ರಾಯಚೂರಿನಲ್ಲಿ ಅಮಾನವೀಯ ಕೃತ್ಯ: ಜೀವಂತ ವೃದ್ಧನಿಗೆ ನಕಲಿ ಡೆತ್ ಸರ್ಟಿಫಿಕೇಟ್ ನೀಡಿ ಕೋಟಿ ಆಸ್ತಿ ಲೂಟಿ – Kannada News | Manvi Senior Citizen Fights Fraud: Alive, But Declared Dead to Seize Property

ರಾಯಚೂರು, ಆ.17: ನಡೆಯಲು ಕೂಡ ಆಗದ ಸ್ಥಿತಿಯಲ್ಲಿರುವ 70 ವರ್ಷದ ಜೀವಿ ಬದುಕಿದ್ದರೂ “ಸತ್ತಿದ್ದಾನೆ” ಎಂದು ನಕಲಿ ಮರಣ ಪ್ರಮಾಣ ಪತ್ರ (Death Certificate) ಸೃಷ್ಟಿಸಿ, ಕೋಟಿ ಕೋಟಿ ಮೌಲ್ಯದ ಆಸ್ತಿ ಕಬಳಿಸಿರುವ ಘೋರ ಅನ್ಯಾಯದ ಪ್ರಕರಣ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ತಮ್ಮದೇ ದುಡಿಮೆಯ ಆಸ್ತಿಯನ್ನು ಮರಳಿ ಪಡೆಯಲು 70 ವರ್ಷದ ಮೊಹಮ್ಮದ್ ಶರ್ಫುದ್ದಿನ್ ಎಂಬ ವೃದ್ಧ ಕಚೇರಿಗಳಿಂದ ಕಚೇರಿಗಳಿಗೆ ಅಲೆಯುತ್ತಾ ಕಣ್ಣೀರು ಹಾಕುತ್ತಿದ್ದಾರೆ.

ಮೊಹಮ್ಮದ್ ಶರ್ಫುದ್ದಿನ್ ಅವರು ಹಿಂದೆ ಮುಂಬೈ ಹಾಗೂ ಬಹ್ರೇನ್‌ನಲ್ಲಿ ಅಧಿಕಾರಿಯಾಗಿ ಸುದೀರ್ಘ ಕಾಲ ಕೆಲಸ ಮಾಡಿದ್ದರು. ಅಲ್ಲಿ ದುಡಿದ ಹಣವನ್ನು ಪತ್ನಿ ರಸೂಲ್ ಬೀ ಅವರಿಗೆ ಕಳುಹಿಸಿ, ಮಾನ್ವಿ ಪಟ್ಟಣದಲ್ಲಿ 6 ಮನೆ ಹಾಗೂ 2 ಅಂಗಡಿಗಳನ್ನು ಖರೀದಿಸಿದ್ದರು. ಪತ್ನಿ ರಸೂಲ್ ಬೀ ನಿಧನರಾದ ಬಳಿಕ, ‘ಕರೀಷ್ಮಾ’ ಎಂಬುವವರು ಬದುಕಿರುವ ಶರ್ಫುದ್ದಿನ್ ಹೆಸರಿನಲ್ಲಿ ಪುರಸಭೆಯಿಂದ ನಕಲಿ ಮರಣ ಪ್ರಮಾಣ ಪತ್ರ ಪಡೆದು ಆಸ್ತಿಯನ್ನು ಅಕ್ರಮವಾಗಿ ಕಬಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಅಸಲಿ ಹೆಸರಿನಲ್ಲಿ ‘ಮೊಹಮ್ಮದ್ ಶರ್ಫುದ್ದಿನ್, ತಂದೆ ಖಾಜಾ ಪಿರ್ ಸಾಬ್’ ಎಂದಿದೆ. ಆದರೆ ಮರಣ ಪ್ರಮಾಣ ಪತ್ರದಲ್ಲಿ ‘ಶರ್ಫುದ್ದಿನ್, ತಂದೆ ಪಿರ್ ಸಾಬ್’ ಎಂದು ಸೃಷ್ಟಿಸಲಾಗಿತ್ತು. ತನಿಖೆ ನಡೆಸಿದ ಮಾನ್ವಿ ತಹಶೀಲ್ದಾರ್, “ಡೆತ್ ಸರ್ಟಿಫಿಕೇಟ್‌ನಲ್ಲಿರುವ ಹೆಸರಿನ ವ್ಯಕ್ತಿ ಆ ಜಾಗದಲ್ಲೇ ವಾಸವಾಗಿಲ್ಲ” ಎಂದು ಪೊಲೀಸರಿಗೆ ವರದಿ ನೀಡಿದ್ದಾರೆ.

ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ ಪ್ರಕರಣ: ಸುಪ್ರೀಂ ಕೋರ್ಟ್​​ನಿಂದ ಮಹತ್ವದ ತೀರ್ಪು, ಆರೋಪಿ ಕಾಕಿ ಶ್ರೀನಿವಾಸ್ ರಾವ್ ಗೆ ಜಾಮೀನು

2025ರಲ್ಲಿ ಕಂದಾಯ ಇಲಾಖೆ ನೀಡಿರುವ ಸ್ಪಷ್ಟ ವರದಿಯಲ್ಲಿ ಶರ್ಫುದ್ದಿನ್ ಅವರು ಜೀವಂತವಾಗಿದ್ದಾರೆ ಎಂಬುದು ದೃಢಪಟ್ಟಿದ್ದರೂ, ಅವರಿಗೆ ನ್ಯಾಯ ಸಿಕ್ಕಿಲ್ಲ. “ಮಾನ್ವಿ ಪುರಸಭೆಯ ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿ ಶಾಮೀಲಾಗಿ ಬದುಕಿರುವ ವ್ಯಕ್ತಿಗೆ ಮರಣ ಪ್ರಮಾಣ ಪತ್ರ ನೀಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಯಾಗಿ ವೃದ್ಧ ಶರ್ಫುದ್ದಿನ್ ಅವರಿಗೆ ತಕ್ಷಣವೇ ನ್ಯಾಯ ಸಿಗಬೇಕು.” ಎಂದು ಸ್ಥಳೀಯ ಹೋರಾಟಗಾರ ಶಿವರಾಜ್ ಹೇಳಿದ್ದಾರೆ. “ದಾಖಲೆಗಳಲ್ಲಿ ಪರಸ್ಪರ ವ್ಯತ್ಯಾಸಗಳಿದ್ದು, ಈ ಹಿಂದೆ ನ್ಯಾಯಾಲಯ ಹಾಗೂ ಸರ್ಕಾರಕ್ಕೆ ಸಲ್ಲಿಸಲಾಗಿದ್ದ ಅರ್ಜಿಗಳು ವಜಾಗೊಂಡಿವೆ. ತಹಶೀಲ್ದಾರ್ ವರದಿ ಬಗ್ಗೆ ಮಾಹಿತಿ ಇಲ್ಲ. ಅಗತ್ಯವಿದ್ದರೆ ನ್ಯಾಯಾಲಯದ ಮೂಲಕ ಪ್ರಶ್ನಿಸಬಹುದು.” ಎಂದು ಮಾನ್ವಿ ಪುರಸಭೆ ಆಯುಕ್ತ ಪರಶುರಾಮ್ ದೇವಮಾನೆ ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *