ಪೊಲೀಸರು ವಶಪಡಿಸಿಕೊಂಡ ಬೈಕ್ಗಳು ಹಾಗೂ ಒಳಚಿತ್ರದಲ್ಲಿ ಸಿದ್ದಾರೆಡ್ಡಿ ಅಲಿಯಾಸ್ ‘ಸ್ಪ್ಲೆಂಡರ್’ ಸಿದ್ದಾರೆಡ್ಡಿImage Credit source: tv9
ಬಳ್ಳಾರಿ, ಜೂನ್ 24: ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣಗಳನ್ನು ಬಯಲಿಗೆಳೆಯಲು ಬಳ್ಳಾರಿಯ (Ballari) ಸಿರಗುಪ್ಪ ತಾಲೂಕು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಕುಖ್ಯಾತ ಬೈಕ್ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳ್ಳಾರಿಯ ಅಹಂಬಾವಿ ನಗರದ ನಿವಾಸಿ, ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ ಸಿದ್ದಾರೆಡ್ಡಿ ಅಲಿಯಾಸ್ ‘ಸ್ಪ್ಲೆಂಡರ್’ ಸಿದ್ದಾರೆಡ್ಡಿ ಬಂಧಿತ ಆರೋಪಿ. ಈತನಿಂದ ಬರೋಬ್ಬರಿ 20.50 ಲಕ್ಷ ರೂಪಾಯಿ ಮೌಲ್ಯದ ವಿವಿಧ ಕಂಪನಿಗಳ 41 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆಟೋ ಚಾಲಕ ಬೈಕ್ ಕಳ್ಳನಾಗಿದ್ದು ಹೇಗೆ ಗೊತ್ತೇ?
ಕಳೆದ ಜೂನ್ 2 ರಂದು ಸಿರಗುಪ್ಪ ಪೊಲೀಸ್ ಠಾಣೆಯಲ್ಲಿ ದ್ವಿಚಕ್ರ ವಾಹನ ಕಳ್ಳತನದ ಬಗ್ಗೆ ಪ್ರಕರಣವೊಂದು ದಾಖಲಾಗಿತ್ತು. ಈ ಪ್ರಕರಣದ ಬೆನ್ನತ್ತಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳು ಹಾಗೂ ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಆರೋಪಿ ಸಿದ್ದಾರೆಡ್ಡಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ. ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಕಳೆದ ಒಂದೂವರೆ ವರ್ಷದಿಂದ ಬೈಕ್ ಕಳ್ಳತನದಲ್ಲಿ ತೊಡಗಿರುವ ವಿಷಯ ಬಾಯ್ಬಿಟ್ಟಿದ್ದಾನೆ. ಪ್ರತಿ ವಾರಕ್ಕೊಂದು ಬೈಕ್ ಕದಿಯುವುದನ್ನೇ ಈತ ತನ್ನ ಕಾಯಕವನ್ನಾಗಿ ಮಾಡಿಕೊಂಡಿದ್ದ.
ನಕಲಿ ಆರ್‌ಸಿ ದಂಧೆ ಮತ್ತು ರೈತರೇ ಟಾರ್ಗೆಟ್
ಹಗಲು ಹೊತ್ತಿನಲ್ಲಿ ನಕಲಿ ಕೀ ಬಳಸಿ ಬೈಕ್‌ಗಳನ್ನು ಕದಿಯುತ್ತಿದ್ದ ಈತ, ಬಳಿಕ ಅವುಗಳ ಮೂಲ ನಂಬರ್ ಪ್ಲೇಟ್ ಕಿತ್ತು ಹಾಕುತ್ತಿದ್ದ. ಆನಂತರ ಬೇರೊಂದು ಬೈಕ್‌ನ ನಂಬರ್ ಪ್ಲೇಟ್ ಫೋಟೋ ತೆಗೆದುಕೊಂಡು, ‘ಕರ್ನಾಟಕ ಒನ್’ ಕೇಂದ್ರದ ಮೂಲಕ ನಕಲಿ ಆರ್‌ಸಿ ಕಾರ್ಡ್‌ಗಳನ್ನು ಸೃಷ್ಟಿಸುತ್ತಿದ್ದ. ಹೀಗೆ ಸೃಷ್ಟಿಸಿದ ನಕಲಿ ದಾಖಲೆಗಳನ್ನು ತೋರಿಸಿ, ಕದ್ದ ಬೈಕ್‌ಗಳನ್ನು ಹಳ್ಳಿಗಳ ಅಮಾಯಕ ರೈತರಿಗೆ ಹಾಗೂ ಆಂಧ್ರಪ್ರದೇಶದ ಗಡಿ ಭಾಗದ ಜನರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ.
ನಾಲ್ಕು ಜಿಲ್ಲೆಗಳಲ್ಲಿ ಕೈಚಳಕ
ಬಳ್ಳಾರಿ ಜಿಲ್ಲೆಯಲ್ಲಿ 15, ಚಿತ್ರದುರ್ಗದಲ್ಲಿ 21, ವಿಜಯನಗರದಲ್ಲಿ 4 ಹಾಗೂ ಆಂಧ್ರದ ಅನಂತಪುರದಲ್ಲಿ 1 ಬೈಕ್ ಸೇರಿದಂತೆ ಒಟ್ಟು 41 ಬೈಕ್‌ಗಳನ್ನು ಕದ್ದಿರುವುದಾಗಿ ವಿಚಾರಣೆ ವೇಳೆ ಆರೋಪಿ ಒಪ್ಪಿಕೊಂಡಿದ್ದಾನೆ.
ಇದನ್ನೂ ಓದಿ: ಸೋಲಾರ್ ಮನೆಗಳಿಗೆ ಬಿಗ್ ಶಾಕ್ ನೀಡಲು ಮುಂದಾಯ್ತಾ ಕೆಇಆರ್‌ಸಿ?: ಸರ್ಕಾರದ ದ್ವಂದ್ವ ನೀತಿ ವಿರುದ್ಧ ಸಿಟಿ ಜನ ಫುಲ್ ಗರಂ!
ಈ ಭರ್ಜರಿ ಕಾರ್ಯಾಚರಣೆ ನಡೆಸಿದ ಸಿರಗುಪ್ಪ ಪೊಲೀಸರ ಕಾರ್ಯವೈಖರಿಯನ್ನು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪೆನ್ನೇಕರ್ ಅವರು ಶ್ಲಾಘಿಸಿದ್ದು, ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪೊಲೀಸ್ ತಂಡಕ್ಕೆ ನಗದು ಬಹುಮಾನ ಘೋಷಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
