‘ರುಕ್ಮಿಣಿ ರಾಧಾಕೃಷ್ಣ’ (Rukhmini Radhakrishna) ಸಿನಿಮಾದ ಚಿತ್ರೀಕರಣ ಕೊನೆಯ ಹಂತದಲ್ಲಿದೆ. ‘ಉಮೇಶ್ ಫಿಲ್ಮ್ಸ್’ ಬ್ಯಾನರ್ ಮೂಲಕ ಎನ್. ಹನುಮಂತರಾಜು, ಎನ್.ಹೆಚ್. ಉಮೇಶ್ ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಈ ಸಿನಿಮಾಗೆ ಪ್ರಾಣ್ ಸುವರ್ಣ ಅವರು ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಶಿಲ್ಪಾ ಶ್ರೀನಿವಾಸ್ ಅವರ ಪುತ್ರ ಭರತ್ ಕುಮಾರ್ (Bharath Kumar) ಅವರು ಈ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿಭಾಯಿಸುತ್ತಿದ್ದಾರೆ. ನಟಿಯರಾದ ಮೋಕ್ಷಿತಾ ಪೈ (Mokshitha Pai) ಹಾಗೂ ರಿಯಾ ಸಚ್ ದೇವ್ ಅವರು ನಾಯಕಿಯರಾಗಿ ನಟಿಸುತ್ತಿದ್ದಾರೆ. ‘ರುಕ್ಮಿಣಿ ರಾಧಾಕೃಷ್ಣ’ ಚಿತ್ರಕ್ಕೆ ಸುನಾದ್ ಗೌತಮ್ ಅವರು ಸಂಗೀತ ನೀಡಿದ್ದು, 2 ಹಾಡುಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಯಿತು.
ಲಹರಿ ವೇಲು ಅವರು ‘ರುಕ್ಮಿಣಿ ರಾಧಾಕೃಷ್ಣ’ ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ. ‘ಈ ಸಿನಿಮಾದಲ್ಲಿ 5 ಸುಮಧುರ ಹಾಡುಗಳಿವೆ. ಅವುಗಳನ್ನು ಅಷ್ಟೇ ಸುಂದರವಾಗಿ ಚಿತ್ರಿಸಲಾಗಿದೆ. ನಾನು ಕೂಡ ಈ ಸಿನಿಮಾ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದೇನೆ’ ಎಂದು ಲಹರಿ ವೇಲು ಅವರು ಹೇಳಿದರು. ಹಿರಿಯ ಗೀತರಚನಕಾರ ಕೆ. ಕಲ್ಯಾಣ್ ಅವರು ಸಾಹಿತ್ಯ ಬರೆದಿದ್ದಾರೆ.
ಮೆಚ್ಚುಗೆ ಸೂಚಿಸಿದ ಕೆ. ಕಲ್ಯಾಣ್:
ಸುದ್ದಿಗೋಷ್ಠಿ ವೇಳೆ ಕೆ. ಕಲ್ಯಾಣ್ ಮಾತನಾಡಿದರು. ‘ನಿರ್ಮಾಪಕರಲ್ಲಿರುವ ಸಿದ್ದತೆ, ನಿರ್ದೇಶಕರಲ್ಲಿರುವ ಬದ್ದತೆ ಈ ಹಾಡುಗಳಲ್ಲಿ ಎದ್ದು ಕಾಣುತ್ತದೆ. ನಾಯಕಿ ಪಾತ್ರಕ್ಕೆ ತಮಿಳು ಹಿನ್ನೆಲೆ ಇರುತ್ತದೆ. ಹಾಗಾಗಿ ತಮಿಳು, ಕನ್ನಡ ಸೇರಿಸಿ ಒಂದು ಹಾಡನ್ನು ರಚಿಸಿದ್ದೇನೆ’ ಎಂದು ಅವರು ಹೇಳಿದರು. ಈ ಸಿನಿಮಾದ ಕಥೆ ತುಂಬಾ ವಿಶೇಷವಾಗಿದೆ ಎಂದು ಸಂಗೀತ ನಿರ್ದೇಶಕ ಸುನಾದ್ ಗೌತಮ್ ಅವರ ಹೇಳಿದ್ದಾರೆ.
‘ಲಹರಿ’ ಸಂಸ್ಥೆಗೆ ಆಡಿಯೋ ಹಕ್ಕುಗಳು:
ನಾಯಕ ನಟ ಭರತ್ ಕುಮಾರ್ ಮಾತನಾಡಿ, ‘ಒಳ್ಳೆಯ ಮೊತ್ತ ನೀಡಿ ಲಹರಿ ಸಂಸ್ಥೆಯು ಆಡಿಯೋ ಖರೀದಿ ಮಾಡಿದೆ. 2 ಭಾಷೆಯ ಸಾಂಗ್ ಬೇಕು ಎಂದಾಗ ಕೆ. ಕಲ್ಯಾಣ್ ಅವರು ಅದಕ್ಕೆ ತಕ್ಕಂತೆ ಸಾಲುಗಳನ್ನು ಪೋಣಿಸಿದರು. ರಾಧಾ ಪಾತ್ರವನ್ನು ಪಾರು ಖ್ಯಾತಿಯ ಮೋಕ್ಷಿತಾ ಮಾಡಿದರೆ ಚೆನ್ನಾಗಿರುತ್ತೆ ಎಂದು ನಮ್ಮಮ್ಮ ಸಲಹೆ ಕೊಟ್ಟರು. ನಿರ್ಮಪಕರಿಬ್ಬರೂ ನನ್ನ ಸಹೋದರರಿದ್ದಂತೆ’ ಎಂದು ಹೇಳಿದರು.
ಇದನ್ನೂ ಓದು: ಬಿಗ್ ಬಾಸ್ ಬೆಡಗಿ ಮೋಕ್ಷಿತಾ ಪೈ ಪಾಲಿಗೆ ರಾಧಾ ಪಾತ್ರ ಒಲಿದು ಬಂದಿದ್ದು ಹೇಗೆ?
ರಾಧಾ ಪಾತ್ರ ಸಿಕ್ಕಿದ್ದಕ್ಕೆ ಮೋಕ್ಷಿತಾಗೆ ಖುಷಿ:
ತಮ್ಮ ಪಾತ್ರದ ಬಗ್ಗೆ ನಟಿ ಮೋಕ್ಷಿತಾ ಪೈ ಅವರಿಗೆ ಬಹಳ ಖುಷಿ ಇದೆ. ‘ಕಥೆ ಹೇಳಲು ನಿರ್ಮಾಪಕರ ಜತೆ ಭರತ್ ಕೂಡ ಬಂದಿದ್ದರು. ನಿಮಗೆ ಯಾವ ಪಾತ್ರ ಬೇಕು ಎಂದಾಗ ನಾನು ರಾಧಾ ಪಾತ್ರವನ್ನೇ ಸೆಲೆಕ್ಟ್ ಮಾಡಿಕೊಂಡೆ. ಆ ಪಾತ್ರದ ತೀವ್ರತೆ ನನಗೆ ಬಹಳ ಇಷ್ಟವಾಯಿತು. ಕುಂಭಕೋಣಂನಲ್ಲಿ ಈ ಹಾಡನ್ನು ಚಿತ್ರೀಕರಿಸಿದ್ದೇವೆ’ ಎಂದು ಅವರು ಹೇಳಿದರು. ರುಕ್ಮಿಣಿ ಪಾತ್ರವನ್ನು ನಟಿ, ಮಾಡೆಲ್ ರಿಯಾ ಸಚ್ ದೇವ್ ಅವರು ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
