ಬೆಂಗಳೂರು, ಜುಲೈ 21: ವಾಟ್ಸಾಪ್‌ನಲ್ಲಿ ಎಪಿಕೆ ಫೈಲ್ (APK File)ರೂಪದಲ್ಲಿ ಬಂದಿದ್ದ ನಕಲಿ ಮದುವೆ ಆಮಂತ್ರಣವನ್ನು (Wedding Card) ಕ್ಲಿಕ್ ಮಾಡಿದ ಪರಿಣಾಮ ಅರಣ್ಯ ಇಲಾಖೆಯ ನೌಕರರೊಬ್ಬರು ಸುಮಾರು 9.96 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ (Bengaluru) ವರದಿಯಾಗಿದೆ. ಈ ಸಂಬಂಧ ಉತ್ತರ ವಿಭಾಗದ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪರಿಚಿತ ಸೈಬರ್ ವಂಚಕರ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದರೊಂದಿಗೆ ಸೈಬರ್ ವಂಚಕರು ಹೊಸ ಹೊಸ ವಿಧಾನದ ಮೂಲಕ ಜನರನ್ನು ವಂಚಿಸುತ್ತಿರುವುದು ಬೆಳಕಿಗೆ ಬಂದಂತಾಗಿದೆ.
ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಬಂತು ಮದುವೆ ಆಮಂತ್ರಣ
ದೂರುದಾರ ರಮೇಶ್ ಅವರಿಗೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ವಾಟ್ಸಾಪ್‌ನಲ್ಲಿ ಮದುವೆ ಆಮಂತ್ರಣದ ಹೆಸರಿನಲ್ಲಿ ಎಪಿಕೆ ಫೈಲ್ ಕಳುಹಿಸಲಾಗಿತ್ತು. ಅದು ಸಾಮಾನ್ಯ ಆಹ್ವಾನ ಪತ್ರಿಕೆ ಎಂದು ಭಾವಿಸಿ ಅವರು ಕ್ಲಿಕ್ ಮಾಡಿದ್ದರು. ತಕ್ಷಣವೇ ಎಪಿಕೆ ಫೈಲ್ ಡ್ಔನ್ಲೋಡ್ ಆಗಿದ್ದು, ಅವರ ಬ್ಯಾಂಕ್ ಖಾತೆಯಿಂದ ಹಂತಹಂತವಾಗಿ ಹಣ ಡೆಬಿಟ್ ಆಗಿರುವ ಸಂದೇಶಗಳು ಬಂದಿವೆ.
ಲಕ್ಷಾಂತ ರೂ. ಕಳಕೊಂಡ ಬಳಿಕ ತಿಳಿದ ಸತ್ಯ
ಒಟ್ಟಾರೆ 9 ಲಕ್ಷ 96 ಸಾವಿರ ರೂಪಾಯಿ ಖಾತೆಯಿಂದ ವರ್ಗಾವಣೆಯಾದ ಬಳಿಕ ತಾವು ಸೈಬರ್ ವಂಚನೆಗೆ ಒಳಗಾಗಿರುವುದು ರಮೇಶ್ ಅವರಿಗೆ ಗೊತ್ತಾಗಿದೆ. ಬಳಿಕ ಅವರು ಬೆಂಗಳೂರಿನ ಉತ್ತರ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಅಪರಿಚಿತರಿಂದ ಬಂದ ಫೈಲ್ಗಳನ್ನು ಕ್ಲಿಕ್ ಮಾಡಬೇಡಿ
ಅಪರಿಚಿತ ವ್ಯಕ್ತಿಗಳಿಂದ ಬರುವ APK ಫೈಲ್‌ಗಳು, ಲಿಂಕ್‌ಗಳು ಅಥವಾ ಮದುವೆ ಆಮಂತ್ರಣಗಳ ಹೆಸರಿನಲ್ಲಿರುವ ಅಪ್ಲಿಕೇಶನ್‌ಗಳನ್ನು ಯಾವುದೇ ಕಾರಣಕ್ಕೂ ಡೌನ್‌ಲೋಡ್ ಅಥವಾ ಓಪನ್ ಮಾಡಬಾರದು ಎಂದು ಸಾರ್ವಜನಿಕರಿಗೆ ಸೈಬರ್ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ವಾಟ್ಸ್ಆ್ಯಪ್ನಲ್ಲಿ ಹರಿದಾಡುತ್ತಿದೆ ಆರ್ಟಿಒ ಚಲನ್ ಸ್ಕ್ಯಾಮ್: ಈರೀತಿ ಮೆಸೇಜ್ ಬಂದರೆ ಎಚ್ಚರ
ಈ ಹಿಂದೆ, ಬ್ಯಾಂಕ್ಗಳ ಹೆಸರಿನಲ್ಲಿ ಎಪಿಕೆ ಫೈಲ್ ಕಳುಹಿಸಿ ವಂಚಿಸುತ್ತಿದ್ದ ಅನೇಕ ಪ್ರಕರಣಗಳು ವರದಿಯಾಗಿದ್ದವು. ಆ ನಂತರ, ಟ್ರಾಫಿಕ್ ಚಲನ್ ಹೆಸರಿನಲ್ಲಿ ಎಪಿಕೆ ಫೈಲ್ಗಳನ್ನು ವಾಟ್ಸಾಪ್‌ನಲ್ಲಿ ಕಳುಹಿಸಿ ವಂಚಿಸಿದ ಅನೇಕ ಪ್ರಕರಣಗಳು ವರದಿಯಾಗಿದ್ದವು. ಇದೀಗ ಮದುವೆ ಆಮಂತ್ರಣದ ಎಪಿಕೆ ಫೈಲ್ ಕಳುಹಿಸಿ ವಂಚಿಸಲಾಗುತ್ತಿದೆ. ಮದುವೆ ಆಮಂತ್ರಣ, ನೋಡೋಣ ಎಂದು ಕ್ಲಿಕ್ ಮಾಡಿದರೆ ಎಪಿಕೆ ಫೈಲ್ ಮೊಬೈಲ್ನಲ್ಲಿ ಡೌನ್‌ಲೋಡ್ ಆಗಿ ಮೊಬೈಲ್ ಹ್ಯಾಕ್ ಆಗುತ್ತದೆ. ಇದರಿಂದ ಮೊಬೈಲ್ನಲ್ಲಿರುವ ದತ್ತಾಂಶಗಳು ಸೈಬರ್ ವಂಚಕರ ಪಾಲಾಗಿ ಅವರು ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಕದಿಯಬಹುದು. ಹೀಗಾಗಿ ಎಚ್ಚರ ವಹಿಸಿ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
