಎಣಿಕೆ ಕಾರ್ಯದಿಂದ 40 ಸಿಬ್ಬಂದಿ ವಜಾ, ಸಿಎಂ ಯೋಗಿಗೆ ಇಂದು ಎಸ್‌ಐಟಿ ವರದಿ ಸಲ್ಲಿಕೆ – Kannada News | Ram Mandir Donation Scam: 40 Staff Fired as SIT Submits Report to CM Yogi

ಅಯೋಧ್ಯೆ, ಜೂನ್ 22: ಅಯೋಧ್ಯೆಯ ಶ್ರೀ ರಾಮ ಮಂದಿರ(Ram Mandir)ದಲ್ಲಿ ಭಕ್ತರು ನೀಡಿದ ಕಾಣಿಕೆ ಹಣ ಹಾಗೂ ಆಭರಣಗಳ ಎಣಿಕೆಯಲ್ಲಿ ಭಾರಿ ಅಕ್ರಮ ಮತ್ತು ಕಳ್ಳತನ ನಡೆದಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ, ದೇಣಿಗೆ ಎಣಿಕೆ ಪ್ರಕ್ರಿಯೆಯಲ್ಲಿದ್ದ ಸುಮಾರು 40 ಸಿಬ್ಬಂದಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕೆಲಸದಿಂದ ತೆಗೆದುಹಾಕಲಾಗಿದೆ.

ಬ್ಯಾಂಕ್ ಟ್ರಸ್ಟ್ ಈಗ ಅವರ ಜಾಗಕ್ಕೆ ಸಂಪೂರ್ಣ ಹೊಸ ಸಿಬ್ಬಂದಿಯನ್ನು ನೇಮಕ ಮಾಡಿದ್ದು, ಹಣ ಮತ್ತು ಆಭರಣಗಳ ಎಣಿಕೆಗೆ ಕಟ್ಟುನಿಟ್ಟಿನ ಮೇಲ್ವಿಚಾರಣೆ ಇರಿಸಲಾಗಿದೆ. ಮತ್ತೊಂದೆಡೆ, ಆರು ದಿನಗಳ ಕಾಲ ಅಯೋಧ್ಯೆಯಲ್ಲೇ ಬೀಡುಬಿಟ್ಟು ತನಿಖೆ ನಡೆಸಿದ ವಿಶೇಷ ತನಿಖಾ ತಂಡವು (SIT) ಇಂದು ತನ್ನ ಪ್ರಾಥಮಿಕ ವರದಿಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸಲ್ಲಿಸಲಿದೆ.

ಮೂವರು ಸದಸ್ಯರ ಎಸ್‌ಐಟಿ ತಂಡವು ದೇಣಿಗೆಯ ಹಳೆಯ ದಾಖಲೆಗಳು, ಸಿಸಿಟಿವಿ ದೃಶ್ಯಾವಳಿಗಳು, ನಗದು ಎಣಿಕೆ ಮಾಡುವ ವಿಧಾನಗಳು ಮತ್ತು ಆಭರಣಗಳ ವಿವರಗಳನ್ನು ಸಂಪೂರ್ಣವಾಗಿ ಪರಿಶೀಲಿಸಿದೆ. ದೇವಸ್ಥಾನದ ಟ್ರಸ್ಟ್‌ಗೆ ಸಂಬಂಧಿಸಿದ ಪ್ರಮುಖರು, ಅರ್ಚಕರು, ಬ್ಯಾಂಕ್ ಅಧಿಕಾರಿಗಳು ಮತ್ತು ನಗದು ನಿರ್ವಹಣಾ ಸಿಬ್ಬಂದಿ ಸೇರಿದಂತೆ 100 ಕ್ಕೂ ಹೆಚ್ಚು ಜನರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

ಮತ್ತಷ್ಟು ಓದಿ: ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣ, ಇಂದು ಧ್ವಜಾರೋಹಣ, ದೇವಸ್ಥಾನದ ವೈಶಿಷ್ಟ್ಯವೇನು?

