‘ಲಗಾನ್’ ಸಿನಿಮಾಕ್ಕೆ 25ರ ಸಂಭ್ರಮ, ಮತ್ತೆ ಜೊತೆಯಾದ ಹಳೆಯ ‘ತಂಡ’ – Kannada News | 25 years for Lagaan, movie re release in many cities

ಭಾರತೀಯ ಚಿತ್ರರಂಗದ ಐಕಾನಿಕ್ ಸಿನಿಮಾ ‘ಲಗಾನ್’ (Lagaan). ಆಸ್ಕರ್​​ಗೆ ನಾಮಿನೇಟ್ ಆಗಿದ್ದ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆ ಪಡೆದ ಈ ಸಿನಿಮಾ ಬಿಡುಗಡೆಯಾಗಿ 25 ವರ್ಷಗಳು ಪೂರ್ಣಗೊಂಡಿವೆ. ಇದೇ ಖುಷಿಯಲ್ಲಿ ‘ಲಗಾನ್’ ಸಿನಿಮಾ ಮರು ಬಿಡುಗಡೆ ಆಗಿದೆ. ಮುಂಬೈ, ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಸಿನಿಮಾ ಮರು ಬಿಡುಗಡೆ ಆಗಿದ್ದು, ಅಭಿಮಾನಿಗಳು ತಂಡೋಪತಂಡವಾಗಿ ಸಿನಿಮಾಕ್ಕೆ ಹೋಗಿ ಎಂಜಾಯ್ ಮಾಡುತ್ತಿದ್ದಾರೆ. ಮಾತ್ರವಲ್ಲದೆ, ಸಿನಿಮಾದ ಮರು ಬಿಡುಗಡೆ ಖುಷಿಯಲ್ಲಿ ‘ಲಗಾನ್’ ಚಿತ್ರತಂಡವೂ ಸಹ ಮತ್ತೆ ಒಂದಾಗಿ ಸಂವಾದ ನಡೆಸಿದೆ.

ಆಮಿರ್ ಖಾನ್, ನಿರ್ದೇಶಕ ಅಶುತೋಷ್ ಗೋವಾರಿಕರ್, ಹಿರಿಯ ನಟಿ ಸುಹಾಸಿನಿ ಮುಳೆ, ನಟರಾದ ಅಖಿಲೇಂದ್ರ ಮಿಶ್ರಾ, ಯಶ್‌ಪಾಲ್ ಶರ್ಮಾ, ರಾಜ್ ಝುತ್ಶಿ, ಹಾಗೂ ಆಮಿರ್ ಅವರ ಮಾಜಿ ಪತ್ನಿ ಮತ್ತು ಸಿನಿಮಾದ ಕಾರ್ಯಕಾರಿ ನಿರ್ಮಾಪಕಿ ಆಗಿದ್ದ ರೀನಾ ದತ್ತಾ. ಚಿತ್ರತಂಡದ ಸದಸ್ಯರು ಫೋಟೋಗ್ರಾಫರ್‌ಗಳೊಂದಿಗೆ ಸಂವಾದ ನಡೆಸುತ್ತಾ, ಚಿತ್ರೀಕರಣದ ದಿನಗಳ ಸಿಹಿ ನೆನಪುಗಳನ್ನು ಹಂಚಿಕೊಂಡರು. ವಿಶೇಷವೆಂದರೆ ಸಿನಿಮಾನಲ್ಲಿ ನಟಿಸಿರುವ ಕೆಲ ಬ್ರಿಟಿಷ್ ನಟರು ಸಹ ಈ ವಿಶೇಷ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಇದನ್ನೂ ಓದಿ:‘ಲಗಾನ್’ ಸಿನಿಮಾಗೆ 25 ವರ್ಷಗಳ ಸಂಭ್ರಮ; ಚಿತ್ರಮಂದಿರಗಳಲ್ಲಿ ಮತ್ತೆ ಬಿಡುಗಡೆ

2001ರಲ್ಲಿ ಬಿಡುಗಡೆಯಾದ ‘ಲಗಾನ್’, 1893ರ ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯ ಹಿನ್ನೆಲೆಯನ್ನು ಹೊಂದಿದೆ. ಬರಗಾಲದಿಂದ ನಲುಗಿದ ಹಳ್ಳಿಯ ಜನರು ಬ್ರಿಟಿಷ್ ಅಧಿಕಾರಿ ವಿಧಿಸಿದ ಅತಿಯಾದ ತೆರಿಗೆಯ ವಿರುದ್ಧ ಹೋರಾಡಲು ಕ್ರಿಕೆಟ್ ಪಂದ್ಯವನ್ನೇ ಆಯುಧವನ್ನಾಗಿ ಮಾಡಿಕೊಳ್ಳುವ ಕಥಾವಸ್ತುವನ್ನು ಈ ಸಿನಿಮಾ ಹೊಂದಿದೆ. ಧೈರ್ಯ, ಏಕತೆ ಮತ್ತು ಹೋರಾಟದ ಕಥೆಯನ್ನು ಒಳಗೊಂಡಿರುವ ಈ ಚಿತ್ರವು ಹಿಂದಿ ಚಿತ್ರರಂಗದ ಅತ್ಯಂತ ಪ್ರೀತಿಯ ಸಿನಿಮಾಗಳಲ್ಲಿ ಒಂದಾಗಿದೆ.

ಈ ಚಿತ್ರವು ಜಾಗತಿಕ ಮಟ್ಟದಲ್ಲಿ ಮನ್ನಣೆ ಗಳಿಸಿದ್ದು, 2002ರಲ್ಲಿ ಅಕಾಡೆಮಿ ಪ್ರಶಸ್ತಿಯ (ಆಸ್ಕರ್) ‘ಅತ್ಯುತ್ತಮ ವಿದೇಶಿ ಭಾಷಾ ಚಿತ್ರ’ ವಿಭಾಗದಲ್ಲಿ ನಾಮನಿರ್ದೇಶನಗೊಂಡಿತ್ತು. 1957ರ ‘ಮದರ್ ಇಂಡಿಯಾ’ ಮತ್ತು 1988ರ ‘ಸಲಾಮ್ ಬಾಂಬೆ!’ ನಂತರ ಈ ಗೌರವ ಪಡೆದ ಮೂರನೇ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೆ ‘ಲಗಾನ್’ ಪಾತ್ರವಾಗಿತ್ತು. ಸಿನಿಮಾಕ್ಕೆ ಆಸ್ಕರ್ ಸಿಗಲಿಲ್ಲವಾದರೂ ಭಾರಿ ಜನಪ್ರೀತಿ ಈ ಸಿನಿಮಾಕ್ಕೆ ಧಕ್ಕಿತ್ತು.

‘ಲಗಾನ್’ ಸಿನಿಮಾಕ್ಕೆ ಭಾರಿ ಸಂಖ್ಯೆಯ ಅಭಿಮಾನಿಗಳಿದ್ದು, ಸಿನಿಮಾದ ವಿಡಿಯೋ ತುಣುಕುಗಳು, ಹಾಡುಗಳು ಇಂದಿಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಸಿನಿಮಾಕ್ಕೆ ಎಆರ್ ರೆಹಮಾನ್ ಸಂಗೀತ ನೀಡಿದ್ದು, ಸಿನಿಮಾದ ಎಲ್ಲ ಹಾಡುಗಳು ಸಹ ಬ್ಲಾಕ್ ಬಸ್ಟರ್ ಎನಿಸಿಕೊಂಡಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *