‘ವರ್ಕ್ ಫ್ರಂ ಹೋಂ’ ಹೆಸರಲ್ಲಿ ಕೋಟಿ ಕೋಟಿ ವಂಚಿಸಿದ್ದ ಖತರ್ನಾಕ್ ದಂಪತಿ ದೇವನಹಳ್ಳಿ ಪೊಲೀಸರ ವಶ!
ದೇವನಹಳ್ಳಿ, ಆಗಸ್ಟ್ 07: ಇನ್‌ಸ್ಟಾಗ್ರಾಂ ರೀಲ್ಸ್ ಮೂಲಕ ‘ವರ್ಕ್ ಫ್ರಂ ಹೋಂ’ (Work From Home) ಕೆಲಸದ ಆಸೆ ತೋರಿಸಿ ಸಾರ್ವಜನಿಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ಖತರ್ನಾಕ್ ದಂಪತಿಯನ್ನು ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕಿರಣ್ ಮತ್ತು ಆತನ ಪತ್ನಿ ಆರತಿ ಎಂದು ಗುರುತಿಸಲಾಗಿದೆ. ಈ ದಂಪತಿ ‘ಕಾಳಿಕಾ ದೇವಿ ಎಂಟರ್ ಪ್ರೈಸಸ್’ ಎಂಬ ಹೆಸರಿನಲ್ಲಿ ನಕಲಿ ಸಂಸ್ಥೆ ತೆರೆದು ಸಾವಿರಾರು ಜನರಿಗೆ ಮೋಸ ಮಾಡಿದ್ದಾರೆ.
ರೀಲ್ಸ್ ಮೂಲಕ ಬಲೆ
ಆರೋಪಿ ಕಿರಣ್ ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡುವ ಮೂಲಕ ಮನೆಬಾಗಿಲಿಗೇ ಕೆಲಸ ನೀಡುವುದಾಗಿ ಜಾಹೀರಾತು ನೀಡುತ್ತಿದ್ದ. ಮೇಣದ ಬತ್ತಿ, ಡ್ರೈ ಫ್ರೂಟ್ಸ್ ಹಾಗೂ ಅಗರಬತ್ತಿ ಪ್ಯಾಕಿಂಗ್ ಮಾಡುವ ಸುಲಭದ ಕೆಲಸ ನೀಡುವುದಾಗಿ ಜನರನ್ನು ನಂಬಿಸುತ್ತಿದ್ದ. ಕಚ್ಚಾ ಪದಾರ್ಥಗಳ ಪ್ಯಾಕಿಂಗ್ ಕೆಲಸಕ್ಕಾಗಿ ಒಮ್ಮೆ 1 ಲಕ್ಷ ರೂಪಾಯಿ ಡೆಪಾಸಿಟ್ ಮಾಡಿದರೆ, ಪ್ರತಿ ತಿಂಗಳು 23 ಸಾವಿರ ರೂಪಾಯಿ ಸಂಬಳ ಕೊಡುವುದಾಗಿ ಆಮಿಷ ಒಡ್ಡಿದ್ದ.
ಲಕ್ಷ ಲಕ್ಷ ಹಣ ಪಡೆದು ವಂಚನೆ
ದಂಪತಿಯ ಮಾತುಗಳನ್ನು ಸತ್ಯವೆಂದು ನಂಬಿದ ಸಾರ್ವಜನಿಕರು, ಸಾಲ ಸೂಲ ಮಾಡಿ ಒಬ್ಬೊಬ್ಬರಿಂದ 2 ಲಕ್ಷದಿಂದ ಹಿಡಿದು ಬರೋಬ್ಬರಿ 20 ಲಕ್ಷ ರೂಪಾಯಿವರೆಗೂ ಹಣವನ್ನು ಡೆಪಾಸಿಟ್ ಮಾಡಿದ್ದರು. ದೇವನಹಳ್ಳಿ, ದೊಡ್ಡಬಳ್ಳಾಪುರ, ಚಿಕ್ಕಜಾಲ ಹಾಗೂ ಕೋಲಾರ ಸೇರಿದಂತೆ ಹಲವು ಭಾಗಗಳ ನೂರಾರು ಜನರು ಈ ದಂಪತಿಯ ಮಾಯದ ಬಲೆಗೆ ಬಿದ್ದಿದ್ದಾರೆ. ಹಣ ಪಡೆದ ಬಳಿಕ ದಂಪತಿ ಕೆಲಸವನ್ನೂ ನೀಡದೆ, ಠೇವಣಿ ಹಣವನ್ನೂ ಮರುಪಾವತಿಸದೆ ಕೋಟ್ಯಂತರ ರೂಪಾಯಿ ವಂಚಿಸಿ ತಲೆಮರೆಸಿಕೊಂಡಿದ್ದರು.
ಕಳೆದ ಕೆಲವು ತಿಂಗಳಿಂದ ಕೆಲಸವೂ ಇಲ್ಲದೆ, ಕಟ್ಟಿದ ಹಣವೂ ಸಿಗದೆ ಕಂಗಾಲಾಗಿದ್ದ ಸಂತ್ರಸ್ತರು ದೇವನಹಳ್ಳಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಸಾರ್ವಜನಿಕರ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿಕೊಂಡ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಠಾಣಾ ಪೊಲೀಸರು, ಕಾರ್ಯಾಚರಣೆ ನಡೆಸಿ ತಲೆಮರೆಸಿಕೊಂಡಿದ್ದ ದಂಪತಿಯನ್ನು ಬಂಧಿಸಿದ್ದಾರೆ. ಸಾರ್ವಜನಿಕರಿಂದ ದೋಚಲಾದ ಕೋಟಿ ಕೋಟಿ ಹಣದ ಲೇವಾದೇವಿ ಕುರಿತು ಪೊಲೀಸರು ಸದ್ಯ ತೀವ್ರ ತನಿಖೆ ಕೈಗೊಂಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