ತನಿಖೆ ಮುಗಿಯುವವರೆಗೆ ವಿಚಾರಣೆಗೆ ಒಳಗಾದ ಯಾರೂ ಕೂಡ ಅಯೋಧ್ಯೆ ನಗರವನ್ನು ಬಿಟ್ಟು ಹೊರಗೆ ಹೋಗಬಾರದು ಎಂದು ಎಸ್‌ಐಟಿ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ದೀರ್ಘಕಾಲದ ಸಹಚರ ಎನ್ನಲಾದ ರಾಮಶಂಕರ್ ಯಾದವ್ ಅಲಿಯಾಸ್ ಟಿನ್ನು ಎಂಬಾತನನ್ನು ಎಸ್‌ಐಟಿ ಪದೇ ಪದೇ ವಿಚಾರಣೆ ನಡೆಸಿದೆ. ಈತನ ಆಪ್ತರು, ಸಂಬಂಧಿಕರು ಹಾಗೂ ಆಸ್ತಿಪಾಸ್ತಿಗಳ ವಿವರವನ್ನೂ ಕಲೆಹಾಕಲಾಗುತ್ತಿದೆ.

ಈ ತನಿಖೆಯು ಕೇವಲ ಕಾಣಿಕೆ ಹಣದ ದುರುಪಯೋಗಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ಟ್ರಸ್ಟ್ ವಿವಿಧ ಹಂತಗಳಲ್ಲಿ ಮಾಡಿದ ಖರೀದಿಗಳು ಮತ್ತು ದೇವಸ್ಥಾನದ ನಿರ್ಮಾಣ ಸಾಮಗ್ರಿಗಳ ಖರೀದಿಯಲ್ಲಿ ನಡೆದಿರುವ ವ್ಯವಹಾರಗಳ ಮೇಲೂ ತನಿಖೆ ನಡೆಯುತ್ತಿದೆ.

ವಂಚನೆ ಶುರುವಾಗಿದ್ದು ಯಾವಾಗ?
ಮೂಲಗಳ ಪ್ರಕಾರ, 2025 ರ ಆರಂಭದಲ್ಲಿ ಪ್ರಯಾಗ್‌ರಾಜ್‌ನಲ್ಲಿ ನಡೆದ ‘ಮಹಾಕುಂಭ ಮೇಳ’ದ ಸಮಯದಲ್ಲಿ ಈ ದೊಡ್ಡ ವಂಚನೆ ನಡೆದಿದೆ. ಆ ಎರಡು ತಿಂಗಳ ಅವಧಿಯಲ್ಲಿ ಪ್ರತಿದಿನ ಸುಮಾರು 10 ಲಕ್ಷ ಭಕ್ತರು ರಾಮ ಮಂದಿರಕ್ಕೆ ಭೇಟಿ ನೀಡುತ್ತಿದ್ದರು. ಭಕ್ತರ ದಟ್ಟಣೆ ಎಷ್ಟಿತ್ತೆಂದರೆ, ದೇವಸ್ಥಾನದ ದೇಣಿಗೆ ಪೆಟ್ಟಿಗೆಗಳು ಕೇವಲ ಎರಡು ಗಂಟೆಗಳಲ್ಲಿ ನೋಟುಗಳಿಂದ ತುಂಬಿ ಹೋಗುತ್ತಿದ್ದವು. ಇದೇ ಸಮಯವನ್ನು ಬಳಸಿಕೊಂಡು ದೊಡ್ಡ ಮಟ್ಟದಲ್ಲಿ ಹಣ ಲೂಟಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಸಿಎಂ ಯೋಗಿ ಅವರಿಗೆ ವರದಿ ಸಲ್ಲಿಕೆಯಾದ ಬಳಿಕ ತಪ್ಪು ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗುವ ಸಾಧ್ಯತೆಯಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *