ರಾಮ ಮಂದಿರ ದೇಣಿಗೆ ಹಗರಣ; 8 ಆರೋಪಿಗಳಿಗೂ 14 ದಿನಗಳ ನ್ಯಾಯಾಂಗ ಬಂಧನ – Kannada News | Ram Temple Donation Theft Case All 8 Accused Sent To 14 Day Judicial Custody

ಅಯೋಧ್ಯೆ, ಜೂನ್ 29: ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರದ ದೇಣಿಗೆ ದುರುಪಯೋಗ ಪ್ರಕರಣದ (Ram Temple Donation Row) ಎಲ್ಲಾ 8 ಆರೋಪಿಗಳನ್ನು ಸ್ಥಳೀಯ ನ್ಯಾಯಾಲಯವು ಇಂದಿನಿಂದ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಹೀಗಾಗಿ, ಈ ಆರೋಪಿಗಳು ಜುಲೈ 13ರವರೆಗೆ ನ್ಯಾಯಾಂಗ ಬಂಧನದಲ್ಲಿ ಇರಲಿದ್ದಾರೆ. 3 ದಿನಗಳ ಪೊಲೀಸ್ ಕಸ್ಟಡಿ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಇಂದು ಎಂಟೂ ಜನ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಈ ವೇಳೆ ಅಯೋಧ್ಯೆ ನ್ಯಾಯಾಲಯವು ಅವರಿಗೆ 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿತು.

ಅಯೋಧ್ಯೆಯ ರಾಮ ಮಂದಿರಕ್ಕೆ ಬಂದಿದ್ದ ದೇಣಿಗೆ ಹಣ ಮತ್ತು ಚಿನ್ನ, ಬೆಳ್ಳಿ ವಸ್ತುಗಳ ದುರುಪಯೋಗವು ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಗರಣದ ಬೆನ್ನಲ್ಲೇ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಅದರ ಸದಸ್ಯ ಅನಿಲ್ ಮಿಶ್ರಾ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಇದಕ್ಕೂ ಮುನ್ನ ಶನಿವಾರ, ಈ ಆರೋಪಗಳ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಲಾಗುವುದು ಎಂದು ಟ್ರಸ್ಟ್ ಭರವಸೆ ನೀಡಿತ್ತು.

ಚಂಪತ್ ರಾಯ್ ಅವರ ಮಾಜಿ ಚಾಲಕ ಸೇರಿದಂತೆ ದೇಣಿಗೆ ದುರುಪಯೋಗಪಡಿಸಿಕೊಂಡ ಆರೋಪ ಎದುರಿಸುತ್ತಿರುವ 8 ಜನರನ್ನು ಕಳೆದ ಗುರುವಾರ ರಾತ್ರಿ ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ: ತಿಂಗಳಿಗೆ 15 ಸಾವಿರ ರೂ. ಸಂಬಳ, 22ನೇ ವಯಸ್ಸಿಗೆ ಕೋಟ್ಯಾಧಿಪತಿ: ರಾಮಮಂದಿರ ಕಾಣಿಕೆ ಲೂಟಿ ಮಾಡಿದ ಅನುಕಲ್ಪ್ ಮಿಶ್ರಾ ಅಕ್ರಮ ಆಸ್ತಿ ಕಂಡು ಪೊಲೀಸರೇ ಶಾಕ್!

ಆರೋಪಿಗಳ ಪರ ವಾದಿಸದಂತೆ ವಕೀಲರ ಸಂಘದ ನಿರ್ಣಯ;

ಅಯೋಧ್ಯೆಯ ಫೈಜಾಬಾದ್ ಬಾರ್ ಅಸೋಸಿಯೇಷನ್ ಇಂದು ಒಂದು ಮಹತ್ವದ ನಿರ್ಣಯವನ್ನು ಅಂಗೀಕರಿಸಿದ್ದು, ತನ್ನ ಯಾವುದೇ ಸದಸ್ಯರು ರಾಮ ಮಂದಿರ ದೇಣಿಗೆ ಕಳ್ಳತನದ ಆರೋಪಿಗಳ ಪರವಾಗಿ ವಕಾಲತ್ ವಹಿಸುವುದಿಲ್ಲ ಎಂದು ಘೋಷಿಸಿದೆ. ಈ ಆದೇಶವನ್ನು ಉಲ್ಲಂಘಿಸುವ ಯಾವುದೇ ವಕೀಲರಿಗೆ 5 ಲಕ್ಷ ರೂ. ದಂಡ ವಿಧಿಸಲಾಗುವುದು ಎಂದು ಅಸೋಸಿಯೇಷನ್ ಎಚ್ಚರಿಸಿದೆ. ಇದರಿಂದಾಗಿ ಆರೋಪಿಗಳ ಕಾನೂನು ಹೋರಾಟಕ್ಕೆ ವಕೀಲರು ಸಿಗದಂತಾಗಿದೆ.

ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಣೆ:

ರಾಮ ಮಂದಿರದ ದೇಣಿಗೆ ದುರುಪಯೋಗದ ಆರೋಪಗಳ ಕುರಿತು ನಿಷ್ಪಕ್ಷಪಾತ ಮತ್ತು ಕಾಲಮಿತಿಯ ತನಿಖೆಯನ್ನು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಈ ವಿಷಯವನ್ನು ಬೇಸಿಗೆ ರಜೆಯ ನಂತರ ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ತಿಳಿಸಿದೆ.

ಇದನ್ನೂ ಓದಿ: ರಾಮನ ಹಣ ಕದ್ದವರಿಗೆ ಮತ್ತೊಂದು ಶಾಕ್; ಆರೋಪಿಗಳ ಪರ ವಾದಿಸುವ ವಕೀಲರಿಗೆ 5 ಲಕ್ಷ ರೂ. ದಂಡದ ಎಚ್ಚರಿಕೆ!

ರಾಮ ಮಂದಿರ ಟ್ರಸ್ಟ್‌ನ ವಿನಂತಿಯ ಮೇರೆಗೆ ಉತ್ತರ ಪ್ರದೇಶ ಸರ್ಕಾರವು ಜೂನ್ 13ರಂದು ಈ ಹಗರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (SIT) ರಚಿಸಿತ್ತು. ಈ ಎಸ್‌ಐಟಿಯಲ್ಲಿ ಲಕ್ನೋ ವಿಭಾಗೀಯ ಕಮಿಷನರ್ ವಿಜಯ್ ವಿಶ್ವಾಸ್ ಪಂತ್, ಐಜಿಪಿ ಕಿರಣ್ ಎಸ್ ಮತ್ತು ಹಣಕಾಸು ಇಲಾಖೆಯ ವಿಶೇಷ ಕಾರ್ಯದರ್ಶಿ ನೀಲ್ ರತನ್ ಇದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *