ವಚನಾನಂದ ಸ್ವಾಮೀಜಿ ಉಚ್ಛಾಟನೆ: ಕಠಿಣ ನಿರ್ಧಾರಕ್ಕೆ ಹಲವು ಕಾರಣ ಕೊಟ್ಟ ಧರ್ಮದರ್ಶಿ ಸಮಿತಿ

ವಚನಾನಂದ ಸ್ವಾಮೀಜಿ ಉಚ್ಛಾಟನೆ: ಕಠಿಣ ನಿರ್ಧಾರಕ್ಕೆ ಹಲವು ಕಾರಣ ಕೊಟ್ಟ ಧರ್ಮದರ್ಶಿ ಸಮಿತಿ

ದಾವಣಗೆರೆ, ಏಪ್ರಿಲ್​​ 13: ಪಂಚಮಸಾಲಿ ಗುರುಪೀಠದಿಂದ ವಚನಾನಂದ ಸ್ವಾಮೀಜಿ ಅವರನ್ನು ಉಚ್ಛಾಟನೆ ಮಾಡಲಾಗಿದ್ದು, ಧರ್ಮದರ್ಶಿ ಸಮಿತಿ ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಈ ಬಗ್ಗೆ ಪರ-ವಿರೋಧ ಚರ್ಚೆಗಳು ಆರಂಭವಾಗಿರುವ ನಡುವೆ ಶ್ರೀಗಳ ಉಚ್ಛಾಟನೆಯ ನಿರ್ಧಾರಕ್ಕೆ ಪ್ರಮುಖ ಕಾರಣಗಳು ಏನು ಎಂಬುದನ್ನು ಸಮಿತಿ ಬಹಿರಂಗಪಡಿಸಿದ್ದು, ಸಾಲು ಸಾಲು ಆರೋಪಗಳನ್ನು ಮಾಡಿದೆ. ಇದೇ ಕಾರಣಕ್ಕೆ ಪದಚ್ಯುತಿಯ ನಿರ್ಧಾರ ಕೈಗೊಳ್ಳಬೇಕಾಯಿತು ಎಂದು ಸಮರ್ತಿಸಿಕೊಂಡಿದೆ.

ಶ್ರೀಗಳ ಮೇಲೆ ಸಮಿತಿಯ ಆರೋಪಗಳೇನು?

  • ಪೀಠಾರೋಹಣಕ್ಕೂ ಮೊದಲು ಬೆಂಗಳೂರಿನಲ್ಲಿ ನಡೆಸುತ್ತಿದ್ದ ‘ಶ್ವಾಸ ಕೇಂದ್ರ’ದ ಚಟುವಟಿಕೆಗಳಿಂದ ಸಂಪೂರ್ಣವಾಗಿ ಹೊರಬರುವುದಾಗಿ ಒಪ್ಪಿಕೊಂಡಿದ್ದರೂ, ಪೀಠಕ್ಕೆ ಬಂದ ನಂತರವೂ ಅಲ್ಲಿನ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹರಿಹರದ ಪೀಠದಲ್ಲಿ ನೆಲೆಸಿ ಭಕ್ತರಿಗೆ ದರ್ಶನ ನೀಡುವ ಬದಲು, ನಿರಂತರವಾಗಿ ಬೆಂಗಳೂರಿನ ಶ್ವಾಸ ಕೇಂದ್ರಕ್ಕೆ ಭೇಟಿ ನೀಡುವುದು ಮತ್ತು ಅಲ್ಲಿಯೇ ವಾರಗಟ್ಟಲೆ ವಾಸ್ತವ್ಯ ಹೂಡಿ ವ್ಯವಹಾರ ನಡೆಸುತ್ತಿದ್ದಾರೆ. ಶ್ವಾಸ ಕೇಂದ್ರದ ಸಂಪರ್ಕ ಕಡಿದುಕೊಳ್ಳಲು 24.03.2026 ರವರೆಗೆ ಅಂತಿಮ ಗಡುವು ನೀಡಿದ್ದರೂ, ಅದನ್ನು ಪಾಲಿಸದೆ ಸಮಾಜವನ್ನು ಒಡೆಯುವ ಕೆಲಸಕ್ಕೆ ಕೈ ಹಾಕಿದ್ದಾರೆ.
