ರಾಯಚೂರು, ಜೂನ್ 16: ರಾಯಚೂರು ತಾಲ್ಲೂಕಿನ ವಿಜಯನಗರ ಕ್ಯಾಂಪ್‌ನಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು, ಮಕ್ಕಳು ಜೀವಭಯದಲ್ಲೇ ಪಾಠ ಕಲಿಯುವಂತಾಗಿದೆ. 2002ರಲ್ಲಿ ನಿರ್ಮಾಣಗೊಂಡ ಈ ಕಟ್ಟಡ ಕೇವಲ 24 ವರ್ಷಗಳಲ್ಲೇ ಕುಸಿಯುವ ಹಂತಕ್ಕೆ ಬಂದಿದೆ. ಶಾಲೆಯ ಮೇಲ್ಛಾವಣಿ ಪದೇ ಪದೇ ಕುಸಿಯುತ್ತಿದ್ದು, ಸಣ್ಣ ಮಳೆ ಬಂದರೂ ನೀರು ಸೋರುತ್ತದೆ. ಇದರಿಂದ ಮಕ್ಕಳು ಹಾಗೂ ಶಿಕ್ಷಕರು ಆತಂಕದಲ್ಲಿ ದಿನ ಕಳೆಯುವಂತಾಗಿದೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಿಕ್ಷಕರು ಅವರನ್ನು ಶಾಲಾ ಕೊಠಡಿಗಳಿಂದ ಹೊರಗೆ, ಮರದ ಕೆಳಗೆ ಕುಳ್ಳಿರಿಸಿ ಪಾಠ ಮಾಡುತ್ತಿದ್ದಾರೆ. ಮೂಲಭೂತ ಸೌಕರ್ಯಗಳ ಕೊರತೆಯೂ ಇಲ್ಲಿ ಎದ್ದು ಕಾಣುತ್ತದೆ. ವಿದ್ಯುತ್ ಸಮಸ್ಯೆ, ಹಾಳಾದ ಫ್ಯಾನ್‌ಗಳಿಂದ ಬೇಸಿಗೆಯಲ್ಲಿ ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ.
ಈ ಬಗ್ಗೆ ಮೇಲಾಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಶಿಕ್ಷಕರು ದೂರಿದ್ದಾರೆ. ಜಿಲ್ಲಾಧಿಕಾರಿಗಳು, ಸಚಿವರು, ಜನಪ್ರತಿನಿಧಿಗಳು ಈ ಮಾರ್ಗದಲ್ಲಿ ಓಡಾಡಿದರೂ ಶಾಲೆಯ ದುಸ್ಥಿತಿ ಅವರ ಕಣ್ಣಿಗೆ ಬೀಳದಿರುವುದು ಆಶ್ಚರ್ಯಕರವಾಗಿದೆ. ಕಳಪೆ ಕಾಮಗಾರಿಯಿಂದಾಗಿ ಕಟ್ಟಡ ಕುಸಿದಿರುವ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಶೀಘ್ರ ಹೊಸ ಕಟ್ಟಡ ನಿರ್ಮಿಸಬೇಕು ಎಂದು ಸ್ಥಳೀಯರು ಮತ್ತು ಪೋಷಕರು ಆಗ್ರಹಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
