ಪ್ರತಿಯೊಬ್ಬರೂ ಸಹ ಫ್ರೆಂಡ್ಸ್ ಅಥವಾ ಫ್ಯಾಮಿಲಿಯ ಜೊತೆಗೆ ಆಗಾಗ್ಗೆ ಹೋಟೆಲ್, ರೆಸ್ಟೋರೆಂಟ್‌ಗಳಿಗೆ (restaurants) ಹೋಗ್ತಾರೆ. ನಿಮಗೂ ಸಹ ಆಗ್ಗಾಗೆ ರೆಸ್ಟೋರೆಂಟ್‌ಗಳಿಗೆ ಹೋಗುವ ಅಭ್ಯಾಸ ಇರಬಹುದಲ್ವಾ, ಹೀಗೆ ರೆಸ್ಟೋರೆಂಟ್‌ಗೆ ಹೋದಾಗ ಫುಡ್ ಆರ್ಡರ್ ಮಾಡುವ ಮೊದಲೇ ವೈಟರ್ ಟೇಬಲ್ ಮೇಲೆ ಒಂದು ಗ್ಲಾಸ್ ನೀರು ತಂದಿಡುವುದನ್ನು ನೀವು ಗಮನಿಸಿರುತ್ತೀರಿ ಅಲ್ವಾ. ಹೆಚ್ಚಿನವರು ಇದನ್ನು ಆತಿಥ್ಯದ ಒಂದು ಭಾಗವೆಂದು ಭಾವಿಸುತ್ತಾರೆ. ಇದು ಕೇವಲ ಆತಿಥ್ಯದ ಸೂಚಕವಲ್ಲ, ಬದಲಾಗಿ ಮನೋವಿಜ್ಞಾನ ಮತ್ತು ಸ್ಮಾರ್ಟ್ ವ್ಯವಹಾರ ತಂತ್ರವೂ ಆಗಿದೆ. ಹಾಗಾದರೆ ಇದರ ಹಿಂದಿನ ಆಸಕ್ತಿದಾಯಕ ಕಾರಣಗಳೇನು ಎಂಬುದನ್ನು ಅನ್ವೇಷಿಸೋಣ.
ರೆಸ್ಟೋರೆಂಟ್‌ಗಳಲ್ಲಿ ಮೊದಲು ಒಂದು ಗ್ಲಾಸ್ ನೀರು ನೀಡುವುದೇಕೆ?
ಆತಿಥ್ಯದ ಸಂಕೇತ: ಅತಿಥಿ ದೇವೋಭವ ಎನ್ನುವ ಸಂಸ್ಕೃತಿ ನಮ್ಮದು. ಭಾರತದಲ್ಲಿ, ಅತಿಥಿಗೆ ಮೊದಲು ನೀರು ನೀಡುವುದನ್ನು ಗೌರವದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಸಂಪ್ರದಾಯವನ್ನು ರೆಸ್ಟೋರೆಂಟ್‌ಗಳಲ್ಲಿಯೂ ಆಚರಿಸಲಾಗುತ್ತದೆ. ನೀರು ನೀಡಿದ ತಕ್ಷಣ, ನಮ್ಮಲ್ಲಿ ಸ್ವಾಗತ ಮತ್ತು ಕಾಳಜಿಯ ಭಾವನೆ ಉಂಟಾಗುತ್ತದೆ. ಇದು ನಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ನಮಗೆ ಆರಾಮದಾಯಕ ಭಾವನೆಯನ್ನು ನೀಡುತ್ತದೆ. ಅದಕ್ಕಾಗಿಯೇ ರೆಸ್ಟೋರೆಂಟ್‌ಗಳಲ್ಲಿ ಮೊದಲು ನೀರು ನೀಡುವುದು.
ಆಯಾಸ ಮತ್ತು ಬಾಯಾರಿಕೆಯನ್ನು ನಿವಾರಿಸುತ್ತದೆ: ಅನೇಕ ಜನರು ಕೆಲಸ, ಶಾಪಿಂಗ್ ಅಥವಾ ಪ್ರಯಾಣದಿಂದ ನೇರವಾಗಿ ರೆಸ್ಟೋರೆಂಟ್‌ಗೆ ಬರುತ್ತಾರೆ. ಆಗ ಆಯಾಸ ಮತ್ತು ವಿಪರೀತ ಬಾಯಾರಿಕೆ ಉಂಟಾಗುತ್ತದೆ. ಆ ಸಂದರ್ಭದಲ್ಲಿ ಒಂದು ಲೋಟ ನೀರು ಕುಡಿಯುವುದರಿಂದ ದೇಹ ಉಲ್ಲಾಸಗೊಳ್ಳುತ್ತದೆ, ಮನಸ್ಸನ್ನು ಶಾಂತಗೊಳಿಸುತ್ತದೆ. ಮನಸ್ಸು ಶಾಂತವಾಗಿದ್ದಾಗ, ನಾವು ನಿಧಾನವಾಗಿ ಮೆನುವನ್ನು ಬ್ರೌಸ್ ಮಾಡಬಹುದು ಮತ್ತು ಯಾವುದೇ ಆತುರವಿಲ್ಲದೆ ನೆಚ್ಚಿನ ಆಹಾರವನ್ನು ಆರ್ಡರ್ ಮಾಡಬಹುದು. ಈ ಕಾರಣಕ್ಕೂ ರೆಸ್ಟೋರೆಂಟ್‌ಗಳಲ್ಲಿ ಮೊದಲು ನೀರನ್ನು ನೀಡಲಾಗುತ್ತದೆ.
ಹಸಿವನ್ನು ಹೆಚ್ಚಿಸುವ ತಂತ್ರಗಳು: ಕೆಲವು ತಜ್ಞರ ಪ್ರಕಾರ, ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ನಮ್ಮ ಹೊಟ್ಟೆಯ ಜೀರ್ಣಾಂಗ ವ್ಯವಸ್ಥೆಯು ಸಕ್ರಿಯಗೊಳ್ಳುತ್ತದೆ, ಇದು ನಮಗೆ ಇನ್ನಷ್ಟು ಹಸಿವನ್ನುಂಟು ಮಾಡುತ್ತದೆ. ಹೀಗೆ ತುಂಬಾ ಹಸಿವಾದಾಗ, ಸೂಪ್, ಸ್ಟಾರ್ಟರ್, ಮುಖ್ಯ ಖಾದ್ಯ ಎಲ್ಲವನ್ನು ಆರ್ಡರ್ ಮಾಡುತ್ತೇವೆ. ಇದು ಕೂಡ ರೆಸ್ಟೋರೆಂಟ್‌ಗಳಲ್ಲಿ ಫುಡ್ ಆರ್ಡರ್ ಮಾಡುವ ಮುನ್ನ ನೀರು ನೀಡುವುದರ ಹಿಂದಿನ ಕಾರಣ.
ಇದನ್ನೂ ಓದಿ: ಮಾತ್ರೆಗಳ ಮಧ್ಯೆ ಗೆರೆ ಏಕಿರುತ್ತವೆ? ಈ ಲೈನ್ನ ಮಹತ್ವವೇನು?
ಕಾಯುವಿಕೆಯನ್ನು ಸುಲಭಗೊಳಿಸುವುದು: ರೆಸ್ಟೋರೆಂಟ್‌ನಲ್ಲಿ ಆರ್ಡರ್ ಮಾಡಿದ ನಂತರ, ಆಹಾರವು ಟೇಬಲ್‌ಗೆ ಬರಲು 15 ರಿಂದ 20 ನಿಮಿಷಗಳು ತೆಗೆದುಕೊಳ್ಳಬಹುದು. ಸುಮ್ಮನೆ ಕುಳಿತಾಗ, ಈ ಕಾಯುವಿಕೆ ತುಂಬಾ ದೀರ್ಘ ಮತ್ತು ನೀರಸವೆನಿಸಬಹುದು. ಆದರೆ ಮೇಜಿನ ಮೇಲೆ ಒಂದು ಲೋಟ ನೀರು ಇದ್ದಾಗ, ಫ್ರೆಂಡ್ಸ್, ಫ್ಯಾಮಿಲಿಯೊಂದಿಗೆ ಚಿಟ್‌ಚಾಟ್ ಮಾಡುತ್ತಾ ನಿಧಾನವಾಗಿನೀರು ಕುಡಿಯುತ್ತೇವೆ. ಇದರಿಂದ ಆ 15 ರಿಂದ 20 ನಿಮಿಷಗಳು ಹೇಗೆ ಕಳೆದವು ಎಂಬುದೇ ಗೊತ್ತಾಗುವುದಿಲ್ಲ.
ವ್ಯವಹಾರವನ್ನು ಬೆಳೆಸುವ ಒಂದು ಬುದ್ಧಿವಂತ ತಂತ್ರ: ರೆಸ್ಟೋರೆಂಟ್ ವ್ಯವಹಾರಕ್ಕೆ ಆರಂಭದಲ್ಲಿ ಉಚಿತ ನೀರು ನೀಡುವುದು ತುಂಬಾ ಪ್ರಯೋಜನಕಾರಿ. ಗ್ರಾಹಕರು ಉತ್ತಮ ಸೇವೆ ಮತ್ತು ಗೌರವವನ್ನು ಪಡೆದಾಗ, ಅವರು ಹೆಚ್ಚು ಖರ್ಚು ಮಾಡುವ ಸಾಧ್ಯತೆ ಹೆಚ್ಚು. ಸಕಾರಾತ್ಮಕ ಅನುಭವವು ಅವರು ಅದೇ ರೆಸ್ಟೋರೆಂಟ್‌ಗೆ ಪದೇ ಪದೇ ಬರುವಂತೆ ಮಾಡುತ್ತದೆ. ಹೀಗೆ ವ್ಯವಹಾರವನ್ನು ಹೆಚ್ಚಿಸುವ ಸಲುವಾಗಿಯೂ ಉತ್ತಮ ಆಥಿತ್ಯದ ಭಾಗವಾಗಿ ನೀರನ್ನು ನೀಡಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 5:52 pm, Wed, 1 July 26
