ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದ ವಿಚಾರಣೆ 59ನೇ ಸಿಸಿಹೆಚ್ ಕೋರ್ಟ್ನಲ್ಲಿ ಚಾಲ್ತಿಯಲ್ಲಿದ್ದು, ಕಳೆದ ಕೆಲ ದಿನಗಳಿಂದ ಸಾಕಷ್ಟು ಆಸಕ್ತಿಕರ ಬೆಳವಣಿಗೆಗಳು ವಿಚಾರಣೆ ವಿಷಯವಾಗಿ ನಡೆದಿವೆ. ಪ್ರಕರಣದಲ್ಲಿ 14ನೇ ಆರೋಪಿ ಆಗಿರುವ ದರ್ಶನ್ ಆಪ್ತ ಪ್ರದೋಷ್ ತಮ್ಮನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವಂತೆ ಅರ್ಜಿ ಹಾಕಿದ್ದು, ಇದು ದರ್ಶನ್ಗೆ ಆತಂಕ ತಂದಿರುವ ಸಾಧ್ಯತೆ ಇದೆ. ಜೊತೆಗೆ ಹಲವು ಸಾಕ್ಷ್ಯಗಳ ವಿಚಾರಣೆಯೂ ನಡೆಯುತ್ತಿದೆ. ಇದೀಗ ನಾಳಿನ (ಆಗಸ್ಟ್ 12) ಸಾಕ್ಷ್ಯ ವಿಚಾರಣೆ ವೇಳೆ ದರ್ಶನ್ ಖುದ್ದು ಹಾಜರಿಗೆ ಕೋರಿ ದರ್ಶನ್ ಪರ ವಕೀಲರು ಅರ್ಜಿ ಹಾಕಿದ್ದಾರೆ.
ನಾಳೆ (ಆಗಸ್ಟ್ 12) ಪ್ರಮುಖ ಸಾಕ್ಷಿಯೊಂದರ ಪಾಟಿ ಸವಾಲು ನಡೆಯಬೇಕಿದ್ದು, ಈ ಪಾಟಿ ಸವಾಲಿನ ವೇಳೆ ದರ್ಶನ್, ನ್ಯಾಯಾಲಯದಲ್ಲಿ ಖುದ್ದಾಗಿ ಹಾಜರರಿರಬೇಕು ಎಂದು ದರ್ಶನ್ ಪರ ವಕೀಲರು ಕೋರಿದ್ದು, ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದಾರೆ. ಈ ವರೆಗೆ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ದರ್ಶನ್ ಹಾಗೂ ಇನ್ನಿತರೆ ಕೆಲವು ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕವೇ ಹಾಜರಾಗುತ್ತಿದ್ದರು. ಆದರೆ ಈಗ ದರ್ಶನ್ ಖುದ್ದು ಹಾಜರಿರಬೇಕು ಎಂದು ವಕೀಲರೇ ಕೇಳಿದ್ದಾರೆ.
ಸಿಆರ್‌ಪಿಸಿ ಸೆ.273ರಡಿಯಲ್ಲಿ ದರ್ಶನ್ ಪರ ವಕೀಲರು ಅರ್ಜಿ ಹಾಕಿದ್ದು, ಪಾಟಿ ಸವಾಲಿಗೆ ಮುನ್ನ, ದರ್ಶನ್ ಇಂದ ಕೆಲವು ಮಾಹಿತಿ ಪಡೆಯಬೇಕಿರುವ ಕಾರಣ ಅವರ ಹಾಜರಿ ಅಗತ್ಯ ಎಂದು ವಕೀಲರು ಅರ್ಜಿಯಲ್ಲಿ ಹೇಳಿದ್ದಾರೆ. ಆದರೆ ನಿಗದಿತ ಅರ್ಜಿಯ ಬಗ್ಗೆ ನಾಳೆ (ಆಗಸ್ಟ್ 12) ವಾದ ಮಂಡಿಸುವಂತೆ ನ್ಯಾಯಾಲಯವು ಸೂಚನೆ ನೀಡಿದೆ. ಸಾಕ್ಷ್ಯ ವಿಚಾರಣೆಯನ್ನೂ ಸಹ ಮುಂದೂಡಲಾಗಿದೆ.
ಇದನ್ನೂ ಓದಿ:ರೇಣುಕಾ ಸ್ವಾಮಿ ಪ್ರಕರಣ: ಆರೋಪಿ ಪವನ್ ವಕೀಲರಿಗೆ ದಂಡ
ಪ್ರದೋಶ್ ಅವರ ಮಾಫಿ ಸಾಕ್ಷಿ ಹೇಳಿಕೆಯನ್ನು ಆದಷ್ಟು ಬೇಗ ನ್ಯಾಯಾಲಯ ಪಡೆಯಬೇಕು ಎಂದು ಪ್ರದೊಶ್ ಪರ ವಕೀಲರು ವಾದಿಸಿದ್ದರು. ಆದರೆ ದರ್ಶನ್ ಪರ ವಕೀಲರು ಆಗಸ್ಟ್ 18ರ ವರೆಗೆ ಹೇಳಿಕೆ ಪಡೆಯದಂತೆ ಮನವಿ ಮಾಡಿದ್ದು, ದರ್ಶನ್ಪರ ವಕೀಲರ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ. ಅಲ್ಲಿಗೆ ಸುಮಾರು ಒಂದು ವಾರಗಳ ಕಾಲ ದರ್ಶನ್ ಮತ್ತು ಗ್ಯಾಂಗ್ ನಿರಾಳವಾಗಿರಬಹುದಾಗಿದೆ.
ಇದೇ ಪ್ರಕರಣದಲ್ಲಿ 12ನೇ ಆರೋಪಿ ಆಗಿರುವ ಲಕ್ಷ್ಮಣ್ ಪರ ವಕೀಲರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಎಸ್ಪಿಪಿಗೆ ನ್ಯಾಯಾಲಯ ಸೂಚನೆ ನೀಡಿದೆ. ಜಾಮೀನು ಅರ್ಜಿಯ ವಿಚಾರಣೆಯನ್ನು ಆಗಸ್ಟ್ 17ಕ್ಕೆ ಮುಂದೂಡಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