  • ಹರಜಾತ್ರೆಯ ಹೆಸರಿನಲ್ಲಿ ಭಕ್ತರಿಂದ ಮತ್ತು ದಾನಿಗಳಿಂದ ಆಡಳಿತ ಮಂಡಳಿಗೆ ತಿಳಿಯದಂತೆ ಗೌಪ್ಯವಾಗಿ ಹಣ ವಸೂಲಿ ಮಾಡಿ ಜವಾಬ್ದಾರಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಪೀಠಕ್ಕೆ ಬರುವ ಗುರುಕಾಣಿಕೆ ಮತ್ತು ಭಕ್ತರ ಕಾಣಿಕೆಗಳನ್ನು ಮಠದ ಟ್ರಸ್ಟ್‌ಗೆ ವರ್ಗಾಯಿಸದೆ, ರಹಸ್ಯವಾಗಿ ತಮ್ಮ ವೈಯಕ್ತಿಕ ‘ಶ್ವಾಸ ಕೇಂದ್ರ’ದ ಅಭಿವೃದ್ಧಿಗೆ ಬಳಸುತ್ತಿದ್ದಾರೆ. ತಮ್ಮ ಪೀಠದ ಬಲವನ್ನು ಉಪಯೋಗಿಸಿಕೊಂಡು ಅಧಿಕಾರಿಗಳನ್ನು ಹೆದರಿಸಿ ಅವರಿಂದ ಹಣ ವಸೂಲಿ ಮಾಡುತ್ತಿರುವ ಘಟನೆಗಳು ನಡೆದಿವೆ. ಐಷಾರಾಮಿ ಜೀವನ ಮತ್ತು ವಿದೇಶ ಪ್ರವಾಸಗಳಿಗೆ ಅವರು ಬಳಸುತ್ತಿರುವ ಹಣದ ಮೂಲದ ಬಗ್ಗೆ ಟ್ರಸ್ಟ್ ಕೇಳಿದ ಪ್ರಶ್ನೆಗಳಿಗೆ ಯಾವುದೇ ಉತ್ತರ ನೀಡಿಲ್ಲ
  • ಮಠದ ವಸತಿ ನಿಲಯದಲ್ಲಿದ್ದ ಅನಾಥ ಮತ್ತು ಬಡ ಮಕ್ಕಳಿಂದ ನಿರಂತರವಾಗಿ ಮಸಾಜ್ ಮಾಡಿಸಿಕೊಳ್ಳುವ ವಿಕೃತಿ ತೋರುತ್ತಿದ್ದರು. ಮಕ್ಕಳಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿ ಕಿರುಕುಳ ನೀಡುತ್ತಿದ್ದರು. ಇದರಿಂದಾಗಿ ಮಠದಲ್ಲಿದ್ದ 60 ಮಕ್ಕಳ ಸಂಖ್ಯೆ ಈಗ ಕೇವಲ 5ಕ್ಕೆ ಇಳಿದಿದೆ.
  • ವೀರಶೈವ ಲಿಂಗಾಯತ ಸಂಪ್ರದಾಯಗಳನ್ನು ಗಾಳಿಗೆ ತೂರಿ, ತಾವು ‘ಅಘೋರಿ ಮತ್ತು ವಾಮಾಚಾರಿ ವಿದ್ಯೆಯಲ್ಲಿ ಪರಿಣಿತ’ ಎಂದು ಹೇಳಿಕೊಂಡು ಮಠದ ಆವರಣದಲ್ಲಿಯೇ ಅಂತಹ ಪೂಜೆಗಳನ್ನು ನಡೆಸಿದ್ದಾರೆ. ಪ್ರತಿನಿತ್ಯ ಪ್ರಾತಃಕಾಲದಲ್ಲಿ ಇಷ್ಟಲಿಂಗ ಪೂಜೆ ಮಾಡುವುದು ಕಡ್ಡಾಯವಾಗಿದ್ದರೂ, ಅವರು ಎಂದಿಗೂ ಇಷ್ಟಲಿಂಗ ಪೂಜೆ ಮಾಡಿಲ್ಲ.
