ತುಂಗಭದ್ರಾ ಜಲಾಶಯದಲ್ಲಿ ನೀರು ಕನಿಷ್ಠ ಮಟ್ಟಕ್ಕೆ ಕುಸಿದಿರುವುದುImage Credit source: tv9
ಕೊಪ್ಪಳ, ಜುಲೈ 3: ಕರ್ನಾಟಕದಲ್ಲಿ ಮುಂಗಾರು ಮಳೆ (Monsoon Rain) ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಇಡೀ ಕಲ್ಯಾಣ ಕರ್ನಾಟಕ ಭಾಗದ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಿಂದ (TB Dam) ಕಾಲುವೆಗಳಿಗೆ ನೀರು ಹರಿಸುವುದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಕೊಪ್ಪಳ ತಾಲೂಕಿನ ಮುನಿರಾಬಾದ್ ಸಮೀಪವಿರುವ ತುಂಗಭದ್ರಾ ಜಲಾಶಯದ ವ್ಯಾಪ್ತಿಯಲ್ಲಿ ಒಳಹರಿವು ಇಲ್ಲದೇ ಇರುವುದರಿಂದ ಮುಂಗಾರು ಬೆಳೆಗೆ ನೀರು ಕೊಡಲು ಸಾಧ್ಯವೇ ಇಲ್ಲ ಎಂದು ನೀರಾವರಿ ವಲಯದ ಅಧಿಕಾರಿಗಳು ಅಧಿಕೃತ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಕಟ್ಟುನಿಟ್ಟಿನ ಸೂಚನೆಯ ಮೇರೆಗೆ ಕಾಲುವೆಗಳ ನೀರನ್ನು ಬಂದ್ ಮಾಡಲಾಗಿದ್ದು, ಇದು ಅಚ್ಚುಕಟ್ಟು ಪ್ರದೇಶದ ರೈತರ ನಿದ್ದೆಗೆಡಿಸಿದೆ.
ಟಿಬಿ ಡ್ಯಾಂನಲ್ಲಿ ಹತ್ತು ವರ್ಷಗಳಲ್ಲೇ ಅತ್ಯಂತ ಕನಿಷ್ಠ ನೀರಿನ ಮಟ್ಟ
ಪ್ರಸ್ತುತ ತುಂಗಭದ್ರಾ ಜಲಾಶಯದಲ್ಲಿ ಕೇವಲ 9 ಟಿಎಂಸಿ ನೀರು ಮಾತ್ರ ಸಂಗ್ರಹವಿದ್ದು, ಇದು ಕಳೆದ 10 ವರ್ಷಗಳಲ್ಲೇ ಅತ್ಯಂತ ಕನಿಷ್ಠ ಮಟ್ಟದ ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದಲ್ಲಿ ಬರೋಬ್ಬರಿ 75 ಟಿಎಂಸಿ ನೀರಿತ್ತು. ಆದರೆ ಕಳೆದ ವರ್ಷ ಡ್ಯಾಂನ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿದ್ದ ಕಾರಣದಿಂದಾಗಿ ರೈತರಿಗೆ ಹಿಂಗಾರು ಬೆಳೆಗೆ ನೀರು ಕೊಡಲು ಸಾಧ್ಯವಾಗಿರಲಿಲ್ಲ. ಈಗ ಈ ಬಾರಿ ಮುಂಗಾರು ಮಳೆಯೇ ಇಲ್ಲದ ಕಾರಣ ಜೂನ್ ತಿಂಗಳಲ್ಲಿ ಡ್ಯಾಂಗೆ ಯಾವುದೇ ಒಳಹರಿವು ಬಂದಿಲ್ಲ. ಪರಿಣಾಮವಾಗಿ ಮುಂಗಾರು ಬೆಳೆಗೆ ನೀರು ಹರಿಸುವುದನ್ನು ನಿಲ್ಲಿಸಲಾಗಿದೆ.
ನಾಲ್ಕು ಜಿಲ್ಲೆಗಳ ರೈತರು ಕಂಗಾಲು
ತುಂಗಭದ್ರಾ ಜಲಾಶಯದ ನೀರನ್ನೇ ನಂಬಿ ಕೃಷಿ ಚಟುವಟಿಕೆ ಆರಂಭಿಸಲು ಸಜ್ಜಾಗಿದ್ದ ಕೊಪ್ಪಳ, ಬಳ್ಳಾರಿ, ರಾಯಚೂರು ಮತ್ತು ವಿಜಯನಗರ ಜಿಲ್ಲೆಗಳ ಲಕ್ಷಾಂತರ ರೈತರು ಸರ್ಕಾರದ ಈ ನಿರ್ಧಾರದಿಂದ ಕಂಗಾಲಾಗಿದ್ದಾರೆ. ಈಗಾಗಲೇ ಕೃಷಿ ಇಲಾಖೆಯು ರೈತರು ಜಲಾಶಯದ ನೀರನ್ನು ಮಾತ್ರ ನಂಬಿ ಹೆಚ್ಚಿನ ನೀರು ಬೇಡುವ ಬೆಳೆಗಳ ಬಿತ್ತನೆ ಮಾಡಬೇಡಿ ಎಂದು ಎಚ್ಚರಿಸಿದೆ. ಒಂದು ವೇಳೆ ಜುಲೈ ತಿಂಗಳಿನಲ್ಲಾದರೂ ಮಳೆ ಚೇತರಿಸಿಕೊಳ್ಳದಿದ್ದರೆ ಈ ನಾಲ್ಕು ಜಿಲ್ಲೆಗಳಲ್ಲಿ ಕೃಷಿ ಚಟುವಟಿಕೆ ಸಂಪೂರ್ಣ ನಾಶವಾಗಿ ರೈತರು ತೀವ್ರ ಸಾಲದ ಸುಳಿಗೆ ಸಿಲುಕುವ ಭೀತಿ ಎದುರಾಗಿದೆ.
ಇದನ್ನೂ ಓದಿ: ಭೀಕರ ಬರದ ಛಾಯೆ: ಜಿಲ್ಲೆಗಳಿಗೆ ತೆರಳಿ ಪರಿಸ್ಥಿತಿ ಅವಲೋಕಿಸಲು ಸಚಿವರಿಗೆ ಸಿಎಂ ಡಿಕೆ ಶಿವಕುಮಾರ್ ಖಡಕ್ ಸೂಚನೆ
ಸಿಎಂ ಡಿಕೆ ಶಿವಕುಮಾರ್ ಸಹ ಗುರುವಾರದ ಸಚಿವ ಸಂಪುಟ ಸಭೆಯ ಬಳಿಕ ರೈತರಿಗೆ ಕಿವಿ ಮಾತು ಹೇಳಿದ್ದಾರೆ. ರೈತರು ಕೇವಲ ಜಲಾಶಯದ ನೀರನ್ನು ನಂಬಿ ಬಿತ್ತನೆ ಮಾಡಬೇಡಿ ಎಂದು ಸಿಎಂ ಸಲಹೆ ನೀಡಿದ್ದಾರೆ.
ಐದು ದಶಕದಲ್ಲೇ 4ನೇ ಬಾರಿ ಜೂನ್‌ನಲ್ಲಿ ಅತ್ಯಂತ ಕಡಿಮೆ ಮಳೆ
ಹವಾಮಾನ ಇಲಾಖೆ ಹಾಗೂ ಪ್ರಮುಖ ವರದಿಗಳ ಪ್ರಕಾರ, ಕರ್ನಾಟಕದಲ್ಲಿ ಈ ವರ್ಷ ಜೂನ್ ತಿಂಗಳಿನಲ್ಲಿ ದಾಖಲೆಯ ಶೇ 42 ರಷ್ಟು ಮುಂಗಾರು ಮಳೆಯ ಕೊರತೆ ಎದುರಾಗಿದೆ. ಕಳೆದ ಐದು ದಶಕಗಳಲ್ಲೇ ಇದು ಜೂನ್ ತಿಂಗಳ ನಾಲ್ಕನೇ ಅತ್ಯಂತ ಕನಿಷ್ಠ ಮಳೆಯ ಅವಧಿಯಾಗಿದೆ. ಸಾಮಾನ್ಯವಾಗಿ ಜೂನ್‌ನಲ್ಲಿ ರಾಜ್ಯಕ್ಕೆ 199 ಮಿಮೀ ಮಳೆಯಾಗಬೇಕಿತ್ತು, ಆದರೆ ಈ ಬಾರಿ ಕೇವಲ 116 ಮಿಮೀ ಮಳೆಯಾಗಿದೆ. ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಮಳೆಯ ಕೊರತೆ ಕ್ರಮವಾಗಿ ಶೇ 52 ಮತ್ತು ಶೇ 49 ರಷ್ಟಿದ್ದು, ಇದು ಜಲಾಶಯಗಳ ನೀರಿನ ಸಂಗ್ರಹದ ಮೇಲೆ ಭೀಕರ ಪರಿಣಾಮ ಬೀರಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
