ನಟಿ ವಮಿಕಾ ಗಬ್ಬಿ (Wamiqa Gabbi) ಅವರಿಗೆ 2026ರ ವರ್ಷ ಸಾಲು ಸಾಲು ಯಶಸ್ಸು ತಂದುಕೊಡುತ್ತಿದೆ. ವರ್ಷದ ಆರಂಭದಲ್ಲೇ ಅಕ್ಷಯ್ ಕುಮಾರ್ ಅಭಿನಯದ ‘ಭೂತ್ ಬಾಂಗ್ಲಾ’ ಚಿತ್ರದ ಮೂಲಕ ಭರ್ಜರಿ ಯಶಸ್ಸು ಕಂಡಿದ್ದ ಅವರು, ನಂತರ ‘ಪತಿ ಪತ್ನಿ ಔರ್ ವೋ 2’ ಚಿತ್ರದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು. ಪ್ರಸ್ತುತ ತಮಿಳಿನ ‘ಡಿಸಿ’ ಚಿತ್ರದಲ್ಲಿ ಚಂದ್ರ ಎಂಬ ಪಾತ್ರದಲ್ಲಿ ನಟಿಸಿ ವಿಮರ್ಶಕರು ಹಾಗೂ ಪ್ರೇಕ್ಷಕರಿಂದ ಅಪಾರ ಪ್ರಶಂಸೆ ಪಡೆಯುತ್ತಿದ್ದಾರೆ. ಲೋಕೇಶ್ ಕನಕರಾಜ್ ಅವರು ಪ್ರಮುಖ ಪಾತ್ರದಲ್ಲಿದ್ದರೂ, ವಮಿಕಾ ಅವರು ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.
ಇದೀಗ ವಮಿಕಾ ಅವರ ವೃತ್ತಿಜೀವನಕ್ಕೆ ಮತ್ತೊಂದು ಬಹುದೊಡ್ಡ ಅವಕಾಶ ಸಿಕ್ಕಿದೆ. ಪ್ರಶಾಂತ್ ವರ್ಮಾ ನಿರ್ದೇಶನದ, ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಪಾನ್-ಇಂಡಿಯಾ ಪೌರಾಣಿಕ ಚಿತ್ರ ‘ಜೈ ಹನುಮಾನ್’ನಲ್ಲಿ ವಮಿಕಾ ಪ್ರಮುಖ ಪಾತ್ರವೊಂದಕ್ಕೆ ಆಯ್ಕೆಯಾಗಿದ್ದಾರೆ ಎಂದು ವರದಿಯಾಗಿದೆ.
ಪ್ರಶಾಂತ್ ವರ್ಮಾ ಅವರ ‘ಸಿನಿಮ್ಯಾಟಿಕ್ ಯೂನಿವರ್ಸ್’ ಭಾಗವಾಗಿರುವ ಈ ಚಿತ್ರದ ಚಿತ್ರೀಕರಣ ಮಾರ್ಚ್ನಲ್ಲೇ ಪ್ರಾರಂಭವಾಗಿದ್ದು, ವಮಿಕಾ ಗಬ್ಬಿ ಅವರ ಪಾತ್ರದ ವಿವರಗಳನ್ನು ಸದ್ಯಕ್ಕೆ ಗೌಪ್ಯವಾಗಿಡಲಾಗಿದೆ. ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರು ಆಂಜನೇಯನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 2024ರ ಬ್ಲಾಕ್ಬಸ್ಟರ್ ‘ಹನು-ಮಾನ್’ ಚಿತ್ರದ ಮುಂದುವರಿದ ಭಾಗ ಇದಾಗಿದೆ.
‘ಮೈತ್ರಿ ಮೂವೀ ಮೇಕರ್ಸ್’ ನಿರ್ಮಾಣದ ಈ ಪಾನ್-ಇಂಡಿಯಾ ಪೌರಾಣಿಕ ಸಿನಿಮಾಕ್ಕೆ ಮಾರ್ಚ್ನಿಂದಲೇ ಚಿತ್ರೀಕರಣ ಆರಂಭಗೊಂಡಿದ್ದು, 2027ರ ದ್ವಿತೀಯಾರ್ಧದಲ್ಲಿ ಜಾಗತಿಕ ಮಟ್ಟದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ವಮಿಕಾ ಗಬ್ಬಿ ಅವರ ಆಯ್ಕೆ ಬಗ್ಗೆ ಚಿತ್ರತಂಡ ಇನ್ನೂ ಅಧಿಕೃತವಾಗಿ ಮಾಹಿತಿ ಬಿಟ್ಟುಕೊಟ್ಟಿಲ್ಲ.
ಇದನ್ನೂ ಓದಿ: ಅಂಜನಾದ್ರಿ ಬೆಟ್ಟದಲ್ಲಿ ರಿಷಬ್ ಶೆಟ್ಟಿ ‘ಜೈ ಹನುಮಾನ್’ ಮುಹೂರ್ತ: ಚಿತ್ರಗಳು ಇಲ್ಲಿವೆ ನೋಡಿ
ಇದಲ್ಲದೆ, ವಮಿಕಾ ಅವರ ಕೈಯಲ್ಲಿ ರಾಜ್ಕುಮಾರ್ ರಾವ್ ಜೊತೆಗಿನ ‘ಪ್ರಹಾರ್’, ಅಡಿವಿ ಶೇಷ್ ಜೊತೆಗಿನ ‘ಗೂಢಚಾರಿ 2’, ‘ದಿಲ್ ಕಾ ದರ್ವಾಜಾ ಖೋಲ್ ನಾ ಡಾರ್ಲಿಂಗ್’, ‘ಜೀನಿ’ ಮತ್ತು ‘ಕುಕು ಕಿ ಕುಂಡಲಿ’ ಸೇರಿದಂತೆ ಸಾಲು ಸಾಲು ದೊಡ್ಡ ಪ್ರಾಜೆಕ್ಟ್ಗಳಿವೆ. ಭಾರಿ ನಿರೀಕ್ಷೆ ಮೂಡಿಸಿರುವ ‘ಜೈ ಹನುಮಾನ್’ ಚಿತ್ರಕ್ಕೆ ಅವರು ಸೇರ್ಪಡೆಯಾದರೆ ಅವರ ಸಿನಿಪಯಣಕ್ಕೆ ದೊಡ್ಡ ಮೈಲೇಜ್ ಸಿಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.