  • ಸಾರ್ವಜನಿಕ ಸಭೆಗಳಲ್ಲಿ ಮತ್ತು ಭಕ್ತರ ಜೊತೆ ಮಾತನಾಡುವಾಗ ಅತ್ಯಂತ ಅಸಭ್ಯ, ಕೆಟ್ಟ ಮತ್ತು ಅಶ್ಲೀಲ ಪದಗಳನ್ನು ಬಳಸುತ್ತಿದ್ದಾರೆ. ಮಠದ ಸಿಬ್ಬಂದಿ ಮತ್ತು ಪೂಜಾರಿಗಳ ಜೊತೆ ಹೀನಾಯವಾಗಿ ನಡೆದುಕೊಂಡು ಅವರಿಗೆ ಗೌರವ ನೀಡದೆ ಕಿರುಕುಳ ನೀಡುತ್ತಿದ್ದರು; ಈ ಕಾರಣದಿಂದ ಮಠದ ಪೂಜಾರಿಗಳು ಮತ್ತು ಸಿಬ್ಬಂದಿ ಕೆಲಸ ಬಿಟ್ಟು ಹೋಗಿದ್ದಾರೆ. ಭಕ್ತರಿಗೆ ಭೇಟಿಯಾಗಲು ಸಮಯ ನೀಡುವುದಿಲ್ಲ ಮತ್ತು ಅಪ್ಪಿತಪ್ಪಿ ಸಿಕ್ಕಿದರೂ ಅವರ ಜೊತೆ ಅಸಭ್ಯವಾಗಿ ವರ್ತಿಸುತ್ತಾರೆ.
  • ಸಮಾಜ ವಿರೋಧಿ ಮತ್ತು ಸಂಚಿನ ಚಟುವಟಿಕೆಗಳು ಸಮಾಜದ ಭಕ್ತರಲ್ಲಿ ಭಿನ್ನಾಭಿಪ್ರಾಯ ಮೂಡಿಸಿ ಸಮಾಜವನ್ನು ಒಡೆಯುವ ಮತ್ತು ದ್ವೇಷ ಹರಡುವ ಕೆಲಸ ಮಾಡುತ್ತಿದ್ದಾರೆ. ತಮ್ಮದೇ ಆದ ಒಂದು ಖಾಸಗಿ ಪಡೆಯನ್ನು ನಿರ್ಮಿಸಿಕೊಂಡು, ಮಠದ ಅಧಿಕೃತ ಆಡಳಿತ ಮಂಡಳಿಯ ವಿರುದ್ಧವಾಗಿ ತಾಲ್ಲೂಕು ಮತ್ತು ಜಿಲ್ಲಾ ಪದಾಧಿಕಾರಿಗಳಿಗೆ ಹಣದ ಆಮಿಷವೊಡ್ಡಿ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ.
  • ಲೌಕಿಕ ವ್ಯಾಮೋಹ ಮತ್ತು ಐಷಾರಾಮಿ ಜೀವನ ಸನ್ಯಾಸತ್ವ ಸ್ವೀಕರಿಸಿದ್ದರೂ ಸಹ ಸುಂದರವಾಗಿ ಕಾಣಬೇಕೆಂದು ತಮ್ಮ ತಲೆಗೂದಲು ಮತ್ತು ಗಡ್ಡಕ್ಕೆ ಬಣ್ಣ ಹಚ್ಚಿಕೊಳ್ಳುವ ಲೌಕಿಕ ಕೆಲಸಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಬೆಂಗಳೂರಿನಂತಹ ನಗರಗಳಲ್ಲಿ ಪಂಚತಾರಾ ಹೋಟೆಲ್‌ಗಳಲ್ಲಿ ಐಷಾರಾಮಿ ಜೀವನ ನಡೆಸಲು ಉತ್ಸುಕರಾಗಿರುತ್ತಾರೆ. ವರ್ಷದಲ್ಲಿ ಹಲವಾರು ಬಾರಿ ವಿದೇಶ ಪ್ರವಾಸ ಕೈಗೊಂಡು 20 ರಿಂದ 40 ದಿನಗಳ ಕಾಲ ಅಲ್ಲಿಯೇ ಉಳಿಯುತ್ತಾರೆ; ಇದರಿಂದ ಸಮಾಜಕ್ಕಾಗಲೀ ಮಠಕ್ಕಾಗಲೀ ಯಾವುದೇ ಪ್ರಯೋಜನವಿಲ್ಲ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *