ಬೆಂಗಳೂರು, (ಜೂನ್ 05): ಡಿಕೆ ಶಿವಕುಮಾರ್ (DK Shivakumar) ಸರ್ಕಾರದಲ್ಲಿ ಖಾತೆ (Ministers portfolio )ಕ್ಯಾತೆ ಶುರುವಾಗಿದೆ. ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಕೈತಪ್ಪಿದ್ದಕ್ಕೆ ಹಿರಿಯ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಅವರ ಹಠಾತ್ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಈ ಹಿಂದೆ ನಿಭಾಯಿಸಿದ್ದ ಆಹಾರ ಇಲಾಖೆ ಜವಾಬ್ದಾರಿ ನೀಡಿದ್ದಕ್ಕೆ ಮತ್ತೊಬ್ಬ ಹಿರಿಯ ಸಚಿವ ಕೆ.ಎಚ್. ಮುನಿಯಪ್ಪ (KH Muniyappa) ಅವರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಖುದ್ದು ರಾಹುಲ್ ಗಾಂಧಿ ಬಳಿಯೇ ತಮ್ಮ ಅಸಮಾಧಾನ ತೋಡಿಕೊಂಡಿದ್ದು, ಈ ವೇಳೆ ರಾಹುಲ್ ಮಹತ್ವದ ಭರವಸೆ ನೀಡಿದ್ದಾರೆ. ಇದರಿಂದ ಸಮಾಧಾನಗೊಂಡಿರುವ ಮುನಿಯಪ್ಪ, ಐ ಆ್ಯಮ್ ಹ್ಯಾಪಿ ಎಂದಿದ್ದಾರೆ.
ಮುಖ್ಯಾಂಶಗಳು
- ಆಹಾರ ಖಾತೆ ನೀಡಿದ್ದಕ್ಕೆ ಮುನಿಯಪ್ಪ ಅಸಮಾಧಾನ ವಿಚಾರ
- ರಾಹುಲ್ ಗಾಂಧಿ ಗೊಂದಲ ಸರಿಪಡಿಸುವುದಾಗಿ ಹೇಳಿದ್ದಾರೆ
- ಐ ಆ್ಯಮ್ ಹ್ಯಾಪಿ ಎಂದ ಸಚಿವ ಕೆ.ಹೆಚ್.ಮುನಿಯಪ್ಪ
- ರಾಹುಲ್, ವೇಣುಗೋಪಾಲ್, ಸುರ್ಜೇವಾಲ ಭೇಟಿಯಾಗಿದ್ದೇವೆ
- ಕಾಂಗ್ರೆಸ್ ನಾಯಕರು ಗೊಂದಲ ಬಗೆಹರಿಸುವುದಾಗಿ ಹೇಳಿದ್ದಾರೆ
- ಬೆಂಗಳೂರಿನಲ್ಲಿ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿಕೆ
ಮಲ್ಲಿಕಾರ್ಜು ಖರ್ಗೆ ಅವರ ನಾಮಪತ್ರ ಸಲ್ಲಿಕೆಗೆಂದು ಬೆಂಗಳೂರಿಗೆ ಬಂದಿದ್ದ ರಾಹುಲ್ ಗಾಂಧಿ ಜೊತೆ ಸಿಎಂ ಡಿಕೆ ಶಿವಕುಮಾರ್ ಸಚಿವರ ಖಾತೆ ಕ್ಯಾತೆ ವಿಚಾರವನ್ನು ಪ್ರಸ್ತಾಪಿಸಿದರು. ರಾಮಲಿಂಗಾರೆಡ್ಡಿ ರಾಜೀನಾಮೆ ನೀಡಿರುವ ಬಗ್ಗೆ ರಾಹುಲ್ ಗಮನಕ್ಕೆ ತಂದಿದ್ದಾರೆ. ಅಲ್ಲದೇ ಇದೇ ವೇಳೆ ಕೆ ಹೆಚ್ ಮುನಿಯಪ್ಪ ಅವರ ಅಸಮಾಧಾನವೂ ಸಹ ಚರ್ಚೆಯಾಗಿದೆ. ಬಳಿಕ ಮುನಿಯಪ್ಪ ಸಹ ಖುದ್ದು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಅಳಲು ತೋಡಿಸಿಕೊಂಡಿದ್ದು, ಈ ವೇಳೆ ಗೊಂದಲ ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಸಚಿವ ಮುನಿಯಪ್ಪ ಸಹ ಸಮಾಧಾನಗೊಂಡಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಆರದ ಖಾತೆ ಕಿಚ್ಚು: ರಾಮಲಿಂಗಾ ರೆಡ್ಡಿ ರಾಜೀನಾಮೆ ಬೆನ್ನಲ್ಲೇ ಸಚಿವ ಕೆಎಚ್ ಮುನಿಯಪ್ಪ ಬಹಿರಂಗ ಅಸಮಾಧಾನ
