172 ರನ್ಗಳ ಕಠಿಣ ಗುರಿ… ಟೀಮ್ ಇಂಡಿಯಾ ಮೊದಲ 10 ಓವರ್ಗಳಲ್ಲಿ ಕಲೆಹಾಕಿದ್ದು ಕೇವಲ 64 ರನ್ಗಳು. ಪರಿಣಾಮ ಭಾರತ ತಂಡಕ್ಕೆ ಗೆಲ್ಲಲು 60 ಎಸೆತಗಳಲ್ಲಿ 108 ರನ್ಗಳ ಅವಶ್ಯಕತೆಯಿತ್ತು. ಅಷ್ಟರಲ್ಲಾಗಲೇ ಟೀಮ್ ಇಂಡಿಯಾದ ಟಾಪ್ ಆರ್ಡರ್ ಬ್ಯಾಟರ್ಗಳಾದ ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ ಹಾಗೂ ಹರ್ಮನ್ಪ್ರೀತ್ ಕೌರ್ ಪೆವಿಲಿಯನ್ ಸೇರಿದ್ದರು. ಹೀಗಾಗಿಯೇ ಇಂಗ್ಲೆಂಡ್ ಈ ಅಭ್ಯಾಸ ಪಂದ್ಯದಲ್ಲಿ ಸುಲಭವಾಗಿ ಗೆಲ್ಲಲಿದೆ ಎಂದು ಎಲ್ಲರೂ ಷರಾ ಬರೆದಿದ್ದರು.
ಆದರೆ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ ಅಕ್ಷರಶಃ ಅಬ್ಬರಿಸಿದರು. ಇಂಗ್ಲೆಂಡ್ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದರು. ಪರಿಣಾಮ ಮೈದಾನದ ಮೂಲೆ ಮೂಲೆಗೆ ಸಿಕ್ಸ್-ಫೋರ್ಗಳ ಸುರಿಮಳೆಯಾಯಿತು.
ಈ ಸಿಡಿಲಬ್ಬರದೊಂದಿಗೆ ಟೀಮ್ ಇಂಡಿಯಾ 19 ಓವರ್ ಮುಕ್ತಾಯದ ವೇಳೆಗೆ 8 ವಿಕೆಟ್ ಕಳೆದುಕೊಂಡು 155 ರನ್ ಕಲೆಹಾಕಿತು. ಅದರಂತೆ ಅಂತಿಮ ಓವರ್ನಲ್ಲಿ 17 ರನ್ ಬೇಕಿದ್ದವು. ಲಿನ್ಸೆ ಸ್ಮಿತ್ ಎಸೆದ 20ನೇ ಓವರ್ನ ಮೊದಲ ಎಸೆತ ಎದುರಿಸಿದ ಶ್ರೀ ಚರಣಿ ಸಿಂಗಲ್ ತೆಗೆದರು.
ಸ್ಟ್ರೈಕ್ಗೆ ಬಂದ ರಿಚಾ ಘೋಷ್ 2ನೇ ಎಸೆತದಲ್ಲಿ ಫೋರ್ ಬಾರಿಸಿದರು. ಮೂರನೇ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದರು. ಪರಿಣಾಮ ಕೊನೆಯ 3 ಎಸೆತಗಳಲ್ಲಿ ಕೇವಲ 6 ರನ್ ಮಾತ್ರ ಬೇಕಿತ್ತು. ಈ ಹಂತದಲ್ಲಿ ಮತ್ತೊಂದು ಭರ್ಜರಿ ಸಿಕ್ಸರ್ ಬಾರಿಸಲು ಮುನ್ನುಗ್ಗಿ ಬಂದ ರಿಚಾ ಘೋಷ್ ಸ್ಟಂಪ್ ಔಟ್ ಆದರು.
ಅಲ್ಲಿಗೆ 36 ಎಸೆತಗಳಲ್ಲಿ 2 ಭರ್ಜರಿ ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ 68 ರನ್ ಬಾರಿಸಿದ ರಿಚಾ ಘೋಷ್ ಇನಿಂಗ್ಸ್ ಅಂತ್ಯವಾಯಿತು. ಇದಾಗ್ಯೂ ಕೊನೆಯ 2 ಎಸೆತಗಳಲ್ಲಿ ಟೀಮ್ ಇಂಡಿಯಾ 6 ರನ್ಗಳಿಸಿದ್ದರೆ ಈ ಪಂದ್ಯದಲ್ಲಿ ಜಯ ಸಾಧಿಸಬಹುದಿತ್ತು. ಆದರೆ ಲಿನ್ಸೆ ಸ್ಮಿತ್ ಎಸೆದ ಕೊನೆಯ ಓವರ್ನ 5ನೇ ಎಸೆತದಲ್ಲಿ ರೇಣುಕಾ ಸಿಂಗ್ ಕ್ಯಾಚ್ ನೀಡಿದರು.
ಈ ಮೂಲಕ ಟೀಮ್ ಇಂಡಿಯಾ 19.5 ಓವರ್ಗಳಲ್ಲಿ 166 ರನ್ಗಳಿಸಿ ಆಲೌಟ್ ಆಗಿ 5 ರನ್ಗಳಿಂದ ವಿರೋಚಿತವಾಗಿ ಸೋಲೊಪ್ಪಿಕೊಂಡಿದೆ. ಇಲ್ಲಿ ಇದು ವಿರೋಚಿತ ಸೋಲು ಎನ್ನಲು ಮುಖ್ಯ ಕಾರಣ ರಿಚಾ ಘೋಷ್ ಅವರ ಏಕಾಂಗಿ ಹೋರಾಟ. ಅದರಲ್ಲೂ ಮೊದಲ 10 ಓವರ್ಗಳಲ್ಲಿ ಕೇವಲ 64 ರನ್ಗಳಿಸಿ, ಆ ಬಳಿಕ 59 ಎಸೆತಗಳಲ್ಲಿ 102 ರನ್ ಚಚ್ಚಿರುವುದು ಕೆಳ ಕ್ರಮಾಂಕದ ಬ್ಯಾಟರ್ಗಳ ದಿಟ್ಟ ಹೋರಾಟ.
ಅಭ್ಯಾಸ ಪಂದ್ಯದಲ್ಲೇ ಇಂತಹದೊಂದು ಹೋರಾಟ ಮೂಡಿಬಂದಿರುವುದು ಟೀಮ್ ಇಂಡಿಯಾಗೆ ಶುಭ ಸೂಚನೆ. ಹೀಗಾಗಿ ಈ ಬಾರಿ ಮಹಿಳಾ ಟಿ20 ವಿಶ್ವಕಪ್ನಲ್ಲಿ ಭಾರತ ಮಹಿಳಾ ತಂಡದಿಂದ ಭರ್ಜರಿ ಪ್ರದರ್ಶನವನ್ನು ನಿರೀಕ್ಷಿಸಬಹುದು.
