ಲಿವಿನ್ ರಿಲೇಷನ್ಶಿಪ್ನಲ್ಲಿದ್ದ ಯುವತಿ ನೇಣಿಗೆ ಶರಣು!
ಬೆಂಗಳೂರು, ಮೇ 01: ನಗರದಲ್ಲಿ ಲಿವಿನ್ ರಿಲೇಷನ್ಶಿಪ್ನಲ್ಲಿದ್ದ (Live-in Relationship) ಜೋಡಿಗಳ ಜಗಳ ದುರಂತ ಅಂತ್ಯ ಕಂಡಿದೆ. ಪ್ರಿಯಕರ ಬೇರೆ ಯುವತಿಯ ಜೊತೆ ಮಾತನಾಡುತ್ತಿದ್ದಾನೆ ಎಂದು ಅನುಮಾನದಿಂದ ಮೇಘಾಲಯ ಮೂಲದ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಿಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸಂಜೀವಿನಿ ನಗರದಲ್ಲಿ ಸಂಭವಿಸಿದೆ.
ಪ್ರೇಮಿಗಳ ನಡುವೆ 8 ವರ್ಷಗಳ ಅಂತರ
ಮೃತ ಯುವತಿಯನ್ನು ಮೇಘಾಲಯ ಮೂಲದ ಅಗತ ಬೈತಿಯಂಗುಂ (34) ಎಂದು ಗುರುತಿಸಲಾಗಿದೆ. ಈಕೆ ಮಾನ್ಯತಾ ಟೆಕ್ ಪಾರ್ಕ್ನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡಿದ್ದಳು. ಮಣಿಪುರ ಮೂಲದ ನವಾಜ್ ಶರೀಫ್ (26) ಎಂಬಾತನ ಜೊತೆ ಅಗತ ಕಳೆದ ಮೂರು ವರ್ಷಗಳಿಂದ ಸಂಜೀವಿನಿ ನಗರದ ಬಾಡಿಗೆ ಮನೆಯೊಂದರಲ್ಲಿ ಲಿವಿನ್ ರಿಲೇಷನ್ಶಿಪ್ನಲ್ಲಿದ್ದಳು ಎಂದು ಹೇಳಲಾಗಿದೆ. ಅಗತ ಮತ್ತು ಆಕೆಯ ಬಾಯ್ಫ್ರೆಂಡ್ ನಡುವೆ 8 ವರ್ಷಗಳ ಅಂತರವಿತ್ತು. ಇದೇ ಕಾರಣಕ್ಕೆ ಇಬ್ಬರ ನಡುವೆ ಪದೇ ಪದೇ ಮನಸ್ತಾಪ ಹಾಗೂ ಗಲಾಟೆಗಳೂ ನಡೆಯುತ್ತಿದ್ದವು. ನವಾಜ್ ಶರೀಫ್ ಯಾರೊಂದಿಗಾದರೂ ಫೋನ್ನಲ್ಲಿ ಮಾತನಾಡಿದರೆ ಅಗತ ಅತಿಯಾಗಿ ಅನುಮಾನ ಪಡುತ್ತಿದ್ದರು ಎನ್ನಲಾಗಿದೆ.
ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ
ಕಳೆದ ಬುಧವಾರ ರಾತ್ರಿ ನವಾಜ್ ಶರೀಫ್ ತನ್ನ ತಾಯಿಯ ಜೊತೆ ಫೋನ್ನಲ್ಲಿ ಮಾತನಾಡುತ್ತಿದ್ದ. ಇದನ್ನು ಗಮನಿಸಿದ ಅಗತ, ನೀನು ಯಾವುದೋ ಹುಡುಗಿ ಜೊತೆ ಮಾತನಾಡುತ್ತಿದ್ದೀಯಾ ಎಂದು ಜಗಳ ತೆಗೆದಿದ್ದಾಳೆ. ಈ ವಿಚಾರವಾಗಿ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ಜಗಳ ವಿಕೋಪಕ್ಕೆ ಹೋದಾಗ ನವಾಜ್ ಶರೀಫ್ ಮನೆಯಿಂದ ಹೊರಗೆ ಹೋಗಿದ್ದಾನೆ. ಈ ವೇಳೆ ಅಗತ ಮನೆಯ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನವಾಜ್ ಶರೀಫ್ ಮರಳಿ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಕೊಡಿಗೇಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ ಜೈಲಿನಲ್ಲಿದ್ದುಕೊಂಡೇ ಪತ್ನಿ ಜೊತೆ ವೀಡಿಯೋ ಕಾಲ್ನಲ್ಲಿ ರೊಮ್ಯಾನ್ಸ್! ವೀಡಿಯೋ ವೈರಲ್
ಘಟನೆಗೆ ಸಂಬಂಧಿಸಿದಂತೆ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿನ್ನೆಯೇ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ನಡೆಸಿರುವ ಪೊಲೀಸರು, ಬಳಿಕ ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ. ಅನುಮಾನದ ಸುಳಿಗೆ ಸಿಲುಕಿ ಮೂರು ವರ್ಷಗಳ ಸಂಬಂಧವೊಂದು ಹೀಗೆ ದುರಂತಮಯವಾಗಿ ಕೊನೆಗೊಂಡಿರುವುದು ಸ್ಥಳೀಯರಲ್ಲಿ ವಿಷಾದ ಮೂಡಿಸಿದೆ.
ವರದಿ: ವಿಕಾಸ್, ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