
ಇತ್ತೀಚೆಗೆ ‘ಕೆವಿಎನ್ ಪ್ರೊಡಕ್ಷನ್ಸ್’ (KVN Productions) ಸಂಸ್ಥೆಯು ‘ಲವ್ ಮಾಕ್ಟೇಲ್ 3’ ಸಿನಿಮಾವನ್ನು ಬಿಡುಗಡೆ ಮಾಡಿತ್ತು. ಆ ಸಿನಿಮಾ ಸೂಪರ್ ಹಿಟ್ ಆಯಿತು. ಅದರ ಬೆನ್ನಲ್ಲೇ ‘ಪೀಟರ್’ ಸಿನಿಮಾವನ್ನು ವಿತರಣೆ ಮಾಡಲು ‘ಕೆವಿಎನ್ ಪ್ರೊಡಕ್ಷನ್ಸ್’ ಸಜ್ಜಾಗಿದೆ. ಈ ಸಿನಿಮಾದ ಕಂಟೆಂಟ್ ನೋಡಿ ಇಷ್ಟಪಟ್ಟಿದ್ದರಿಂದ ವಿತರಿಸಲು ಮುಂದೆ ಬಂದಿದೆ. ಏಪ್ರಿಲ್ 10ಕ್ಕೆ ರಾಜ್ಯದಾದ್ಯಂತ ಬಿಡುಗಡೆ ಮಾಡಲಿದೆ. ರಾಜೇಶ್ ಧ್ರುವ ಅವರು ‘ಪೀಟರ್’ (Peter) ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.
ನಾಯಕಿಯಾಗಿ ಜಾನ್ವಿ ನಟಿಸಿದ್ದಾರೆ. ರವೀಕ್ಷಾ ಶೆಟ್ಟಿ , ರಘು ಪಾಂಡೇಶ್ವರ್ , ರಾಮನಾಡಗೌಡ, ವರುಣ್ ಪಟೇಲ್, ಪ್ರತಿಮಾ ನಾಯಕ್, ಭರತ್, ರಾಧಾಕೃಷ್ಣ ಕುಂಬ್ಳೆ, ರಕ್ಷಿತ್ ದೊಡ್ಡೇರಾ, ದೀನಾ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಕರ್ನಾಟಕ-ಕೇರಳ ಗಡಿ ಭಾಗದಲ್ಲಿ ನಡೆಯುವ ಕಥೆಯನ್ನು ‘ಪೀಟರ್’ ಸಿನಿಮಾದಲ್ಲಿ ತೋರಿಸಲಾಗುವುದು.
ಗುರುಪ್ರಸಾದ್ ನಾರ್ನಾಡ್ ಅವರು ಛಾಯಾಗ್ರಹಣ ಮಾಡಿದ್ದಾರೆ. ನವೀನ್ ಶೆಟ್ಟಿ ಅವರ ಸಂಕಲನ ಈ ಚಿತ್ರಕ್ಕಿದೆ. ‘ವೃದ್ಧಿ ಸ್ಟುಡಿಯೋಸ್’ ಬ್ಯಾನರ್ ಮೂಲಕ 100ಕ್ಕೂ ಹೆಚ್ಚು ಸಿನಿಮಾಗಳಿಗೆ ಸೌಂಡ್ ಡಿಸೈನರ್ ಆಗಿ ಕೆಲಸ ಮಾಡಿದ ರವಿ ಹೀರೇಮಠ್ ಹಾಗೂ ರಾಕೇಶ್ ಹೆಗಡೆ ಅವರು ಈ ಸಿನಿಮಾವವನ್ನು ನಿರ್ಮಿಸಿದ್ದಾರೆ. ರಿತ್ವಿಕ್ ಮುರಳಿಧರ್ ಅವರು ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ಈಗಾಗಲೇ ಈ ಸಿನಿಮಾದ ಹಾಡುಗಳು ಗಮನ ಸೆಳೆದಿವೆ. ಇತ್ತೀಚೆಗೆ ಈ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ನಡೆಯಿತು. ನಿರ್ದೇಶಕ ಸುಕೇಶ್ ಶೆಟ್ಟಿ ಮಾತನಾಡಿ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡರು. ‘ಕರ್ನಾಟಕ ಮಾತ್ರವಲ್ಲದೆ ಕೇರಳ, ತಮಿಳುನಾಡು, ಹೈದರಾಬಾದ್ನಲ್ಲಿಯೂ ಪ್ರಚಾರ ಕೆಲಸ ನಡೆಯುತ್ತಿದೆ. ಏಪ್ರಿಲ್ 10ಕ್ಕೆ ನಮ್ಮ ರಾಜ್ಯದಲ್ಲಿ ಬಿಡುಗಡೆಯಾಗಲಿದೆ. ಎರಡು ವಾರದ ಬಳಿಕ ಬೇರೆ ರಾಜ್ಯಗಳಲ್ಲಿ ಬಿಡುಗಡೆ ಮಾಡಲಿದ್ದೇವೆ’ ಎಂದು ಅವರು ಹೇಳಿದರು.
ಇದನ್ನೂ ಓದಿ: ಶರವೇಗದಲ್ಲಿ ಕೆವಿಎನ್ ಪ್ರೊಡಕ್ಷನ್, ನಿರ್ಮಿಸುತ್ತಿರುವ ಸಿನಿಮಾಗಳೆಷ್ಟು? ಹಾಕಿರುವ ಬಂಡವಾಳ ಎಷ್ಟು?
ರಾಜೇಶ್ ಧ್ರುವ ಅವರಿಗೆ ಇದು ಎರಡನೇ ಸಿನಿಮಾ. ಅಚ್ಚುಕಟ್ಟಾಗಿ ಕೆಲಸ ಮಾಡಿದ ನಿರ್ದೇಶಕರು ಮತ್ತು ಯಾವುದೇ ರಾಜಿ ಇಲ್ಲದೇ ನಿರ್ಮಾಣ ಮಾಡಿದ ನಿರ್ಮಾಪಕರನ್ನು ರಾಜೇಶ್ ಧ್ರುವ ಹೊಗಳಿದರು. ‘ಪೀಟರ್ ರಾಕ್ಷಸನೂ ಹೌದು, ರಕ್ಷಕನೂ ಹೌದು’ ಎಂದು ಹೇಳುವ ಮೂಲಕ ಅವರು ಸಿನಿಮಾದ ಕಥೆಯ ಬಗ್ಗೆ ಕೌತುಕ ಮೂಡಿಸಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.