ರಿಷಭ್ ಪಂತ್​ಗೆ ಗೇಟ್ ಪಾಸ್​? ಟಾಮ್ ಮೂಡಿ ಬಿಚ್ಚಿಟ್ಟ ಸತ್ಯ! – Kannada News | IPL 2026: LSG Set for Major Leadership Overhaul

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಸೀಸನ್ ಮುಕ್ತಾಯದ ಬೆನ್ನಲ್ಲೇ ಲಕ್ನೋ ಸೂಪರ್ ಜೈಂಟ್ಸ್ (LSG) ಫ್ರಾಂಚೈಸಿಯಲ್ಲಿ ಭಾರಿ ಬದಲಾವಣೆಯ ಗಾಳಿ ಬೀಸತೊಡಗಿದೆ. ಪಂಜಾಬ್ ಕಿಂಗ್ಸ್ ವಿರುದ್ಧದ ಹೀನಾಯ ಸೋಲಿನ ಬಳಿಕ ಲಕ್ನೋ ಸೂಪರ್ ಜೈಂಟ್ಸ್​ ತಂಡದ ಗ್ಲೋಬಲ್ ಕ್ರಿಕೆಟ್ ಡೈರೆಕ್ಟರ್ ಟಾಮ್ ಮೂಡಿ ನೀಡಿರುವ ಹೇಳಿಕೆ ಈಗ ಕ್ರಿಕೆಟ್ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

“ನಾಯಕತ್ವದ ಬಗ್ಗೆ ಗಂಭೀರ ಚಿಂತನೆ ಅಗತ್ಯ”

ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟಾಮ್ ಮೂಡಿ, “ಲಕ್ನೋ ಸೂಪರ್ ಜೈಂಟ್ಸ್​ ತಂಡದ ಭವಿಷ್ಯದ ನಾಯಕತ್ವದ ಬಗ್ಗೆ ನಾವು ಅತ್ಯಂತ ಗಂಭೀರವಾಗಿ ಯೋಚಿಸಬೇಕಾದ ಸಮಯ ಬಂದಿದೆ” ಎಂದು ನೇರವಾಗಿ ಹೇಳಿದ್ದಾರೆ. ಈ ಮೂಲಕ ಕೋಟಿ ಕೋಟಿ ಮುಖಬೆಲೆಗೆ ತಂಡ ಸೇರಿದ್ದ ರಿಷಭ್ ಪಂತ್ ಅವರ ನಾಯಕತ್ವಕ್ಕೆ ಕತ್ತರಿ ಬೀಳುವುದು ಬಹುತೇಕ ಖಚಿತ ಎಂಬ ಮುನ್ಸೂಚನೆ ಸಿಕ್ಕಿದೆ.

ಬದಲಾವಣೆಗೆ ಪ್ರಮುಖ ಕಾರಣಗಳು:

  • ಸತತ ಎರಡು ಸೀಸನ್‌ಗಳ ವೈಫಲ್ಯ: 2025ರ ಐಪಿಎಲ್‌ನಲ್ಲಿ 7ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ಲಕ್ನೋ ಸೂಪರ್ ಜೈಂಟ್ಸ್​ ತಂಡ, ಈ ಬಾರಿ (2026) ಅಂಕಪಟ್ಟಿಯಲ್ಲಿ ಕೊನೆಯ ಎರಡು ಸ್ಥಾನಗಳಲ್ಲೊಂದಾಗಿ ಹೊರಬಿದ್ದಿದೆ.
  •  ನಾಯಕನಾಗಿ ಪಂತ್ ವೈಫಲ್ಯ: ರಿಷಭ್ ಪಂತ್ ನಾಯಕತ್ವದಲ್ಲಿ ತಂಡವು ಕಳೆದ ಎರಡು ಸೀಸನ್‌ಗಳಲ್ಲಿ ಕೇವಲ 10 ಪಂದ್ಯಗಳನ್ನು ಗೆದ್ದು, ಬರೋಬ್ಬರಿ 18 ಪಂದ್ಯಗಳಲ್ಲಿ ಸೋಲನುಭವಿಸಿದೆ.
  •  ನಾಯಕನ ಮೇಲಿನ ಒತ್ತಡ: ₹27 ಕೋಟಿ ನೀಡಿ ರಿಷಭ್ ಪಂತ್ ಅವರನ್ನು ಮೆಗಾ ಹರಾಜಿನಲ್ಲಿ ಖರೀದಿಸಲಾಗಿತ್ತು. ಆದರೆ ನಾಯಕತ್ವದ ಭಾರದಿಂದಾಗಿ ಅವರ ಬ್ಯಾಟಿಂಗ್ ಪ್ರದರ್ಶನದ ಮೇಲೆಯೂ ತೀವ್ರ ಪರಿಣಾಮ ಬೀರಿದೆ. ಅವರು ಎರಡು ಸೀಸನ್‌ಗಳಿಂದ ಕೇವಲ 135.74 ರ ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದಾರೆ.
  •  ತಂಡದ ಆಂತರಿಕ ಭಿನ್ನಾಭಿಪ್ರಾಯ: ಸೀಸನ್ ಮಧ್ಯದಲ್ಲಿ “ತಂಡದಲ್ಲಿ ನಿರ್ಧಾರ ತೆಗೆದುಕೊಳ್ಳಲು ಅತಿ ಹೆಚ್ಚು ನಾಯಕರುಗಳು ಇದ್ದಾರೆ” ಎಂದು ಪಂತ್ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಇದು ಮ್ಯಾನೇಜ್‌ಮೆಂಟ್ ಮತ್ತು ನಾಯಕನ ನಡುವಿನ ಆಂತರಿಕ ಭಿನ್ನಾಭಿಪ್ರಾಯವನ್ನು ಬಹಿರಂಗಪಡಿಸಿತ್ತು.

ಭವಿಷ್ಯದ ಯೋಜನೆ ಏನು?

ಲಕ್ನೋ ಸೂಪರ್ ಜೈಂಟ್ಸ್​ ಫ್ರಾಂಚೈಸಿಯು ಮುಂದಿನ ಸೀಸನ್‌ಗೆ ಸಂಪೂರ್ಣ ಹೊಸ ನಾಯಕತ್ವ ಮತ್ತು ತಂತ್ರಗಾರಿಕೆಯೊಂದಿಗೆ ಕಣಕ್ಕಿಳಿಯಲು ಸಜ್ಜಾಗುತ್ತಿದೆ. “ನಾವು ಅವಸರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ, ಆದರೆ ತಂಡದ ಹಿತದೃಷ್ಟಿಯಿಂದ ಕಠಿಣ ಮತ್ತು ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲಿದ್ದೇವೆ” ಎಂದು ಮೂಡಿ ಸ್ಪಷ್ಟಪಡಿಸಿದ್ದಾರೆ.

ಇದರೊಂದಿಗೆ ಐಪಿಎಲ್ 2028 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಹೊಸ ನಾಯಕ ಮುನ್ನಡೆಸುವುದು ಬಹುತೇಕ ಖಚಿತವಾಗಿದೆ. ಇತ್ತ ನಾಯಕತ್ವ ಕಳೆದುಕೊಂಡ ಬಳಿಕ ರಿಷಭ್ ಪಂತ್  ಕೇವಲ ವಿಕೆಟ್ ಕೀಪರ್ ಬ್ಯಾಟರ್ ಆಗಿ ಮುಂದುವರಿಯುತ್ತಾರಾ ಅಥವಾ ತಂಡದಿಂದಲೇ ಹೊರ ಬರಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.

Source link

Leave a Reply

Your email address will not be published. Required fields are marked *