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಮುನಿತಪ್ಪ, ರಾಹುಲ್ ಗಾಂಧಿ, ಕೆಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿಯಾಗಿದ್ದು, ರಾಹುಲ್ ಗಾಂಧಿ ಗೊಂದಲ ಸರಿಪಡಿಸುವುದಾಗಿ ಹೇಳಿದ್ದಾರೆ. ಹೀಗಾಗಿ ಐ ಆ್ಯಮ್ ಹ್ಯಾಪಿ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ರಾಜೀನಾಮೆಯಿಂದ ಹಿಂದೆ ಸರಿದಿದ್ದಾರೆ.
ಆಹಾರ ಖಾತೆ ನೀಡಿದ್ದಕ್ಕೆ ಬೇಸರಗೊಂಡಿದ್ದ ಮುನಿಯಪ್ಪ
ಕಳೆದ ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲಿ ಆಹಾರ ಇಲಾಖೆ ಖಾತೆಯನ್ನು ಮುನಿಯಪ್ಪನವರಿಗೆ ನೀಡಲಾಗಿತ್ತು. ಇದೀಗ ಡಿಕೆ ಶಿವಕುಮಾರ್ ಸಂಪುಟದಲ್ಲೂ ಸಹ ಅದೇ ಖಾತೆ ನೀಡಲಾಗಿದೆ. ಇದರಿಂದ ಅಸಮಾಧಾನಗೊಂಡಿದ್ದ ಮುನಿಯಪ್ಪ, ಬೆಳಗ್ಗೆ ಮಾಧ್ಯಮಗಳ ಮುಂದೆಯೇ ಬಹಿರಂಗವಾಗಿ ಬೇಸರ ಹೊರಹಾಕಿದ್ದರು. ಆಹಾರ ಇಲಾಖೆ ಬೇಡ ಸಮಾಜ ಕಲ್ಯಾಣ ಇಲಾಖೆ ಬೇಕೆಂದು ಪಟ್ಟು ಹಿಡಿದಿದ್ದಾರೆ.
ಇನ್ನು ಈ ಬಗ್ಗೆ ಇಂದು (ಜೂನ್ 05) ಬೆಳಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಮುನಿಯಪ್ಪ, . “ನಾನು ರಾಜಕೀಯದಲ್ಲಿ 8 ಬಾರಿ ಗೆದ್ದಿರುವ ಅತ್ಯಂತ ಹಿರಿಯ ನಾಯಕ. ಸಂಪುಟದಲ್ಲಿ ಪ್ರೊಟೊಕಾಲ್ ಪ್ರಕಾರ ಸೀನಿಯಾರಿಟಿ ನೋಡಿ ಖಾತೆ ಹಂಚಬೇಕಿತ್ತು. ಸಮಾಜ ಕಲ್ಯಾಣ ಅಥವಾ ಕೃಷಿ ಇಲಾಖೆಯಂತಹ ಜನಸೇವೆಗೆ ನೇರ ಅವಕಾಶವಿರುವ ದೊಡ್ಡ ಖಾತೆ ನೀಡುವಂತೆ ನಾನು ಮೊದಲೇ ಕೇಳಿದ್ದೆ. ಆದರೆ ಹಂಚಿಕೆಯಲ್ಲಿ ಯಾವುದೇ ಸಮಾತೋಲನ ಕಾಯ್ದುಕೊಂಡಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಆದ್ರೆ, ಇದೀಗ ರಾಹುಲ್ ಗಾಂಧಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